Karnataka HC and KPSC

 
ಸುದ್ದಿಗಳು

ಕರ್ನಾಟಕ ನಾಗರಿಕ ಸೇವೆಗಳ ಕಾಯಿದೆ-2022ರ ಸಿಂಧುತ್ವ ಪ್ರಶ್ನೆ: ಕೆಎಸ್‌ಎಟಿ ಮೊದಲು ಪ್ರಕರಣ ನಿರ್ಧರಿಸಲಿ ಎಂದ ಹೈಕೋರ್ಟ್‌

ಗೆಜೆಟೆಡ್ ಪ್ರೊಬೇಷನರ್ ಪರವಾಗಿ ಸಲ್ಲಿಸಿರುವ ಮಧ್ಯಪ್ರವೇಶ ಮನವಿಗಳಿಗೆ ನ್ಯಾಯಾಲಯವು ಅನುಮತಿಸಿದ್ದು, ಕೆಎಸ್‌ಎಟಿಯಲ್ಲಿನ ಪ್ರಕ್ರಿಯೆಗೆ ನಮ್ಮ ಆದೇಶ ಪರಿಣಾಮ ಬೀರುವಂತಾಗಬಾರದು ಎಂದಿದೆ.

Bar & Bench

ಕರ್ನಾಟಕ ರಾಜ್ಯ ಆಡಳಿತ ನ್ಯಾಯಾಧಿಕರಣದ ಮುಂದೆ ಗೆಜೆಟೆಡ್ ಪ್ರೊಬೇಷನರ್‌ ಅಭ್ಯರ್ಥಿಗಳ ನೇಮಕಾತಿ ಪ್ರಕರಣವು ಸೋಮವಾರ ವಿಚಾರಣೆಗೆ ಬರಲಿದ್ದು ಅಲ್ಲಿ ನಿರ್ಧಾರವಾದ ಬಳಿಕ ಪ್ರಕರಣವನ್ನು ಆಲಿಸುವುದಾಗಿ ಶುಕ್ರವಾರ ಕರ್ನಾಟಕ ಹೈಕೋರ್ಟ್‌ ಹೇಳಿದೆ.

ಕರ್ನಾಟಕ ರಾಜ್ಯ ಆಡಳಿತ ನ್ಯಾಯಾಧಿಕರಣದಲ್ಲಿ (ಕೆಎಸ್‌ಎಟಿ) 362 ಗೆಜೆಟೆಡ್‌ ಪ್ರೊಬೇಷನರ್‌ ಅಭ್ಯರ್ಥಿಗಳ ಮಧ್ಯಂತರ ಕೋರಿಕೆಯ ಪ್ರಕರಣದ ವಿಚಾರಣೆ ಸೋಮವಾರ ನಡೆಯಲಿದೆ. ಅಲ್ಲಿ ನಿರ್ಧಾರವಾದ ಬಳಿಕ ಸದರಿ ಪ್ರಕರಣವನ್ನು ಆಲಿಸಲಾಗುವುದು. ಕೆಎಸ್‌ಎಟಿಯಲ್ಲಿನ ಪ್ರಕ್ರಿಯೆಗೆ ನಮ್ಮ ಆದೇಶ ಪರಿಣಾಮ ಬೀರುವಂತಾಗಬಾರದು ಎಂದು ನ್ಯಾಯಮೂರ್ತಿಗಳಾದ ಜಿ ನರೇಂದರ್ ಮತ್ತು ಎಂ ಜಿ ಎಸ್ ಕಮಲ್ ಅವರಿದ್ದ ವಿಭಾಗೀಯ ಪೀಠವು ಹೇಳಿತು.

ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಗೆಜೆಟೆಡ್ ಪ್ರೊಬೇಷನರ್ ಹುದ್ದೆಗೆ 2011ರಲ್ಲಿ ನಡೆಸಿದ್ದ ಪರೀಕ್ಷೆಯಲ್ಲಿ ಅಂತಿಮ ಪಟ್ಟಿಯಲ್ಲಿದ್ದ 362 ಅಭ್ಯರ್ಥಿಗಳ ಆಯ್ಕೆ ಸಿಂಧುಗೊಳಿಸಿ ನೇಮಕಾತಿ ಆದೇಶ ನೀಡುವ ಸಂಬಂಧ ರಾಜ್ಯ ಸರ್ಕಾರ ಜಾರಿಗೆ ತಂದಿರುವ ‘ಕರ್ನಾಟಕ ನಾಗರಿಕ ಸೇವೆಗಳ (2011ನೇ ಸಾಲಿನ ಗೆಜೆಟೆಡ್‌ ಪ್ರೊಬೇಷನರ್‌ಗಳ ಆಯ್ಕೆ ಮತ್ತು ನೇಮಕಾತಿ ಸಿಂಧುಗೊಳಿಸುವಿಕೆ) ಕಾಯಿದೆ-2022 ಸಿಂಧುತ್ವ ಪ್ರಶ್ನಿಸಿ ಶ್ರೀನಿವಾಸ್‌ ಟಿ ಸೇರಿದಂತೆ ಒಂಭತ್ತು ಮಂದಿ ಸಲ್ಲಿಸಿರುವ ಮನವಿಯ ವಿಚಾರಣೆಯನ್ನು ನ್ಯಾಯಾಲಯ ನಡೆಸಿತು. ಗೆಜೆಟೆಡ್ ಪ್ರೊಬೇಷನರ್‌ಗಳ ಪರವಾಗಿ ಸಲ್ಲಿಸಿರುವ ಮಧ್ಯಪ್ರವೇಶ ಮನವಿಗಳಿಗೆ ನ್ಯಾಯಾಲಯವು ಅನುಮತಿಸಿದೆ.

ರಾಜ್ಯ ಸರ್ಕಾರದ ಪರವಾಗಿ ಹಾಜರಿದ್ದ ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ನಾವದಗಿ ಅವರು “ಪ್ರಕರಣವು ಕೆಎಸ್‌ಎಟಿಯಲ್ಲಿದೆ. ಮೊದಲು ಅಲ್ಲಿ ನಿರ್ಧಾರವಾಗಲಿ” ಎಂದರು.

ಗೆಜೆಟೆಡ್ ಪ್ರೊಬೇಷನರ್‌ಗಳನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಎ ಎಸ್‌ ಪೊನ್ನಣ್ಣ ಅವರು “ಕೆಪಿಎಸ್‌ಸಿಯ ಶಿಫಾರಸ್ಸುಗಳನ್ನು ಏಕೆ ಒಪ್ಪುತ್ತಿಲ್ಲ ಎಂಬುದಕ್ಕೆ ಸಂಬಂಧಿಸಿದ ಕಾರಣಗಳನ್ನು ಹಿಂದೆ ರಾಜ್ಯ ಸರ್ಕಾರವು ಸದನದ ಮುಂದಿಟ್ಟಿರಲಿಲ್ಲ. ಆ ವಿಚಾರದಲ್ಲಿ ರಾಜ್ಯ ಸರ್ಕಾರದಿಂದ ಲೋಪವಾಗಿತ್ತು. ಈಗ ಅದನ್ನು ಸರಿಪಡಿಸಿ ಸದನದ ಮುಂದಿಟ್ಟು, ಒಪ್ಪಿಗೆ ಪಡೆಯಲಾಗಿದೆ. ಆದ್ದರಿಂದ, ಆಕ್ಷೇಪಿತ ಕಾಯಿದೆಯು ಸಿಂಧುವಾಗಿದ್ದು, ಸಂವಿಧಾನ ಬದ್ಧವಾಗಿದೆ” ಎಂದರು.

ಸುಮಾರು ಅರ್ಧ ತಾಸು ವಾದ- ಪ್ರತಿವಾದ ಆಲಿಸಿದ ಪೀಠವು ಈಗಾಗಲೇ ನಡೆದಿರುವ ನೇಮಕಾತಿ ಹೊರತುಪಡಿಸಿ ಉಳಿದ ಯಾವುದೇ ನೇಮಕಾತಿಗಳನ್ನು ಮಾಡಬಾರದು ಎಂದು ಪುನರುಚ್ಚರಿಸಿ, ವಿಚಾರಣೆಯನ್ನು ಏಪ್ರಿಲ್‌ 4ಕ್ಕೆ ಮುಂದೂಡಿತು.

