<div class="paragraphs"><p>Karnataka HC and KPSC</p></div>

Karnataka HC and KPSC

 
ಸುದ್ದಿಗಳು

ಕರ್ನಾಟಕ ನಾಗರಿಕ ಸೇವೆಗಳ ಕಾಯಿದೆ - 2022ರ ಸಿಂಧುತ್ವ ಪ್ರಶ್ನೆ; ಯಥಾಸ್ಥಿತಿಗೆ ಹೈಕೋರ್ಟ್‌ ಸೂಚನೆ, ಶುಕ್ರವಾರ ವಿಚಾರಣೆ

Bar & Bench

ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಗೆಜೆಟೆಡ್ ಪ್ರೊಬೇಷನರ್ ಹುದ್ದೆಗೆ 2011ರಲ್ಲಿ ನಡೆಸಿದ್ದ ಪರೀಕ್ಷೆಯಲ್ಲಿ ಅಂತಿಮ ಪಟ್ಟಿಯಲ್ಲಿದ್ದ 362 ಅಭ್ಯರ್ಥಿಗಳ ಆಯ್ಕೆ ಸಿಂಧುಗೊಳಿಸಿ ನೇಮಕಾತಿ ಆದೇಶ ನೀಡುವ ಸಂಬಂಧ ರಾಜ್ಯ ಸರ್ಕಾರ ಜಾರಿಗೆ ತಂದಿರುವ ‘ಕರ್ನಾಟಕ ನಾಗರಿಕ ಸೇವೆಗಳ (2011ನೇ ಸಾಲಿನ ಗೆಜೆಟೆಡ್‌ ಪ್ರೊಬೇಷನರ್‌ಗಳ ಆಯ್ಕೆ ಮತ್ತು ನೇಮಕಾತಿ ಸಿಂಧುಗೊಳಿಸುವಿಕೆ) ಕಾಯಿದೆ-2022ರ ಜಾರಿಗೆ ಸಂಬಂಧಿಸಿದಂತೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಕರ್ನಾಟಕ ಹೈಕೋರ್ಟ್‌ ಬುಧವಾರ ಮೌಖಿಕವಾಗಿ ಸೂಚಿಸಿದ್ದು, ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿದೆ.

ಕಾಯಿದೆ ಸಿಂಧುತ್ವ ಪ್ರಶ್ನಿಸಿ ಶ್ರೀನಿವಾಸ್‌ ಟಿ ಸೇರಿದಂತೆ ಒಂಭತ್ತು ಮಂದಿ ಸಲ್ಲಿಸಿರುವ ಮನವಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಜಿ ನರೇಂದರ್ ಮತ್ತು ಎಂ ಜಿ ಎಸ್ ಕಮಲ್ ಅವರಿದ್ದ ವಿಭಾಗೀಯ ಪೀಠವು ನಡೆಸಿತು.

ಅಲ್ಪಕಾಲ ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ಪೀಠವು ಶುಕ್ರವಾರಕ್ಕೆ ವಿಚಾರಣೆ ಮುಂದೂಡಿದ್ದು, ಅಲ್ಲಿಯವರೆಗೆ ಕಾಯಿದೆ ಜಾರಿಗೆ ಸಂಬಂಧ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಮೌಖಿಕವಾಗಿ ಆದೇಶಿಸಿದೆ.

ಅರ್ಜಿದಾರರ ಪರ ವಕೀಲರು “ನೇಮಕಾತಿಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂಬ ಸಿಐಡಿ ವರದಿಯನ್ನು ಆಧರಿಸಿ 2018ರ ಮಾರ್ಚ್‌ 9ರಂದು ಕರ್ನಾಟಕ ಹೈಕೋರ್ಟ್ ನೇಮಕಾತಿ ರದ್ದು ಮಾಡಿತ್ತು. ಬಳಿಕ ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಗಳನ್ನು ವಜಾ ಮಾಡಿದ್ದ ಸುಪ್ರೀಂ ಕೋರ್ಟ್‌, ಹೈಕೋರ್ಟ್‌ ತೀರ್ಪನ್ನು ಎತ್ತಿ ಹಿಡಿದಿತ್ತು. ಆದರೂ ನ್ಯಾಯಾಲಯಗಳ ಆದೇಶ ಧಿಕ್ಕರಿಸಿ 362 ಅಭ್ಯರ್ಥಿಗಳ ಅಕ್ರಮ ನೇಮಕವನ್ನು ಸಕ್ರಮಗೊಳಿಸಲು ಸರ್ಕಾರ ರೂಪಿಸಿರುವ ಕಾಯಿದೆಯು ಕಾನೂನುಬಾಹಿರ. ಆದ್ದರಿಂದ ಅದನ್ನು ರದ್ದುಗೊಳಿಸಬೇಕು” ಎಂದು ಕೋರಿದ್ದಾರೆ.

