ಸುದ್ದಿಗಳು

[ದೇಶ್‌ಮುಖ್ ಪ್ರಕರಣ] ಸಂವಿಧಾನವು ಕಾನೂನಾತ್ಮಕ ಆಡಳಿತದ ಪರವೇ ವಿನಾ ಗೂಂಡಾ ಆಡಳಿತದ ಪರವಲ್ಲ ಎಂದ ಬಾಂಬೆ ಹೈಕೋರ್ಟ್‌

Bar & Bench

ಮಹಾರಾಷ್ಟ್ರದ ಮಾಜಿ ಗೃಹಸಚಿವ ಅನಿಲ್‌ ದೇಶ್‌ಮುಖ್‌ ವಿರುದ್ಧದ ಆರೋಪಗಳ ಬಗ್ಗೆ ಸಿಬಿಐ ಪ್ರಾಥಮಿಕ ತನಿಖೆಗೆ ಅವಕಾಶ ನೀಡಿದ ಬಾಂಬೆ ಹೈಕೋರ್ಟ್‌ “ಸಚಿವರೊಬ್ಬರು ಭ್ರಷ್ಟಾಚಾರ ಎಸಗಿದ ಬಗ್ಗೆ ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಬಹಿರಂಗವಾಗಿ ಆರೋಪಗಳನ್ನು ಮಾಡಿದ್ದು ಕಂಡು ಕೇಳರಿಯದ ಘಟನೆಯಾಗಿದೆ” ಎಂದು ಹೇಳಿದೆ.

ಮುಂಬೈ ಪೊಲೀಸ್ ಮಾಜಿ ಆಯುಕ್ತ ಪರಮ್ ಬಿರ್ ಸಿಂಗ್ ಪರ ಹಾಜರಾದ ಹಿರಿಯ ವಕೀಲ ವಿಕ್ರಮ್ ನಂಕಣಿ ಹಾಗೂ ಪ್ರಕರಣದ ಮತ್ತೊಬ ಅರ್ಜಿದಾರರ ಪರವಾಗಿ ಹಾಜರಾದ ವಕೀಲ ಸುಭಾಷ್‌ ಝಾ ಅವರ “ಕಂಡು ಕೇಳರಿಯದ ಪ್ರಕರಣವೊಂದು ನ್ಯಾಯಾಲಯದ ಮುಂದಿದೆ” ಎಂಬ ಮಾತನ್ನು ಮುಖ್ಯ ನ್ಯಾಯಮೂರ್ತಿ ದೀಪಂಕರ್ ದತ್ತಾ ಮತ್ತು ನ್ಯಾಯಮೂರ್ತಿ ಜಿ ಎಸ್ ಕುಲಕರ್ಣಿ ಅವರಿದ್ದ ಪೀಠ ಒಪ್ಪಿತು.

“ಯಾರೇ ಆದರೂ ಅವನು ಎಷ್ಟೇ ಉನ್ನತ ಹುದ್ದೆ ಹೊಂದಿದ್ದರೂ ಯಾವುದೇ ಉಲ್ಲಂಘನೆಯಾದಾಗ ಸಾಂವಿಧಾನಿಕ ನ್ಯಾಯಾಲಯಗಳು ಸಂವಿಧಾನದ ಆದರ್ಶಗಳನ್ನು ಎತ್ತಿಹಿಡಿಯುತ್ತಲೇ ಇರುತ್ತವೆ ಮತ್ತು ಸಂವಿಧಾನದ ತತ್ವಗಳನ್ನು ರಕ್ಷಿಸಲು ಹೆಜ್ಜೆ ಇಡುತ್ತಲೇ ಇರುತ್ತವೆ" ಎಂದು ನ್ಯಾಯಾಲಯ ಒತ್ತಿ ಹೇಳಿತು.

ಸಂವಿಧಾನವು ಕಾನೂನು ಆಧರಿತ ಆಡಳಿತ ವ್ಯವಸ್ಥೆ (ರೂಲ್‌ ಆಫ್‌ ಲಾ) ರೂಪಿಸುತ್ತದೆಯೇ ವಿನಾ ರಾಜಕೀಯ ಬೆಂಬಲಿತ ಗೂಂಡಾ ಆಡಳಿತವನ್ನಲ್ಲ.
- ಬಾಂಬೆ ಹೈಕೋರ್ಟ್

ರಾಜ್ಯದ ಅತ್ಯುನ್ನತ ಹುದ್ದೆ ಅಲಂಕರಿಸಿದ ವ್ಯಕ್ತಿಯ (ದೇಶ್‌ಮುಖ್‌) ವಿರುದ್ಧ ಡಾ. ಜೈಶ್ರೀ ಲಕ್ಷ್ಮಣರಾವ್ ಪಾಟೀಲ್ ಅವರು ಮಲಬಾರ್ ಹಿಲ್ಸ್‌ ಪೊಲೀಸ್ ಠಾಣೆಗೆ ಸಲ್ಲಿಸಿದ ದೂರು ಗಂಭೀರ ಸ್ವರೂಪದ್ದಾಗಿದ್ದು ಪಾಟೀಲ್‌ ದೂರಿನ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಅಂಶವನ್ನು ಗಮನಿಸಿದ ನ್ಯಾಯಾಲಯ ಅಧಿಕಾರಿಗಳು ಕಾನೂನಿನ ಪ್ರಕಾರ ನಡೆದುಕೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿತು.

