ದೆಹಲಿಯಲ್ಲಿ ವಕೀಲರು 
ಸುದ್ದಿಗಳು

ನ್ಯಾಯಾಂಗ ನಿಂದನೆ: ವಕೀಲರೊಬ್ಬರಿಗೆ 6 ತಿಂಗಳು ಜೈಲು ಶಿಕ್ಷೆ ವಿಧಿಸಿದ ದೆಹಲಿ ಹೈಕೋರ್ಟ್

ಹೈಕೋರ್ಟ್ ಮತ್ತು ವಿಚಾರಣಾ ನ್ಯಾಯಾಲಯದ ನ್ಯಾಯಾಧೀಶರುಗಳು ಕ್ರಿಮಿನಲ್ ಮೇಲ್ಮನವಿಯಲ್ಲಿ ಹೆಸರಿಸಿದ್ದ ವಕೀಲ ಸಿಂಗ್, ಅವರೆಲ್ಲಾ ನಿರಂಕುಶವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿದ್ದರು. ಅವಕಾಶವಿತ್ತರೂ ಕ್ಷಮೆಯಾಚನೆಗೆ ಸಿಂಗ್‌ ನಿರಾಕರಿಸಿದ್ದರು.

Bar & Bench

ಹೈಕೋರ್ಟ್ ನ್ಯಾಯಮೂರ್ತಿಗಳು ಮತ್ತು ಜಿಲ್ಲಾ ನ್ಯಾಯಾಂಗದ ಹಾಲಿ ನ್ಯಾಯಾಧೀಶರ ವಿರುದ್ಧ ನಿಂದನಾತ್ಮಕ ಆರೋಪ ಮಾಡಿದ್ದ ವಕೀಲರೊಬ್ಬರಿಗೆ ದೆಹಲಿ ಹೈಕೋರ್ಟ್ ಮಂಗಳವಾರ ಆರು ತಿಂಗಳ ಸಾದಾ ಜೈಲು ಶಿಕ್ಷೆ ವಿಧಿಸಿದೆ.

ವೀರೇಂದ್ರ ಸಿಂಗ್ ಅವರಿಗೆ ಬೇಷರತ್‌ ಕ್ಷಮೆಯಾಚನೆಗೆ ಅವಕಾಶ ನೀಡಲಾಗಿತ್ತಾದರೂ ಅದನ್ನು ಅವರು ನಿರಾಕರಿಸಿದರು. ತಾನು ಮಾಡಿದ ಆರೋಪಗಳಿಗೆ ಬದ್ಧ ಎಂದು ಹೇಳಿದರು. ಇದು ಅವರು ತಮ್ಮ ನಡೆ ಬಗ್ಗೆ ಪಶ್ಚಾತ್ತಾಪ ಹೊಂದಿಲ್ಲ ಎಂಬುದನ್ನು ತೋರಿಸುತ್ತದೆ ಎಂಬುದಾಗಿ ನ್ಯಾಯಮೂರ್ತಿಗಳಾದ ಸುರೇಶ್ ಕುಮಾರ್ ಕೈಟ್ ಮತ್ತು ಶಾಲಿಂದರ್ ಕೌರ್ ಅವರಿದ್ದ ವಿಭಾಗೀಯ ಪೀಠ ತಿಳಿಸಿತು.

"ಅಧಿಕೃತವಾಗಿ ಸಲ್ಲಿಸಲಾದ ಸಾಕ್ಷಿಗಳು, ಹಾಗೂ ನ್ಯಾಯಾಂಗ ನಿಂದಕರ ವಾದಗಳನ್ನು ಗಮನಿಸಿದಾಗ ಅವರು ತಮ್ಮ ನಡೆ ಮತ್ತು ಕ್ರಿಯೆಗಳಿಗೆ ಪಶ್ಚಾತ್ತಾಪಪಡುವುದಿಲ್ಲ ಎಂದು ಕಂಡುಬಂದಿದೆ. ಹೀಗಾಗಿ ನಾವು ಆತನಿಗೆ 6 ತಿಂಗಳ ಅವಧಿಗೆ ಸಾದಾ ಸೆರೆವಾಸ ಮತ್ತು ₹ 2,000/ - ದಂಡ ವಿಧಿಸುತ್ತಿದ್ದು ದಂಡ ಪಾವತಿಸಲು ವಿಫಲವಾದರೆ ಇನ್ನೂ ಏಳು ದಿನಗಳ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ" ಎಂದು ತಿಳಿಸಿರುವ ನ್ಯಾಯಾಲಯ ಅವರನ್ನು ತಿಹಾರ್‌ ಜೈಲಿಗೆ ಕಳಿಸುವಂತೆ ಆದೇಶಿಸಿತು.

