“ಸಂವಿಧಾನವು ಕಾನೂನಿನ ದಾಖಲೆ ಮಾತ್ರವಲ್ಲ, ಅದು ಸಾಮಾಜಿಕ ಒಡಂಬಡಿಕೆ ಮತ್ತು ನೈತಿಕತೆಯ ದಿಕ್ಸೂಚಿಯಾಗಿದೆ, ನ್ಯಾಯದಾನವೆಂಬುದು ಕಾಗದದ ಮೇಲಿನ ಭರವಸೆಯಾಗಿ ಉಳಿಯದೆ ಅದನ್ನು ವಾಸ್ತವದಲ್ಲಿ ಸಾಕಾರವಾಗುವಂತೆ ನೋಡಿಕೊಳ್ಳುವ ಮಾರ್ಗದರ್ಶಿ ತತ್ವವಾಗಿದೆ” ಎಂದು ನ್ಯಾಯಮೂರ್ತಿ ಕೆ ಸೋಮಶೇಖರ್ ಹೇಳಿದರು.
ಮಣಿಪುರ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡಿರುವ ಹಿನ್ನೆಲೆಯಲ್ಲಿ ನ್ಯಾ. ಸೋಮಶೇಖರ್ ಅವರಿಗೆ ಹೈಕೋರ್ಟ್‌ನ ಬೆಂಗಳೂರು ಪೀಠದ ಕೋರ್ಟ್ ಹಾಲ್ 1ರಲ್ಲಿ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.
“ಕಾನೂನಿನ ಘನತೆ ಮತ್ತು ಸಂವಿಧಾನದಲ್ಲಿ ಅಡಕಗೊಳಿಸಿರುವ ಪವಿತ್ರವಾದ ತತ್ವಗಳನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ನನಗೆ ನೀಡಿರುವ ಜವಾಬ್ದಾರಿಯನ್ನು ವಿನಮ್ರತೆಯಿಂದ ಸ್ವೀಕರಿಸುತ್ತೇನೆ. ಪ್ರಜಾಪ್ರಭುತ್ವ ರಾಜಕಾರಣದ ಮೂಲ ನಿಯಮ ಸಂವಿಧಾನವಾಗಿದೆ. ಸಂವಿಧಾನವು ಪ್ರಭುತ್ವದ ಎಲ್ಲ ಅಂಗಗಳನ್ನು ಬೆಸೆಯುತ್ತದೆ, ಅದರಲ್ಲಿಯೂ ವಿಶೇಷವಾಗಿ ನ್ಯಾಯಾಂಗದಲ್ಲಿನ ಕಾನೂನಾತ್ಮಕ ಆಡಳಿತ, ಜನರ ಹಕ್ಕುಗಳ ರಕ್ಷಣೆಯನ್ನು ಬೆಸೆಯುವ ಮೂಲಕ ನ್ಯಾಯವು ಸವಲತ್ತಲ್ಲ, ಬದಲಿಗೆ ಅದು ಎಲ್ಲರಿಗೂ ಲಭ್ಯವಿರುವ ಹಕ್ಕು ಎನ್ನುವುದನ್ನು ಖಾತರಿಪಡಿಸುತ್ತದೆ" ಎಂದರು.
“ಸಾಂವಿಧಾನಿಕ ಕರ್ತವ್ಯಕ್ಕೆ ಹೆಗಲು ಕೊಡುತ್ತಿರುವ ಈ ಸಂದರ್ಭದಲ್ಲಿ ನ್ಯಾಯಾಂಗವು ನನ್ನ ಮೇಲೆ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ಮೌಲ್ಯಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಇಟ್ಟಿರುವ ನಿರೀಕ್ಷೆಯ ಬಗ್ಗೆ ನನಗೆ ಅರಿವಿದೆ. ನ್ಯಾಯಾಂಗ ಸ್ವಾತಂತ್ರ್ಯ, ಕಾನೂನಿನ ಮುಂದೆ ಸಮಾನತೆಯನ್ನು ಎತ್ತಿ ಹಿಡಿದು, ಬದುಕಿನ ಹಕ್ಕು ಮತ್ತು ಸ್ವಾತಂತ್ರ್ಯದ ಹಕ್ಕಿನ ರಕ್ಷಣೆ, ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ತತ್ವಕ್ಕೆ ಬದ್ಧವಾಗಿ ಮಣಿಪುರ ಹೈಕೋರ್ಟ್‌ನಲ್ಲಿ ನನ್ನ ಸಾಂವಿಧಾನಿಕ ಕರ್ತವ್ಯ ನಿಭಾಯಿಸುತ್ತೇನೆ” ಎಂದರು.