ಪಾಟೀಲ್‌ ಮಾಡಿರುವ ಆರೋಪಗಳಲ್ಲಿ ದೇಶ್‌ಮುಖ್‌ ಅವರು ಸಂಜ್ಞೇಯ ಅಪರಾಧ ಮಾಡಿರುವುದು ತಿಳಿದುಬರುತ್ತದೆ ಎಂದಿರುವ ನ್ಯಾಯಾಲಯ “ಸತ್ಯವನ್ನು ಬೆಳಕಿಗೆ ತರಲು ಮತ್ತು ಇದರ ಹಿಂದೆ ಯಾವುದಾದರೂ ಪೆಡಂಭೂತವಿದ್ದರೆ ಕಾನೂನಾತ್ಮಕ ವಿಚಾರಣೆ ಮೂಲಕ ಅದನ್ನು ಹೊರಗೆಳೆದು, ಅದರ ಮರ್ಯಾದೆ ತೆಗೆಯಲು ಪೂರ್ವಾಗ್ರಹಪೀಡಿತವಲ್ಲದ, ನಿಷ್ಪಕ್ಷಪಾತ, ನ್ಯಾಯಯುತ ಆದರೆ ಪರಿಣಾಕಾರಿ ತನಿಖೆಯ ಅಗತ್ಯ ಇದೆ” ಎಂದಿತು.

“ದೇಶ್‌ಮುಖ್‌ ಅವರು ಗೃಹಸಚಿವರಾಗಿದ್ದು ಅವರ ನಿಯಂತ್ರಣ ಮತ್ತು ನಿರ್ದೇಶನದಡಿ ಪೊಲೀಸ್‌ ಇಲಾಖೆ ಇರುತ್ತದೆ. ಪ್ರಕರಣವನ್ನು ರಾಜ್ಯ ಪೊಲೀಸರಿಗೆ ವಹಿಸಿದರೆ ನ್ಯಾಯಯುತ, ಪೂರ್ವಾಗ್ರಹಪೀಡತವಲ್ಲದ, ಪಕ್ಷಪಾತರಹಿತ ನಿಷ್ಕಳಂಕ ತನಿಖೆ ನಡೆಸಲು ಸಾಧ್ಯವಿಲ್ಲ. ಅವಶ್ಯಕತೆಗೆ ತಕ್ಕಂತೆ ಪ್ರಕರಣವನ್ನು ಸಿಬಿಐ ರೀತಿಯ ಸ್ವತಂತ್ರ ಏಜೆನ್ಸಿಗೆ ವಹಿಸಬೇಕಾಗಿದೆ” ಎಂದಿತು.

“ಮೇಲ್ನೋಟಕ್ಕೆ ಪೊಲೀಸ್‌ ಇಲಾಖೆಯ ಕಾರ್ಯಚಟುವಟಿಕೆಯಲ್ಲಿ ಪ್ರಜೆಗಳು ಇರಿಸಿರುವ ನಂಬಿಕೆ ಅಪಾಯದಲ್ಲಿದೆ. ಅಂತಹ ಯಾವುದೇ ಆರೋಪದಲ್ಲಿ ಸತ್ಯ ಇದ್ದರೆ ಅದು ಖಂಡಿತವಾಗಿಯೂ ರಾಜ್ಯದ ಪೊಲೀಸ್‌ ವ್ಯವಸ್ಥೆ ಮೇಲೆ ನಾಗರಿಕರು ಇರಿಸಿದ ವಿಶ್ವಾಸದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಅಂತಹ ಆರೋಪಗಳನ್ನು ಗಣನೆಗೆ ತೆಗೆದುಕೊಳ್ಳದೇ ಬಿಡಲಾಗದು….” ಎಂದು ನ್ಯಾಯಾಲಯ ತಿಳಿಸಿತು. ಅಲ್ಲದೆ ರಾಜ್ಯದ ಉನ್ನತ ಸಾರ್ವಜನಿಕ ಹುದ್ದೆ ಅಲಂಕರಿಸಿದವರ ವಿರುದ್ಧ ದೂರುಗಳು ಬಂದಾಗ ರಾಜ್ಯದ ಆಡಳಿತ ವ್ಯವಸ್ಥೆಯ ವಿಶ್ವಾಸ ಕಾಪಾಡಿಕೊಳ್ಳಬೇಕಿದ್ದು ಇಂತಹ ಸಂದರ್ಭದಲ್ಲಿ ಪ್ರೇಕ್ಷಕರಂತೆ ಕೂರಲಾಗದು ಎಂದು ಹೇಳಿತು.