Ola
Ola Image for representative purpose
ಸುದ್ದಿಗಳು

ಪ್ರಯಾಣದ ವೇಳೆ ಕೆಲಸ ಮಾಡದ ಎ ಸಿ: ₹15,000 ಪರಿಹಾರ ನೀಡುವಂತೆ ಓಲಾಗೆ ಬೆಂಗಳೂರಿನ ಗ್ರಾಹಕ ವೇದಿಕೆ ಸೂಚನೆ

Bar & Bench

ಪ್ರಯಾಣಿಕರೊಬ್ಬರ ಎಂಟು ಗಂಟೆಗಳ ಪ್ರಯಾಣದ ವೇಳೆ ಹವಾನಿಯಂತ್ರಣ ಕೆಲಸ ಮಾಡದ ಹಿನ್ನೆಲೆಯಲ್ಲಿ ಅವರಿಗೆ  ₹15,000 ಪರಿಹಾರ ನೀಡುವಂತೆ ಕ್ಯಾಬ್‌ ಅಗ್ರಿಗೇಟರ್‌ ಅಪ್ಲಿಕೇಷನ್‌ ಆಗಿರುವ ಬೆಂಗಳೂರಿನ ನಗರ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ಇತ್ತೀಚೆಗೆ ಕ್ಯಾಬ್ ಅಗ್ರಿಗೇಟರ್ ಅಪ್ಲಿಕೇಶನ್ ಓಲಾಗೆ ನಿರ್ದೇಶನ ನೀಡಿದೆ [ವಿಕಾಸ್‌ ಭೂಷಣ್‌ ಮತ್ತು ಭವಿಷ್‌ ಅಗರ್‌ವಾಲ್‌ ನಡುವಣ ಪ್ರಕರಣ].

"ಗ್ರಾಹಕರಿಗೆ ನೀಡಿದ ಭರವಸೆಯಂತೆ ಅವರಿಗೆ ಸೇವೆ ಒದಗಿಸುವುದು ಅಗ್ರಿಗೇಟರ್‌ (ಓಲಾ) ಸಂಸ್ಥೆಯ ಕರ್ತವ್ಯವಾಗಿದೆ. ಎಂಟು ಗಂಟೆಗಳ ಪ್ರಯಾಣದ ಅವಧಿಗೆ ಎಸಿ ಸೇವೆ ಒದಗಿಸದೆ ದೂರುದಾರರು ತಮ್ಮ ಪ್ರಯಾಣದಲ್ಲಿ ಅನನುಕೂಲ ಮತ್ತು ಮಾನಸಿಕ ಯಾತನೆ ಅನುಭವಿಸುವಂತೆ ಮಾಡಲಾಗಿದೆ. ಆದ್ದರಿಂದ ಓಲಾ ಸೇವಾಲೋಪ ಎಸಗಿದ್ದು ಅನ್ಯಾಯದ ವ್ಯಾಪಾರ ಕ್ರಿಯೆಯಲ್ಲಿ ತೊಡಗಿದೆ ” ಎಂದು ಆಯೋಗದ ಅಧ್ಯಕ್ಷೆ ಎಂ ಶೋಭಾ ನೇತೃತ್ವದ ಪೀಠ ತನ್ನ ಆದೇಶದಲ್ಲಿ ಹೇಳಿದೆ.

ದೂರುದಾರರು ಅಕ್ಟೋಬರ್ 2021ರಲ್ಲಿ ತಮ್ಮ ಸಹೋದ್ಯೋಗಿಗಳೊಂದಿಗೆ ಓಲಾ ಅಪ್ಲಿಕೇಶನ್ ಮೂಲಕ ಕ್ಯಾಬ್ ಬಾಡಿಗೆಗೆ ಪಡೆದು 80 ಕಿ ಮೀ ಅಥವಾ ಎಂಟು ಗಂಟೆಗಳ ಪ್ರಯಾಣದ ಆಯ್ಕೆ ಮಾಡಿಕೊಂಡಿದ್ದರು. ಆದರೆ 8 ಗಂಟೆಗಳ ಪ್ರಯಾಣದ ಅವಧಿಯಲ್ಲಿ ಎಸಿ ಕಾರ್ಯನಿರ್ವಹಿಸಲಿಲ್ಲ ಎಂದು ಅವರು ದೂರಿದ್ದರು.

