BBMP Chief Commissioner Tushar Giri Nath and Karnataka HC
BBMP Chief Commissioner Tushar Giri Nath and Karnataka HC 
ಸುದ್ದಿಗಳು

[ನ್ಯಾಯಾಂಗ ನಿಂದನೆ] ಮಲ್ಲತ್ತಹಳ್ಳಿ ಕೆರೆ ಪ್ರದೇಶದಲ್ಲಿ ರಸ್ತೆ ನಿರ್ಮಾಣ: ಬಿಬಿಎಂಪಿ ಆಯುಕ್ತರಿಗೆ ಹೈಕೋರ್ಟ್‌ ನೋಟಿಸ್‌

Bar & Bench

ಬೆಂಗಳೂರಿನ ಮಲ್ಲತ್ತಹಳ್ಳಿ ಕೆರೆ ಪ್ರದೇಶದಲ್ಲಿ ಯಾವುದೇ ನಿರ್ಮಾಣ ಚಟುವಟಿಕೆ ಕೈಗೊಳ್ಳದಂತೆ ನ್ಯಾಯಾಲಯದ ಆದೇಶವಿದ್ದರೂ ಅದನ್ನು ಉಲ್ಲಂಘಿಸಿ ರಸ್ತೆ ನಿರ್ಮಿಸಲಾಗುತ್ತಿದೆ ಎಂದು ಆರೋಪಿಸಲಾದ ನ್ಯಾಯಾಂಗ ನಿಂದನೆ ಅರ್ಜಿಗೆ ಸಂಬಂಧಿಸಿದಂತೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ಗೆ ನೋಟಿಸ್‌ ಜಾರಿಗೊಳಿಸಲು ಕರ್ನಾಟಕ ಹೈಕೋರ್ಟ್‌ ಆದೇಶಿಸಿದೆ.

ಬೆಂಗಳೂರಿನ ವಕೀಲೆ ಗೀತಾ ಮಿಶ್ರಾ ಸಲ್ಲಿಸಿರುವ ನ್ಯಾಯಾಂಗ ನಿಂದನೆ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್‌ ವಿ ಅಂಜಾರಿಯಾ ಹಾಗೂ ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್‌ ಅವರ ನೇತೃತ್ವದ ವಿಭಾಗೀಯ ಪೀಠ ಬುಧವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಜಿ ಆರ್‌ ಮೋಹನ್‌ ಅವರು “ಕೆರೆ ಪ್ರದೇಶದಲ್ಲಿ ಅಕ್ರಮ ನಿರ್ಮಾಣ ಚಟುವಟಿಕೆ ಆಕ್ಷೇಪಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ; ರಸ್ತೆ ಸೇರಿದಂತೆ ಯಾವುದೇ ಶಾಶ್ವತ ಅಥವಾ ತಾತ್ಕಾಲಿಕ ನಿರ್ಮಾಣ ಕಾರ್ಯ ಕೈಗೊಳ್ಳಬಾರದು. ಗಣೇಶ ಮೂರ್ತಿಗಳ ವಿಸರ್ಜನೆ ಸೇರಿದಂತೆ ಯಾವುದೇ ರೀತಿಯ ಉತ್ಸವಗಳಿಗೆ ಅವಕಾಶ ನೀಡಬಾರದು ಎಂದು ಹೈಕೋರ್ಟ್‌ 2023ರ ಮಾರ್ಚ್ 14ರಂದು ಆದೇಶಿಸಿತ್ತು. ಆದರೂ, ಈ ಆದೇಶವನ್ನು ಉಲ್ಲಂಘಿಸಿ ಅಲ್ಲಿ 80 ಅಡಿ ರಸ್ತೆ ನಿರ್ಮಾಣ ಕಾರ್ಯ ಕೈಗೊಳ್ಳಲಾಗಿದೆ. ನ್ಯಾಯಾಲಯದ ಆದೇಶವನ್ನು ಬಿಬಿಎಂಪಿ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ದೂರಿದರು.

ಮಲ್ಲತ್ತಹಳ್ಳಿ ಕೆರೆ ಒಟ್ಟು 71.18 ಎಕರೆ ಪ್ರದೇಶ ವ್ಯಾಪ್ತಿಯಲ್ಲಿದ್ದು, ಅದರಲ್ಲಿ ಮೂರು ಎಕರೆಗೆ ಸಂಬಂಧಿಸಿದಂತೆ ವ್ಯಾಜ್ಯ ನಡೆಯುತ್ತಿದೆ. 42 ಎಕರೆ ಪ್ರದೇಶದಲ್ಲಿ ಜಲಮೂಲ ಇದ್ದು, ಅದನ್ನು 44 ಎಕರೆಗೆ ವಿಸ್ತರಿಸಿ ಅಭಿವೃದ್ಧಿಪಡಿಸಬೇಕಾಗಿದೆ. ಸದ್ಯ ಆ ಕೆರೆಯಲ್ಲಿ ನೀರಿಲ್ಲ. ಕೆರೆಯ ಪ್ರದೇಶದಲ್ಲಿಯೇ ಕೊಳಚೆ ನೀರು ಹರಿಯುವ ಮಾರ್ಗವಿದೆ ಎಂದು ವಿವರಿಸಿದರು. ವಾದ ಆಲಿಸಿದ ಪೀಠ ಪ್ರತಿವಾದಿಗೆ ನೋಟಿಸ್‌ ಜಾರಿಗೊಳಿಸಲು ಆದೇಶಿಸಿ, ವಿಚಾರಣೆ ಮುಂದೂಡಿತು.