Greater Bengaluru Authority & karnataka hc  
ಸುದ್ದಿಗಳು

ಕೆಂಗೇರಿ ಎಜುಕೇಷನ್‌ ಟ್ರಸ್ಟ್‌ ಜಾಗದಲ್ಲಿ ಉಗ್ರಾಣ, ಪಾರ್ಕಿಂಗ್‌ ಕಟ್ಟಡ: ಜಿಬಿಎ ಪ್ರತಿಕ್ರಿಯೆ ಬಯಸಿದ ಹೈಕೋರ್ಟ್‌

ಟ್ರಸ್ಟಿಗಳು ಲಾಭಕ್ಕಾಗಿ ಶೈಕ್ಷಣಿಕೇತರ ಚಟುವಟಿಕೆ ನಿರ್ವಹಿಸುತ್ತಿದ್ದಾರೆ‌. ಟ್ರಸ್ಟ್ ಜಾಗದಲ್ಲಿ ವ್ಯಾಪಾರಿಗಳಿಗಾಗಿ ಉಗ್ರಾಣ, ಆಟದ ಮೈದಾನದಲ್ಲಿ ಸಾರಿಗೆ ಕಂಪನಿಯಿಂದ ಭಾರೀ ವಾಹನಗಳ ಪಾರ್ಕಿಂಗ್ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ ಎಂದು ಆಕ್ಷೇಪ.

Bar & Bench

ಮೈಸೂರು ರಸ್ತೆಯ ಕೆಂಗೇರಿ ಎಜುಕೇಷನ್ ಟ್ರಸ್ಟ್‌ಗೆ ಸೇರಿದ ಜಾಗದಲ್ಲಿ ಟ್ರಸ್ಟ್‌ ಪದಾಧಿಕಾರಿಗಳು ಹಾಗೂ ಖಾಸಗಿ ಕಂಪನಿಯು, ಸಂಬಂಧಪಟ್ಟ ಅಧಿಕಾರಿಗಳಿಂದ ಪೂರ್ವಾನುಮತಿ  ಪಡೆದು ಉಗ್ರಾಣ ಹಾಗೂ ಪಾರ್ಕಿಂಗ್ ಕಟ್ಟಡಗಳ ನಿರ್ಮಾಣ‌ ಕಾಮಗಾರಿ ನಡೆಸುತ್ತಿದ್ದಾರೆಯೇ ಎಂಬುದನ್ನು ಪರಿಶೀಲಿಸಿ ಖಚಿತಪಡಿಸಿಕೊಳ್ಳಬೇಕು ಮತ್ತು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಕರ್ನಾಟಕ ಹೈಕೋರ್ಟ್ (ಜಿಬಿಎ) ಈಚೆಗೆ ನಿರ್ದೇಶಿಸಿದೆ.

ನಿರ್ಮಾಣ ಕಾಮಗಾರಿಯನ್ನು ಆಕ್ಷೇಪಿಸಿ ಎಂ ಶ್ರೀಕಾಂತ್ ಸೇರಿದಂತೆ ಮೂವರು ಸ್ಥಳೀಯರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಸುನೀಲ್ ದತ್ ಯಾದವ್ ಮತ್ತು ಎಸ್ ರಾಚಯ್ಯ ಅವರ ವಿಭಾಗೀಯ ಪೀಠ ನಡೆಸಿತು.

ಪ್ರತಿವಾದಿಗಳಾದ ರಾಜ್ಯ ಸರ್ಕಾರ,‌ ಪ್ರಾಥಮಿಕ‌ ಶಾಲಾ‌ ಶಿಕ್ಷಣ‌ ಇಲಾಖೆ, ಜಿಬಿಎ‌ ಟ್ರಸ್ಟ್ ಅಧ್ಯಕ್ಷರು ಮತ್ತು ಟ್ರಸ್ಟಿಗಳಿಗೆ ನೋಟಿಸ್ ಜಾರಿ ಮಾಡಿದೆ. ಅರ್ಜಿದಾರರ ಪರ ವಕೀಲ ಎಂ ಶಿವಪ್ರಕಾಶ್ ವಾದ ಮಂಡಿಸಿದ್ದರು.