ಸಿಂಗ್ ತನ್ನ ಬಟ್ಟೆ ಬದಲಿಸಲು, ಹೈಕೋರ್ಟ್ ಅಂಗಳದಲ್ಲಿ ನಿಲ್ಲಿಸಿದ್ದ ತನ್ನ ವಾಹನವನ್ನು ಮನೆಗೆ ಬಿಡಲು ಹಾಗೂ ಜೈಲಿಗೆ ಕೊಂಡೊಯ್ಯುವಷ್ಟು ಔಷಧಗಳನ್ನು ತರಲು ಅವರಿಗೆ ಅವಕಾಶ ನೀಡಿತು.

ಜುಲೈ 14, 2022ರಲ್ಲಿ ಏಕಸದಸ್ಯ ಪೀಠ ವಿಚಾರಣೆಗೆ ಕೈಗೆತ್ತಿಕೊಂಡಿದ್ದ ಕ್ರಿಮಿನಲ್‌ ಮೇಲ್ಮನವಿಯಲ್ಲಿ ಸಿಂಗ್‌ ಅವರು ಹಲವು ನ್ಯಾಯಾಧೀಶರ ವಿರುದ್ಧ ಬಗೆಬಗೆಯ ಆರೋಪಗಳನ್ನು ಮಾಡಿದ್ದರು. ನ್ಯಾಯಾಧೀಶರು ನಿರಂಕುಶವಾಗಿ, ಸ್ವೇಚ್ಛೆಯಿಂದ ಇಲ್ಲವೇ ಪಕ್ಷಪಾತದಿಂದ ವರ್ತಿಸುತ್ತಿದ್ದಾರೆ ಎಂದು ನ್ಯಾಯಾಧೀಶರ ಹೆಸರನ್ನೂ ಉಲ್ಲೇಖಿಸಿ ದೂರಿದ್ದರು.

ಆರೋಪ ಹಿಂಪಡೆಯುವಿರಾ ಎಂಬ ಏಕಸದಸ್ಯ ಪೀಠದ ಪ್ರಶ್ನೆಗೆ ಸಿಂಗ್‌ ಅವರಿಂದ ನಕಾರಾತ್ಮಕ ಉತ್ತರ ದೊರೆತಿತ್ತು. ಇದು ನ್ಯಾಯಾಂಗ ನಿಂದನೆಯ ಆರೋಪವಲ್ಲ ಬದಲಿಗೆ ಸತ್ಯಾಂಶವಿರುವ ಮಾತುಗಳು ಎಂದು ಅವರು ಮಾರುತ್ತರ ನೀಡಿದ್ದರು.

ಈ ಆರೋಪಗಳನ್ನು ಪ್ರಕರಣದ ಸಂತ್ರಸ್ತೆ ಖುದ್ದು ಮಾಡಿಲ್ಲ ಬದಲಿಗೆ ವಕೀಲರ (ವೀರೇಂದ್ರ ಸಿಂಗ್) ಸಲಹೆಯ ಮೇರೆಗೆ ಮಾಡಲಾಗಿದೆ ಎಂದು ಏಕಸದಸ್ಯ ಪೀಠ ಹೇಳಿತು.

