ಷೇರು ಟ್ರೇಡಿಂಗ್‌ನಲ್ಲಿ ಪಾಲ್ಗೊಳ್ಳದಂತೆ 'ಬಾಪ್ ಆಫ್ ಚಾರ್ಟ್' ಹಿಂದಿರುವ ಮೊಹಮ್ಮದ್ ನಾಸಿರುದ್ದೀನ್ ಅನ್ಸಾರಿ ಮತ್ತು ಇತರರ ವಿರುದ್ಧ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯು (ಸೆಬಿ) ಬುಧವಾರ ಮಧ್ಯಂತರ ಆದೇಶ ಮಾಡಿದ್ದು, ಆತನ ತನ್ನ ಹಿಂಬಾಲಕರಿಂದ ಸಂಗ್ರಹಿಸಿದ್ದ ₹17.2 ಕೋಟಿಯನ್ನು ಮುಟ್ಟುಗೋಲು ಹಾಕಿಕೊಂಡಿದೆ.
ನಾಸಿರ್ ಅನ್ಸಾರಿ ಅವರು ಗ್ರಾಹಕರಿಗೆ ₹3 ಲಕ್ಷದಿಂದ ₹6 ಲಕ್ಷದವರೆಗಿನ ಖಾತರಿ ಲಾಭದ ಆಮಿಷ ತೋರಿಸುತ್ತಿದ್ದರು ಮತ್ತು ಸೆಬಿ ನಿಯಂತ್ರಣ ಕ್ರಮಗಳಿಗೆ ವಿರುದ್ಧವಾಗಿ ಖರೀದಿ ಶಿಫಾರಸ್ಸುಗಳನ್ನು ಸೂಚಿಸುತ್ತಿದ್ದರು ಎಂದು ಕಾಯಂ ಸದಸ್ಯ ಅನಂತ್ ನಾರಾಯಣ್ ಜಿ ಹೇಳಿದ್ದಾರೆ.
“ಮೇಲ್ನೋಟಕ್ಕೆ ಕಂಡುಬರುವಂತೆ ನಾಸಿರ್ ಅವರು ಅಕ್ರಮ ಮತ್ತು ನೋಂದಾಯಿತವಲ್ಲದ ಹೂಡಿಕೆ ಸಲಹಾ ಚಟುವಟಿಕೆಯ ಮುಖವಾಗಿದ್ದಾರೆ. ಈ ಆದೇಶದಲ್ಲಿ ಮಾಡಿರುವ ಆರೋಪಗಳ ಕೇಂದ್ರಬಿಂದುವು ಬಾಪ್ ಆಫ್ ಚಾರ್ಟ್ ಮತ್ತು ಬ್ರಾಂಡ್ ರಿಕಾಲ್‌ನೊಂದಿಗೆ ತಳಕು ಹಾಕಿಕೊಂಡಿರುವ ಏಕೈಕ ಹೆಸರಾಗಿದೆ. ಹಾಗಾಗಿ, ಹೂಡಿಕೆದಾರರ ಹಿತಾಸಕ್ತಿ ಮತ್ತು ಷೇರು ಮಾರುಕಟ್ಟೆಯ ಸಮಗ್ರತೆಯನ್ನು ಎತ್ತಿಹಿಡಿಯುವ ದೃಷ್ಟಿಯಿಂದ ನಾಸಿರ್ ವಿರುದ್ಧ ವೈಯಕ್ತಿಕವಾಗಿ ಹಾಗೂ ಬಾಪ್ ಆಫ್ ಚಾರ್ಟ್‌ನ ಏಕೈಕ ಸಂಸ್ಥಾಪಕನೆಂದು ಪರಿಗಣಿಸಿ ಮಧ್ಯಂತರ ಆದೇಶ ಮಾಡುವುದು ಅಗತ್ಯವಾಗಿದೆ” ಎಂದು ಆದೇಶದಲ್ಲಿ ಹೇಳಲಾಗಿದೆ.
ಸೆಬಿಯಿಂದ ನೋಂದಣಿ ಹೊಂದದೆ ಮತ್ತು ಸೆಬಿ (ಹೂಡಿಕೆ ಸಲಹೆಗಾರರು) ನಿಯಂತ್ರಣ ನಿಬಂಧನೆಗಳು ಹಾಗೂ ಕಾಯಿದೆಗೆ ವಿರುದ್ಧವಾಗಿ ನಾಸಿರ್ ಸಲಹೆಗಳನ್ನು ನೀಡುತ್ತಿದ್ದಾರೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ನಾಸಿರ್ ಅವರ ಎಕ್ಸ್ ಖಾತೆಯನ್ನು ಸೆಬಿ ವಿಶ್ಲೇಷಣೆಗೆ ಒಳಪಡಿಸಿತ್ತು.
ಪರಿಶೀಲನೆಯ ಸಂದರ್ಭದಲ್ಲಿ ಸೆಬಿಯು ನಾಸಿರ್ ವಿರುದ್ಧ ಲಾಭದ ಆಮಿಷ ತೋರಿಸಿದ ದೂರು ಸ್ವೀಕರಿಸಿದ್ದು, ಅದರ ಆಧಾರದಲ್ಲಿ ಕ್ರಮಕೈಗೊಂಡಿದೆ.