362 ಅಭ್ಯರ್ಥಿಗಳ ನೇಮಕಾತಿ ಸಿಂಧುಗೊಳಿಸುವ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಕರ್ನಾಟಕ ರಾಜ್ಯ ಆಡಳಿತ ನ್ಯಾಯಾಧಿಕರಣದಲ್ಲಿ (ಕೆಎಸ್‌ಎಟಿ) ಅರ್ಜಿ ಸಲ್ಲಿಸಲಾಗಿತ್ತು. ಕೆಎಸ್ಎಟಿ ಯಾವುದೇ ಮಧ್ಯಂತರ ಆದೇಶ ನೀಡಿರಲಿಲ್ಲ. ಹೀಗಾಗಿ, ಹೈಕೋರ್ಟ್‌ನಲ್ಲಿ ಮನವಿ ಸಲ್ಲಿಸಲಾಗಿದೆ.

‘ಕರ್ನಾಟಕ ನಾಗರಿಕ ಸೇವೆಗಳ (2011ನೇ ಸಾಲಿನ ಗೆಜೆಟೆಡ್‌ ಪ್ರೊಬೇಷನರ್‌ಗಳ ಆಯ್ಕೆ ಮತ್ತು ನೇಮಕಾತಿ ಸಿಂಧುಗೊಳಿಸುವಿಕೆ) ಮಸೂದೆ - 2022ಕ್ಕೆ ಮಾರ್ಚ್‌ 12ರಂದು ರಾಜ್ಯಪಾಲರು ಅಂಕಿತ ಹಾಕಿದ್ದರು.

ಬೆಳಗಾವಿಯಲ್ಲಿ ನಡೆದಿದ್ದ ಕಳೆದ ಅಧಿವೇಶನದಲ್ಲಿ ಸರ್ಕಾರವು ಮಂಡಿಸಿದ್ದ ಈ ಮಸೂದೆಯು ಯಾವುದೇ ಚರ್ಚೆ ಇಲ್ಲದೇ ಅಂಗೀಕಾರಗೊಂಡಿತ್ತು. ಇದನ್ನು ಮಾರ್ಚ್‌ 14ರ ರಾಜ್ಯ ಪತ್ರದಲ್ಲಿ ಸರ್ಕಾರ ಪ್ರಕಟಿಸಿತ್ತು.

ಹೈಕೋರ್ಟ್‌ ಆಯ್ಕೆ ಪಟ್ಟಿ ರದ್ದುಪಡಿಸಿದ್ದರಿಂದ ಆಗ ಆಯ್ಕೆಯಾಗಿದ್ದ ಅಭ್ಯರ್ಥಿಗಳಿಗೆ ಅನ್ಯಾಯವಾಗಿದೆ. ಅವರಿಗೆ ನ್ಯಾಯ ಒದಗಿಸಬೇಕು ಎಂಬ ಬೇಡಿಕೆ ಉಭಯ ಸದನಗಳಲ್ಲಿ ಹಾಗೂ ಸಾರ್ವಜನಿಕವಾಗಿ ಕೇಳಿಬಂದಿತ್ತು. ಈ ಆಯ್ಕೆ ಪಟ್ಟಿಯನ್ನು ಸಿಂಧುಗೊಳಿಸುವುದಕ್ಕೆ ಸಂಬಂಧಿಸಿದಂತೆ ವಿವಿಧ ಮಠಾಧೀಶರು, ಮಾಜಿ ಪ್ರಧಾನಿ ಎಚ್‌ ಡಿ ದೇವೇಗೌಡ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಪಕ್ಷಾತೀತವಾಗಿ ಹಲವು ನಾಯಕರು ಸರ್ಕಾರದ ಮೇಲೆ ಒತ್ತಡ ಹಾಕಿದ್ದನ್ನು ಇಲ್ಲಿ ನೆನೆಯಬಹುದಾಗಿದೆ.