ಗ್ರಾಹಕರಿಗೆ ಸ್ಯಾಮ್‌ಸಂಗ್ ಟಿವಿ ಸೇವೆ ನೀಡದೇ ಕಂಪೆನಿಯು ಸತಾಯಿಸಿರುವುದಕ್ಕೆ ಸಂಬಂಧಿಸಿದಂತೆ ದೂರುದಾರರ ಅಹವಾಲನ್ನು ಭಾಗಶಃ ಪರಿಗಣಿಸಿರುವ ಬೆಂಗಳೂರಿನ ಜಿಲ್ಲಾ ಗ್ರಾಹಕರ ಪರಿಹಾರ ಆಯೋಗವು ಟಿವಿ ಪ್ಯಾನೆಲ್ ಸರಿಪಡಿಸಲು ಪ್ರತಿವಾದಿಗಳಿಗೆ ಆದೇಶಿಸಿದ್ದು, ದಾವೆ ವೆಚ್ಚವನ್ನಾಗಿ ದೂರುದಾರರಿಗೆ ಮೂರು ಸಾವಿರ ರೂಪಾಯಿ ಪಾವತಿಸಲು ಈಚೆಗೆ ಆದೇಶಿಸಿದೆ.
ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಬೆಂಗಳೂರಿನ ವಿನೀತ್ ಕುಮಾರ್ ಧಿಮನ್ ಅವರು ಸಲ್ಲಿಸಿರುವ ದೂರಿನ ವಿಚಾರಣೆ ನಡೆಸಿರುವ ಗ್ರಾಹಕರ ಅಹವಾಲು ಪರಿಹಾರ ಆಯೋಗದ ಅಧ್ಯಕ್ಷರಾದ ಕೆ ಎಸ್ ಬೀಳಗಿ, ಸದಸ್ಯರಾದ ಎಚ್ ಜನಾರ್ದನ್ ಅವರು ಈ ಆದೇಶ ಮಾಡಿದ್ದಾರೆ.
“50 ಇಂಚು ಸ್ಯಾಮ್‌ಸಂಗ್ ಟಿವಿಯ ಪ್ಯಾನೆಲ್ ಅನ್ನು ಸ್ಯಾಮ್‌ಸಂಗ್ ಸ್ಮಾರ್ಟ್ ಪ್ಲಾಜಾ ಎಬಿಎಂ ಇನ್‌ಕಾರ್ಪೊರೇಶನ್ ಮತ್ತು ಸ್ಯಾಮ್‌ಸಂಗ್ ಇಂಡಿಯಾ ಎಲೆಕ್ಟ್ರಾನಿಕ್ಸ್ ಪ್ರೈವೇಟ್ ಲಿಮಿಟೆಡ್ ಬದಲಾಯಿಸಬೇಕು. ದಾವೆಯ ವೆಚ್ಚವನ್ನಾಗಿ ಪ್ರತಿವಾದಿ ಕಂಪೆನಿಗಳು ಮೂರು ಸಾವಿರ ರೂಪಾಯಿ ಪಾವತಿಸಬೇಕು. ಪ್ರತಿವಾದಿ ಕಂಪೆನಿಗಳು ಈ ಆದೇಶವನ್ನು ಅರವತ್ತು ದಿನಗಳಲ್ಲಿ ಪಾಲಿಸಬೇಕು” ಎಂದು ಪೀಠವು ಏಪ್ರಿಲ್ 11ರ ಆದೇಶದಲ್ಲಿ ಹೇಳಿದೆ.