ಆದ್ದರಿಂದ ಏಕಸದಸ್ಯ ಪೀಠ ಸಿಂಗ್ ಅವರಿಗೆ ನ್ಯಾಯಾಂಗ ನಿಂದನೆ ನೋಟಿಸ್ ಜಾರಿಗೊಳಿಸಿ, ಮುಖ್ಯ ನ್ಯಾಯಮೂರ್ತಿಗಳ ಆದೇಶಕ್ಕೆ ಒಳಪಟ್ಟು ನ್ಯಾಯಾಂಗ ನಿಂದನೆ ರೋಸ್ಟರ್ ಹೊಂದಿರುವ ವಿಭಾಗೀಯ ಪೀಠದ ಮುಂದೆ ಪ್ರಕರಣ ಪಟ್ಟಿ ಮಾಡುವಂತೆ ನಿರ್ದೇಶಿಸಿತ್ತು.

ನಂತರ ಸಿಂಗ್‌ ಅವರ ವಾದವನ್ನು ಸುದೀರ್ಘವಾಗಿ ಆಲಿಸಿದ ವಿಭಾಗೀಯ ಪೀಠ ಸಂತ್ರಸ್ತೆ ಅನುಭವಿಸಿದ ಅನ್ಯಾಯವನ್ನು ಸಾಬೀತುಪಡಿಸಲು ಮತ್ತು ಆರೋಪಿಗಳನ್ನು ಖುಲಾಸೆಗೊಳಿಸಲು ಕಾರಣವಾದ ಹಿನ್ನೆಲೆಯನ್ನು ಒದಗಿಸಲು ಸಿಂಗ್ ವಿಫಲವಾಗಿದ್ದಾರೆ ಎಂಬ ತೀರ್ಮಾನಕ್ಕೆ ಬಂದಿದೆ.

"ತಮ್ಮ ನ್ಯಾಯಾಂಗ ಕಾರ್ಯವನ್ನು ನಿರ್ವಹಿಸುತ್ತಿರುವ ಈ ನ್ಯಾಯಾಲಯದ ನ್ಯಾಯಮೂರ್ತಿಗಳ ಮತ್ತು ಜಿಲ್ಲಾ ನ್ಯಾಯಾಲಯಗಳ ನ್ಯಾಯಾಧೀಶರ ವಿರುದ್ಧ ಮಾನಹಾನಿಕರ, ಅನಗತ್ಯ ಮತ್ತು ಆಧಾರರಹಿತ ಆರೋಪ ಮಾಡಲಾಗಿದ್ದು, ನ್ಯಾಯಾಂಗ ನಿಂದಕ/ ಪ್ರತಿವಾದಿ ಮೇಲ್ಮನವಿಯಲ್ಲಿ ಅಸಂಬದ್ಧ ಆರೋಪಗಳನ್ನು ಮಾಡಿದ್ದಾರೆ ಎಂಬುದು ಮೇಲಿನ ವಿಚಾರಗಳಿಂದ ಸ್ಪಷ್ಟವಾಗಿದೆ. ಇದಲ್ಲದೆ, ಈ ನ್ಯಾಯಾಲಯದ ಅಧಿಕಾರಿಯಾಗಿ ನ್ಯಾಯಾಂಗದ ಮುಂದೆ ಕೋರಲಾದ ಮನವಿಯಲ್ಲಿ ಇಂತಹ ಹೇಳಿಕೆಗಳನ್ನು ನೀಡುವುದು ಹೆಚ್ಚು ಗಂಭೀರ ಸ್ವರೂಪದ್ದಾಗಿದೆ. ಅಂತಹ ಕ್ರಮಗಳನ್ನು ಕಠಿಣ ರೀತಿಯಲ್ಲಿ ನಿರ್ವಹಿಸುವುದು ನ್ಯಾಯಾಲಯಗಳ ಕರ್ತವ್ಯವಾಗಿದ್ದು ಇಲ್ಲದೇ ಹೋದರೆ ಹಾನಿಕಾರಕ ಪರಿಣಾಮ ಉಂಟಾಗುತ್ತದೆ" ಎಂದು ಅಭಿಪ್ರಾಯಪಟ್ಟ ನ್ಯಾಯಾಲಯ ಸಿಂಗ್ ಅವರಿಗೆ ಆರು ತಿಂಗಳ ಜೈಲು ಶಿಕ್ಷೆ ವಿಧಿಸಿತು.

[ತೀರ್ಪಿನ ಪ್ರತಿಯನ್ನು ಇಲ್ಲಿ ಓದಿ]

Court on its own motion v Virendra Singh Advocate.pdf
Preview