“ಈ ಕ್ಷಣವು ನನ್ನ ನ್ಯಾಯಾಂಗ ಸೇವೆಯ ಪಯಣದಲ್ಲಿ ಅತ್ಯಂತ ಮಹತ್ವದ್ದಾಗಿದ್ದು ಅಗಾಧವಾದ ಕೃತಜ್ಞತೆ ತಿಳಿಸಬಯಸುತ್ತೇನೆ. ಮಣಿಪುರದ ಜನರ ಸೇವೆ ಮಾಡಲು ಅವಕಾಶ ಕಲ್ಪಿಸಿದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ ಆರ್ ಗವಾಯಿ ಅವರ ನೇತೃತ್ವದ ಕೊಲಿಜಿಯಂ ಧನ್ಯವಾದಗಳನ್ನು ತಿಳಿಸಲು ಬಯಸುತ್ತೇನೆ. ಸಂವಿಧಾನ, ಕಾನೂನಿನ ನಿಯಮಕ್ಕೆ ನನ್ನ ನಿಷ್ಠೆಯನ್ನು ನಾನು ಪುನರುಚ್ಚರಿಸುತ್ತೇನೆ. ಈ ಸಂದರ್ಭದಲ್ಲಿ ದೇವರ ಅನುಗ್ರಹ, ಎಲ್ಲರ ಶ್ರೀರಕ್ಷೆಯ ನೆರವಿನಿಂದ ನನ್ನ ಕಚೇರಿ, ಪಾವಿತ್ರ್ಯತೆ ಎತ್ತಿ ಹಿಡಿದು, ಬಹುತ್ವದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನ್ಯಾಯದಾನ ವ್ಯವಸ್ಥೆಗೆ ಅರ್ಥಪೂರ್ಣ ಕೊಡುಗೆ ನೀಡುತ್ತೇನೆ” ಎಂದು ಹೇಳಿದರು.
ಇದಕ್ಕೂ ಮುನ್ನ, ಮುಖ್ಯ ನ್ಯಾಯಮೂರ್ತಿ ಎನ್ ವಿ ಅಂಜಾರಿಯಾ ಅವರು “ಪ್ರಕರಣಗಳ ವಿಚಾರಣೆಯ ಸಂದರ್ಭದಲ್ಲಿ ಸ್ಪಷ್ಟ, ನಿಖರ ಮತ್ತು ಮುಕ್ತವಾಗಿ ತಮ್ಮ ಅಭಿಪ್ರಾಯಗಳನ್ನು ನ್ಯಾ. ಸೋಮಶೇಖರ್ ವ್ಯಕ್ತಪಡಿಸುತ್ತಾರೆ. ಅವರ ನೆನಪುಗಳು ಈ ಹೈಕೋರ್ಟ್‌ನಲ್ಲಿ ಸದಾ ಇರಲಿವೆ” ಎಂದರು.
ರಾಜ್ಯ ವಕೀಲರ ಪರಿಷತ್ ಅಧ್ಯಕ್ಷ ಎಸ್ ಎಸ್ ಮಿಟ್ಟಲಕೋಡ, ಅಡ್ವೊಕೇಟ್ ಜನರಲ್ ಕೆ ಶಶಿಕಿರಣ್ ಶೆಟ್ಟಿ, ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ ಅರವಿಂದ್ ಕಾಮತ್, ಸಹಾಯಕ ಸಾಲಿಸಿಟರ್ ಜನರಲ್ ಎಚ್ ಶಾಂತಿಭೂಷಣ್, ಬೆಂಗಳೂರು ವಕೀಲರ ಸಂಘದ ಪದಾಧಿಕಾರಿಗಳು, ಸರ್ಕಾರಿ ವಕೀಲರು ಮತ್ತು ವಕೀಲರ ವೃಂದ ಕಾರ್ಯಕ್ರಮದಲ್ಲಿ ಹಾಜರಿದ್ದರು.