ಸುಪ್ರೀಂ ಕೋರ್ಟ್ ರೀತಿಯ ಸಾಂವಿಧಾನಿಕ ನ್ಯಾಯಾಲಯ, ಜಾಮೀನು ಅರ್ಜಿ, ನಿಷ್ಪ್ರಯೋಜಕ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗಳ (ಪಿಐಎಲ್) ವಿಚಾರಣೆ ನಡೆಸಬಾರದು ಎಂದು ಕೇಂದ್ರ ಕಾನೂನು ಸಚಿವ ಕಿರೆನ್ ರಿಜಿಜು ಬುಧವಾರ ಹೇಳಿದರು.
ನವದೆಹಲಿ ಅಂತರಾಷ್ಟ್ರೀಯ ಮಧ್ಯಸ್ಥಿಕೆ ಕೇಂದ್ರವನ್ನು ಭಾರತ ಅಂತರಾಷ್ಟ್ರೀಯ ಮಧ್ಯಸ್ಥಿಕೆ ಕೇಂದ್ರ ಎಂದು ಮರುನಾಮಕರಣ ಮಾಡುವ ನವದೆಹಲಿ ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ಕೇಂದ್ರ (ತಿದ್ದುಪಡಿ) ಮಸೂದೆಯನ್ನು ಗುರುವಾರ ರಾಜ್ಯಸಭೆಯಲ್ಲಿ ಅಂಗೀಕರಿಸುವ ಸಂದರ್ಭದಲ್ಲಿ ಸಚಿವರು ಮಾತನಾಡಿದರು. ಚರ್ಚೆ ಮೂಲತಃ ಮಸೂದೆಯ ಸುತ್ತಲೂ ಇದ್ದರೂ ಸದಸ್ಯರು ಎತ್ತಿದ ಕೆಲವು ಪ್ರಶ್ನೆಗಳಿಗೂ ಅವರು ಉತ್ತರಿಸಿದರು.
ಸಚಿವರ ಪ್ರತಿಕ್ರಿಯೆಯ ಪ್ರಮುಖ ಅಂಶಗಳು
ಸುಪ್ರೀಂ ಕೋರ್ಟ್‌ನಲ್ಲಿ ಸುಮಾರು 70,000 ಪ್ರಕರಣಗಳು ಬಾಕಿ ಉಳಿದಿವೆ. ಪ್ರಸ್ತುತತೆ ಹೊಂದಿರುವ ಮತ್ತು ಸೂಕ್ತವಾದ ಪ್ರಕರಣಗಳನ್ನು ಮಾತ್ರವೇ ಕೈಗೆತ್ತಿಕೊಳ್ಳುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿರುವೆ.
ಸರ್ವೋಚ್ಚ ನ್ಯಾಯಾಲಯ ಜಾಮೀನು ಅರ್ಜಿಗಳು ಹಾಗೂ ಎಲ್ಲಾ ನಿಷ್ಪ್ರಯೋಜಕ ಪಿಐಎಲ್‌ಗಳನ್ನು ಆಲಿಸಲು ಪ್ರಾರಂಭಿಸಿದರೆ, ಖಂಡಿತವಾಗಿಯೂ ಅದು ದೊಡ್ಡಮಟ್ಟದಲ್ಲಿ ಸಾಂವಿಧಾನಿಕ ನ್ಯಾಯಾಲಯವೆಂದು ಪರಿಗಣಿಸಲಾಗಿರುವ ಗೌರವಾನ್ವಿತ ನ್ಯಾಯಾಲಯದ ಮೇಲೆ ಹೆಚ್ಚಿನ ಹೊರೆ ಹೊರಿಸುತ್ತದೆ.
ಕೆಳ ನ್ಯಾಯಾಲಯಗಳಲ್ಲಿ 4.25 ಕೋಟಿಗೂ ಹೆಚ್ಚು ಪ್ರಕರಣಗಳು ಬಾಕಿ ಉಳಿದಿವೆ. ಅರ್ಹರಿಗೆ ನ್ಯಾಯ ನೀಡಬೇಕು ಮತ್ತು ಅನಗತ್ಯ ಹೊರೆಗಳಿಂದ ನ್ಯಾಯಾಂಗ ಮುಕ್ತವಾಗಬೇಕು.
ನ್ಯಾಯಾಂಗಕ್ಕೆ ಕೇಂದ್ರ ಸರ್ಕಾರದ ಬಜೆಟ್ ಹಂಚಿಕೆ ಮತ್ತು ಪೂರಕ ಬೆಂಬಲ ವಿವಾದಾತೀತವಾಗಿದ್ದು ದೇಶದ ಯಾವುದೇ ನ್ಯಾಯಾಲಯ ಅದರಲ್ಲಿಯೂ ಮೂಲಸೌಕರ್ಯಕ್ಕಾಗಿ ಭಾರತ ಸರ್ಕಾರದ ಬೆಂಬಲದ ಕೊರತೆ ಇದೆ ಎಂದು ಹೇಳಲು ಸಾಧ್ಯವಿಲ್ಲ
[ರಾಜ್ಯಸಭಾ ಸದಸ್ಯರು ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ] ನಗರಗಳ ಹೆಸರು ಹೊತ್ತಿರುವ (ಉದಾಹರಣೆಗೆ ಮದ್ರಾಸ್ ಹೈಕೋರ್ಟ್, ಬಾಂಬೆ ಹೈಕೋರ್ಟ್, ಕಲ್ಕತ್ತಾ ಹೈಕೋರ್ಟ್ ಇತ್ಯಾದಿ) ಹೆಸರು ಬದಲಿಸುವ ಕುರಿತಂತೆ ಗೌರವಾನ್ವಿತ ನ್ಯಾಯಮೂರ್ತಿಗಳೊಂದಿಗೆ ಚರ್ಚೆ ನಡೆಸುವೆ.