ಪ್ರಕರಣದ ಹಿನ್ನೆಲೆ: 2020ರ ಅಕ್ಟೋಬರ್ 3ರಂದು ದೂರುದಾರ ವಿನೀತ್ ಕುಮಾರ್ ಅವರು ₹70,900 ಪಾವತಿಸಿ ಸ್ಯಾಮ್‌ಸಂಗ್ ಟಿವಿ ಖರೀದಿಸಿದ್ದು, 2021ರ ಅಕ್ಟೋಬರ್ 3ಕ್ಕೆ ವಾರಂಟಿ ಮುಗಿಯುವುದಿತ್ತು. ಆದರೆ, 2021ರ ಜೂನ್‌ನಲ್ಲಿ ಟಿವಿಯ ಡಿಸ್‌ಪ್ಲೇ ಕಪ್ಪು ಬಣ್ಣಕ್ಕೆ ತಿರುಗಲಾರಂಭಿಸಿತ್ತು. ಸಮಸ್ಯೆ ಹೆಚ್ಚಾಗಿದ್ದು, 2021ರ ಜುಲೈನಲ್ಲಿ ಡಿಸ್‌ಪ್ಲೇ ಮತ್ತಷ್ಟು ಕಪ್ಪು ಬಣ್ಣಕ್ಕೆ ತಿರುಗಿತ್ತು. ಅಲ್ಲದೇ, ಡಿಸ್‌ಪ್ಲೇನಲ್ಲಿ ಲಂಬ ಮತ್ತು ಅಡ್ಡ ಗೆರೆಗಳು ಕಾಣಿಸಿಕೊಂಡಿದ್ದವು. ದೂರುದಾರರು 2021ರ ಜುಲೈ 6ರಂದು ಸ್ಯಾಮ್‌ಸಂಗ್ ಸೇವಾ ಕೇಂದ್ರಕ್ಕೆ ದೂರು ನೀಡಿದ್ದು, ಅದರಂತೆ 2021ರ ಜುಲೈ 7ರಂದು ದೂರುದಾರರ ಮನೆಗೆ ಸಂಸ್ಥೆಯ ದುರಸ್ತಿ ಸಿಬ್ಬಂಧಿ ಭೇಟಿ ನೀಡಿದ್ದರು. ಅಲ್ಲದೇ, ಟಿವಿ ತಯಾರಿಕೆಯ ಸಂದರ್ಭದಲ್ಲಿಯೇ ಸಮಸ್ಯೆಯಾಗಿದ್ದು, ಜುಲೈ 12ರ ಒಳಗೆ ಸರಿಪಡಿಸುವುದಾಗಿ ತಿಳಿಸಿದ್ದರು. ಪ್ರತಿವಾದಿಗಳ ತಂತ್ರಜ್ಞರು ಸಂಪರ್ಕಿಸದೇ ಇದ್ದಾಗ, ಪದೇಪದೇ ದೂರುದಾರರಿಗೆ ಕರೆ ಮಾಡಿ ಸಮಸ್ಯೆ ಬಗೆಹರಿಸುವಂತೆ ಕೋರಿದ್ದರು. ಆದರೆ, 29 ದಿನಗಳ ಬಳಿಕ 50 ಇಂಚು ಸ್ಯಾಮ್‌ಸಂಗ್ ಟಿವಿಗೆ ಬದಲಿಗೆ 48 ಇಂಚು ಸ್ಯಾಮ್‌ಸಂಗ್ ಟಿವಿ ತಂದಿದ್ದರು. ಆದರೆ, ಅದಕ್ಕೆ ದೂರುದಾರರು ಒಪ್ಪಿರಲಿಲ್ಲ.
ವಾಸ್ತವದಲ್ಲಿ 50 ಇಂಚು ಎಲ್‌ಇಡಿ ಟಿವಿಯನ್ನು ಕಂಪೆನಿಯು 48 ಇಂಚು ಎಲ್‌ಇಡಿ ಬಾಕ್ಸ್‌ನಲ್ಲಿ ಪ್ಯಾಕ್ ಮಾಡಿದ್ದರು. ಇದನ್ನು ದೂರುದಾರರು ತಪ್ಪಾಗಿ ಅರ್ಥ ಮಾಡಿಕೊಂಡಿದ್ದರು. ದೂರುದಾರರು ಖರೀದಿಸಿದ್ದ ಟಿವಿಗೆ ಒಂದು ವರ್ಷ ವಾರಂಟಿ ಇದ್ದು, ಕಂಪೆನಿಯ ಎಂಜನಿಯರ್ ಅಲ್ಲಿಗೆ ಭೇಟಿ ನೀಡಿ ಸಮಸ್ಯೆ ಪರಿಹರಿಸಲು ಪ್ರಯತ್ನಿಸಿದ್ದರು. ಇದಕ್ಕೆ ದೂರುದಾರರು ಒಪ್ಪಿರಲಿಲ್ಲ. ಅಂತಿಮವಾಗಿ ಕಂಪೆನಿಯ ಎಂಜಿನಿಯರ್ ಸಮಸ್ಯೆ ಬಗೆಹರಿಸಬಹುದು ಎಂದು ಹೇಳಿದ್ದು, ಈಗಲು ಅದನ್ನು ಬಗೆಹರಿಸಲು ಸಿದ್ಧವಾಗಿರುವುದಾಗಿ ತಿಳಿಸಿದ್ದರು. ಅಂತಿಮವಾಗಿ, ಟಿವಿ ಪ್ಯಾನೆಲ್ ಬದಲಾಯಿಸಲು ಪ್ರತಿವಾದಿ ಕಂಪೆನಿಗಳಿಗೆ ನಿರ್ದೇಶಿಸಿರುವ ಆಯೋಗವು ದಾವೆಯ ವೆಚ್ಚವನ್ನು ಪಾವತಿಸಲು ನಿರ್ದೇಶಿಸಿದೆ.