ಜಗನ್ನಾಥ ಪುರಿ ದೇವಸ್ಥಾನದ ಸುತ್ತ ನಿರ್ಮಾಣ ಕಾಮಗಾರಿ ನಡೆಸುವುದರಿಂದ ದೇವಸ್ಥಾನ ಅಡಿಪಾಯದಲ್ಲಿ ಬಿರುಕು ಕಾಣಿಸಿಕೊಳ್ಳುತ್ತಿದೆ ಎಂದು ಆರೋಪಿಸಿ ಸಲ್ಲಿಸಲಾಗಿರುವ ಮನವಿಗೆ ಸಂಬಂಧಿಸಿದಂತೆ ಶುಕ್ರವಾರ ಸುಪ್ರೀಂ ಕೋರ್ಟ್ ತೀರ್ಪು ಪ್ರಕಟಿಸಲಿದೆ (ಅರ್ಧೇಂದು ಕುಮಾರ್ ದಾಸ್ ಮತ್ತು ಇತರರು ವರ್ಸಸ್ ಒಡಿಶಾ ರಾಜ್ಯ ಮತ್ತು ಇತರರು).
ದೇವಾಲಯದ ಸುತ್ತ ನಡೆಯುತ್ತಿರುವ ನಿರ್ಮಾಣ ಕಾಮಗಾರಿಯಿಂದ ಏನಾದರೂ ಸಮಸ್ಯೆಯಾಗುತ್ತಿದೆಯೇ ಎಂಬುದಕ್ಕೆ ಸಂಬಂಧಿಸಿದಂತೆ ಸಮೀಕ್ಷೆ ನಡೆಸಲು ಭಾರತೀಯ ಪುರಾತತ್ವ ಇಲಾಖೆಗೆ (ಎಎಸ್‌ಐ) ಒಡಿಶಾ ಹೈಕೋರ್ಟ್ ಆದೇಶಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಿರುವ ಮನವಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ ಮತ್ತು ಹಿಮಾ ಕೊಹ್ಲಿ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.
ಮಧ್ಯಂತರ ಆದೇಶದಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿಗೆ ಹೈಕೋರ್ಟ್ ನಿರ್ಬಂಧ ವಿಧಿಸಬೇಕಿತ್ತು. ರಾಜ್ಯ ಸರ್ಕಾರವು ಕಾನೂನು ಪ್ರಕಾರವಾಗಿ ಅನುಮತಿ ಪಡೆದಿಲ್ಲ ಎಂದು ಮನವಿಯಲ್ಲಿ ಆಕ್ಷೇಪಿಸಲಾಗಿದೆ.
“ಪ್ರಾಚೀನ ಸ್ಮಾರಕಗಳು ಮತ್ತು ಪುರಾತತ್ವ ತಾಣ ಮತ್ತು ಪಳೆಯುಳಿಕೆಗಳ ಕಾಯಿದೆ ಸೆಕ್ಷನ್‌ಗಳಾದ 20ಎ, ಬಿ ಮತ್ತು ಸಿ ಗೆ ವಿರುದ್ಧವಾಗಿ ನಿರ್ಮಾಣ ಕಾಮಗಾರಿ ನಡೆಸಲಾಗುತ್ತಿದೆ. ಇದು ಕಾನೂನುಬಾಹಿರ ಕ್ರಮವಾಗಿದೆ. ನಿಷೇಧಿತ ಪ್ರದೇಶದಲ್ಲಿ ಯಾವುದೇ ನಿರ್ಮಾಣ ಕಾಮಗಾರಿ ನಡೆಸುವಂತಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಸುಧಾರಿತ ಪ್ರದೇಶದಲ್ಲಿ ನಿರ್ಮಾಣ ಕಾಮಗಾರಿ ನಡೆಸಲು ರಾಜ್ಯ ಸರ್ಕಾರ ಅನುಮತಿ ಪಡೆದಿಲ್ಲ” ಎಂದು ಹಿರಿಯ ವಕೀಲೆ ಮಹಾಲಕ್ಷ್ಮಿ ಪಾವನಿ ವಾದಿಸಿದರು.
ಅಡ್ವೊಕೇಟ್ ಜನರಲ್ ಅಶೋಕ್ ಪರಿಜಾ ಅವರು “100 ಮೀಟರ್ ವ್ಯಾಪ್ತಿಯ ನಿಷೇಧಿತ ಪ್ರದೇಶದಲ್ಲಿ ಯಾವುದೇ ನಿರ್ಮಾಣ ಕಾಮಗಾರಿ ಮಾಡಲಾಗುತ್ತಿಲ್ಲ. ಇಲ್ಲಿ ರಿಪೇರಿ ಕೆಲಸ ಮತ್ತು ಚರಂಡಿ, ಶೌಚಾಲಯದ ಮರು ನಿರ್ಮಾಣ ನಡೆಯುತ್ತಿದೆ. “ಇರುವ ಸ್ಥಳದ ಸೌಂದರ್ಯವನ್ನು ಹೆಚ್ಚಿಸುವ ಮೂಲಕ ಭಕ್ತರಿಗೆ ಸೌಕರ್ಯ ಕಲ್ಪಿಸಲಾಗುತ್ತಿದೆ. ದೇವಾಲಯದ ಭದ್ರತೆಯ ದೃಷ್ಟಿಯಿಂದ ಇತರೆ ಕೆಲಸ ಮಾಡಲಾಗುತ್ತಿದೆ. ವಿಶ್ವ ಪಾರಂಪರಿಕ ತಾಣದಲ್ಲಿ ಶೌಚಾಲಯ ಇರಬಾರದೆ? ಶೌಚಾಲಯಗಳು ಇಲ್ಲದಿರುವುದರಿಂದ ಮಹಿಳೆಯರಿಗೆ ಸಮಸ್ಯೆಯಾಗುತ್ತಿದೆ. ರಾಜಕೀಯ ಪ್ರೇರಿತವಾಗಿ ಮನವಿ ಸಲ್ಲಿಸಲಾಗಿದೆ” ಎಂದು ಆಕ್ಷೇಪಿಸಿದರು. ವಾದ-ಪ್ರತಿವಾದ ಆಲಿಸಿದ ಪೀಠವು ತೀರ್ಪು ಕಾಯ್ದಿರಿಸಿದೆ.