ಕಳೆದ ವಿಚಾರಣೆಯಲ್ಲಿ ಅರ್ಜಿದಾರರ ಪರ ವಕೀಲರು “ನೇಮಕಾತಿಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂಬ ಸಿಐಡಿ ವರದಿಯನ್ನು ಆಧರಿಸಿ 2018ರ ಮಾರ್ಚ್‌ 9 ರಂದು ಕರ್ನಾಟಕ ಹೈಕೋರ್ಟ್ ನೇಮಕಾತಿ ರದ್ದು ಮಾಡಿತ್ತು. ಬಳಿಕ ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಗಳನ್ನು ವಜಾ ಮಾಡಿದ್ದ ಸುಪ್ರೀಂ ಕೋರ್ಟ್‌, ಹೈಕೋರ್ಟ್‌ ತೀರ್ಪನ್ನು ಎತ್ತಿ ಹಿಡಿದಿತ್ತು. ಆದರೂ ನ್ಯಾಯಾಲಯಗಳ ಆದೇಶ ಧಿಕ್ಕರಿಸಿ 362 ಅಭ್ಯರ್ಥಿಗಳ ಅಕ್ರಮ ನೇಮಕವನ್ನು ಸಕ್ರಮಗೊಳಿಸಲು ಸರ್ಕಾರ ರೂಪಿಸಿರುವ ಕಾಯಿದೆಯು ಕಾನೂನುಬಾಹಿರ. ಆದ್ದರಿಂದ ಅದನ್ನು ರದ್ದುಗೊಳಿಸಬೇಕು” ಎಂದು ಕೋರಿದ್ದರು.

ಇದಕ್ಕೂ ಮುನ್ನ ‘ಕರ್ನಾಟಕ ನಾಗರಿಕ ಸೇವೆಗಳ (2011ನೇ ಸಾಲಿನ ಗೆಜೆಟೆಡ್‌ ಪ್ರೊಬೇಷನರ್‌ಗಳ ಆಯ್ಕೆ ಮತ್ತು ನೇಮಕಾತಿ ಸಿಂಧುಗೊಳಿಸುವಿಕೆ) ಮಸೂದೆ - 2022ಕ್ಕೆ ಮಾರ್ಚ್‌ 12ರಂದು ರಾಜ್ಯಪಾಲರು ಅಂಕಿತ ಹಾಕಿದ್ದರು.

ಹೈಕೋರ್ಟ್‌ ಆಯ್ಕೆ ಪಟ್ಟಿ ರದ್ದುಪಡಿಸಿದ್ದರಿಂದ ಆಗ ಆಯ್ಕೆಯಾಗಿದ್ದ ಅಭ್ಯರ್ಥಿಗಳಿಗೆ ಅನ್ಯಾಯವಾಗಿದೆ. ಅವರಿಗೆ ನ್ಯಾಯ ಒದಗಿಸಬೇಕು ಎಂಬ ಬೇಡಿಕೆ ಉಭಯ ಸದನಗಳಲ್ಲಿ ಹಾಗೂ ಸಾರ್ವಜನಿಕವಾಗಿ ಕೇಳಿಬಂದಿತ್ತು. ಈ ಆಯ್ಕೆ ಪಟ್ಟಿಯನ್ನು ಸಿಂಧುಗೊಳಿಸುವುದಕ್ಕೆ ಸಂಬಂಧಿಸಿದಂತೆ ವಿವಿಧ ಮಠಾಧೀಶರು, ಮಾಜಿ ಪ್ರಧಾನಿ ಎಚ್‌ ಡಿ ದೇವೇಗೌಡ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಪಕ್ಷಾತೀತವಾಗಿ ಹಲವು ನಾಯಕರು ಸರ್ಕಾರದ ಮೇಲೆ ಒತ್ತಡ ಹಾಕಿದ್ದನ್ನು ಇಲ್ಲಿ ನೆನೆಯಬಹುದು.