1957ರ ಏಪ್ರಿಲ್‌ 22ರಂದು ಕೆಂಗೇರಿ ಎಜುಕೇಷನ್ ಟ್ರಸ್ಟ್ ಸ್ಥಾಪನೆಯಾಯಿತು. 1957ರಿಂದ 1965ರವರೆಗೆ ಸ್ಥಳೀಯ ನಿವಾಸಿಗಳು ಸುಮಾರು 12 ಎಕರೆ ಭೂಮಿಯನ್ನು ಶೈಕ್ಷಣಿಕ ಕಾರ್ಯಗಳನ್ನು ನಡೆಸಲು ಈ ಸೊಸೈಟಿಗೆ ದಾನವಾಗಿ ನೀಡಿದ್ದರು. ಈ ಜಾಗದಲ್ಲಿ ಸೊಸೈಟಿ  ಸ್ಥಾಪಿಸಿದ ಕನ್ನಡ ಮಾಧ್ಯಮದ ಶಾಲೆಯನ್ನು ಅನುದಾನಿತ ಶಿಕ್ಷಣ ಸಂಸ್ಥೆಯಾಗಿ ಸರ್ಕಾರ ಮಾನ್ಯತೆ ನೀಡಿತ್ತು. 1980ರ ವೇಳೆ 5000 ವಿದ್ಯಾರ್ಥಿಗಳಿದ್ದರು. 1980ರಲ್ಲಿ ಸೊಸೈಟಿಯನ್ನು ಟ್ರಸ್ಟ್ ಆಗಿ ಸಂಯೋಜಿಸಲಾಯಿತು. ಸಂಸ್ಥಾಪಕರು ಸಾವನ್ನಪ್ಪಿದ ನಂತರ ಅವರ ಮಕ್ಕಳು ಟ್ರಸ್ಟ್ ಆಡಳಿತದ ಚುಕ್ಕಾಣಿ ಹಿಡಿದರು. ಆದರೆ, ಅವರು ತಮ್ಮ ಕರ್ತವ್ಯಗಳನ್ನು ಟ್ರಸ್ಟಿನ ಧ್ಯೇಯೋದ್ದೇಶಗಳಿಗೆ ಅನುಗುಣವಾಗಿ ನಿರ್ವಹಿಸುತ್ತಿಲ್ಲ. ಇದರಿಂದ ಶಾಲೆಯ ವಿದ್ಯಾರ್ಥಿಗಳ ಸಂಖ್ಯೆ ಸದ್ಯ 1200ಕ್ಕೆ ಇಳಿಕೆಯಾಗಿದೆ. ‌ಪ್ರಸ್ತುತ ಶಾಲೆಯ ವಾತಾವರಣವೇ ಹಾಳಾಗಿದೆ ಎಂದು‌ ಅರ್ಜಿಯಲ್ಲಿ ವಿವರಿಸಲಾಗಿದೆ.

ಅಲ್ಲದೇ, ಸದ್ಯ ಟ್ರಸ್ಟಿಗಳು ವೈಯಕ್ತಿಕ ಲಾಭಕ್ಕಾಗಿ ಶೈಕ್ಷಣಿಕೇತರ ಚಟುವಟಿಕೆಗಳನ್ನು ನಿರ್ವಹಿಸುತ್ತಿದ್ದಾರೆ‌. ಟ್ರಸ್ಟ್ ಜಾಗದಲ್ಲಿ ವ್ಯಾಪಾರಿಗಳಿಗಾಗಿ ಉಗ್ರಾಣ, ಆಟದ ಮೈದಾನದಲ್ಲಿ ಸಾರಿಗೆ ಕಂಪನಿಯಿಂದ ಭಾರೀ ವಾಹನಗಳ ಪಾರ್ಕಿಂಗ್ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ. ಶಾಲೆಗೆ ಸೇರಿದ ಜಾಗವನ್ನು ಖಾಸಗಿ ವ್ಯಕ್ತಿಗಳ ಒತ್ತುವರಿ ಮಾಡಿದ್ದಾರೆ. ಅದಕ್ಕೆ ಟ್ರಸ್ಟ್ ಸಹಕಾರವಿದೆ. ಸಂಸ್ಥೆಯ ದೊಡ್ಡಮೊತ್ತದ ಹಣವನ್ನು ದುರ್ಬಳಕೆ ಮಾಡಲಾಗುತ್ತಿದೆ. ಆದ್ದರಿಂದ ಟ್ರಸ್ಟ್ ಜಾಗ ಸಂರಕ್ಷಣೆ ಮಾಡಲು ಹಾಗೂ ನಿರ್ಮಾಣ ಕಾಮಗಾರಿಗನ್ನು ಸ್ಥಗಿತಗೊಳಿಸಬೇಕು ಹಾಗೂ ಈ ಜಾಗದಲ್ಲಿ ಶೈಕ್ಷಣಿಕೇತರ ಚಟುವಟಿಕೆಗಳು ನಡೆಯದಂತೆ‌ ನೋಡಿಕೊಳ್ಳಲು ‌ಸರ್ಕಾರ ಹಾಗೂ ಜಿಬಿಎಗೆ ನಿರ್ದೇಶಿಸಬೇಕು ಎಂದು ಕೋರಿದರು.