ಪ್ರಯಾಣದ ವೇಳೆ ಎದುರಾಗುವ ಸಮಸ್ಯೆಗಳನ್ನು ನಿವಾರಿಸಲು ಯಾವುದೇ ವ್ಯವಸ್ಥೆ ಇಲ್ಲ. ಜೊತೆಗೆ ಪ್ರಯಾಣ ರದ್ದುಗೊಳಿಸಿದರೆ ಬುಕಿಂಗ್‌ ಮೊತ್ತವೂ ರದ್ದಾಗುತ್ತಿತ್ತು. ಓಲಾ ಗ್ರಾಹಕ ಸೇವಾ ಕೇಂದ್ರವನ್ನು ಅದೇ ದಿನ ಸಂಪರ್ಕಿಸಿದರೂ ಮೊತ್ತ ಹಿಂಪಡೆಯಲು ಸಾಧ್ಯವಾಗಲಿಲ್ಲ ಎಂದು ದೂರುದಾರರು ತಿಳಿಸಿದ್ದರು.

ಬಳಿಕ ದೂರನ್ನು ಹಿರಿಯ ವ್ಯವಸ್ಥಾಪಕರ ಬಳಿ ಒಯ್ದಾಗ ಯಾವುದೇ ಚರ್ಚೆ ನಡೆಸದೆ ₹100 ಮರುಪಾವತಿ ಮಾಡಲಾಯಿತು. ಇದರಿಂದ ಸಿಟ್ಟಿಗೆದ್ದ ದೂರುದಾರರು ರಾಷ್ಟ್ರೀಯ ಗ್ರಾಹಕ ಸಹಾಯವಾಣಿಗೆ ಕರೆ ಮಾಡಿ ತನಗೆ ₹ 50,000 ಪರಿಹಾರ ಹಾಗೂ ₹ 1,837 ಬುಕಿಂಗ್ ಮೊತ್ತ ಒದಗಿಸಿಕೊಡಬೇಕೆಂದು ಕೋರಿದ್ದರು.

ಭರವಸೆ ನೀಡಿದಂತೆ ಸೇವೆ ಒದಗಿಸುವುದು ಓಲಾ ಕರ್ತವ್ಯವಾಗಿದ್ದು ತಮ್ಮ 8 ಗಂಟೆಗಳ ಪ್ರಯಾಣಕ್ಕೆ ಹವಾನಿಯಂತ್ರಣವನ್ನು ಒದಗಿಸದೆ ದೂರುದಾರರಿಗೆ ಅದು ನೋವುಂಟು ಮಾಡಿದೆ ಎಂದು ಆಯೋಗ ಹೇಳಿದೆ.

ದೂರು ನೀಡಿದ ದಿನದಿಂದ ಮರುಪಾವತಿ ದಿನದವರೆಗೆ ವಾರ್ಷಿಕ 10% ಬಡ್ಡಿಯೊಂದಿಗೆ ಬುಕಿಂಗ್‌ ಮೊತ್ತ ಮರುಪಾವತಿಸಬೇಕು. ದೂರುದಾರರಿಗೆ ₹ 10,000 ಪರಿಹಾರ ಮತ್ತು ₹ 5,000 ದಾವೆ ವೆಚ್ಚ  ಪಾವತಿಸಬೇಕು ಎಂದು ಓಲಾಗೆ ಅದು ನಿರ್ದೇಶನ ನೀಡಿದೆ.