ಸುದ್ದಿಗಳು

ಸಂತೋಷ್‌ ಆತ್ಮಹತ್ಯೆ ಪ್ರಕರಣ: ತನಿಖಾಧಿಕಾರಿ ಸಲ್ಲಿಸಿರುವ 'ಬಿ' ರಿಪೋರ್ಟ್‌ ಜೊತೆಗಿನ ದಾಖಲೆ ಕೋರಿ ಮೆಮೊ ಸಲ್ಲಿಕೆ

Bar & Bench

ಬೆಳಗಾವಿಯ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಮಾಜಿ ಸಚಿವ ಈಶ್ವರಪ್ಪ ಅವರಿಗೆ ಕ್ಲೀನ್‌ಚಿಟ್ ನೀಡಿ ʼಬಿʼ ರಿಪೋರ್ಟ್‌ ಸಲ್ಲಿಸಿರುವ ಉಡುಪಿ ಪೊಲೀಸರು ಅದರ ಜೊತೆಗೆ ಸಲ್ಲಿಸಿರುವ ದಾಖಲೆಗಳನ್ನು ನೀಡುವಂತೆ ಕೋರಿ ಸಂತೋಷ್ ಪಾಟೀಲ್ ಕುಟುಂಬದವರು ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಮೆಮೊ ಸಲ್ಲಿಸಿದ್ದಾರೆ.

ಪ್ರಕರಣದ ಸಂಬಂಧ ಎಸ್‌ಐಟಿ ಅಧಿಕಾರಿಗಳು ಸಲ್ಲಿಸಿರುವ ಬಿ ರಿಪೋರ್ಟ್‌ ವಿರೋಧಿಸಿ, ಮೃತ ಸಂತೋಷ್ ಪಾಟೀಲ್ ಸಹೋದರ ಪ್ರಶಾಂತ್ ಪಾಟೀಲ್ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಮೆಮೊ ಸಲ್ಲಿಸಿದ್ದು, ಬುಧವಾರ ನ್ಯಾಯಾಲಯದ ಮುಂದೆ ಅರ್ಜಿ ವಿಚಾರಣೆಗೆ ಬರಲಿದೆ.

ಸಂತೋಷ್ ಪಾಟೀಲ್ ನಡೆಸಿರುವ ಕಾಮಗಾರಿಗಳು ಹಾಗೂ ಆ ಸಂಬಂಧ ಈಶ್ವರಪ್ಪ ಅವರೊಂದಿಗೆ ನಡೆಸಿರುವ ಮಾತುಕತೆಗೆ ಸಂಬಂಧಿಸಿದಂತೆ ಹಲವು ದಾಖಲೆಗಳಿವೆ. ಸಂತೋಷ್ ಆತ್ಮಹತ್ಯೆಗೆ ಈಶ್ವರಪ್ಪ ಅವರೇ ಕಾರಣ ಎಂಬುದನ್ನು ಸಾಬೀತುಪಡಿಸುವ ಹಲವು ಸಾಕ್ಷ್ಯಗಳು ಲಭ್ಯವಿದ್ದರೂ ಸಾಕ್ಷ್ಯಾಧಾರ ಕೊರತೆಯ ಕಾರಣ ನೀಡಿ ಪೊಲೀಸರು ಬಿ-ವರದಿ ಸಲ್ಲಿಸಿದ್ದಾರೆ. ಸಂತೋಷ್ ಪಾಟೀಲ್ ಆತ್ಮಹತ್ಯೆಯ ಹಿಂದೆ ಹಲವು ಪ್ರಭಾವಿಗಳ ಕೈವಾಡವಿದೆ. ಎಸ್‌ಐಟಿ ಅಧಿಕಾರಿಗಳು ಸೂಕ್ತ ರೀತಿಯಲ್ಲಿ ತನಿಖೆ ನಡೆಸದೆ, ರಾಜಕೀಯ ಪ್ರಭಾವಕ್ಕೆ ಒಳಗಾಗಿ ಈಶ್ವರಪ್ಪ ಅವರಿಗೆ ಕ್ಲೀನ್‌ಚಿಟ್ ನೀಡಿದ್ದಾರೆ. ಆದ್ದರಿಂದ, ಎಸ್‌ಐಟಿ ಸಲ್ಲಿಸಿರುವ ಬಿ-ರಿಪೋರ್ಟ್ ಜೊತೆಗಿನ ಕರೆ ದಾಖಲೆಗಳು, ಸಿಸಿಟಿವಿ ತುಣುಕು ಸೇರಿದಂತೆ ವಿವಿಧ ದಾಖಲೆ ನೀಡಬೇಕು ಎಂದು ಕೋರಲಾಗಿದೆ.

ಪ್ರಕರಣವೇನು?: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವರಾಗಿದ್ದ ಕೆ ಎಸ್ ಈಶ್ವರಪ್ಪ ಮತ್ತು ಸಹಚರರು ಕಾಮಗಾರಿ ಬಿಲ್ ಪಾವತಿಗೆ 40 ಪರ್ಸೆಂಟ್ ಕಮಿಷನ್ ಕೇಳುತ್ತಿದ್ದಾರೆ ಎಂದು ವಾಟ್ಸ್‌ಆ್ಯಪ್ ಸಂದೇಶ ಕಳುಹಿಸಿ ಗುತ್ತಿಗೆದಾರ ಸಂತೋಷ್, ಏಪ್ರಿಲ್‌ 12ರಂದು ಉಡುಪಿಯ ಲಾಡ್ಜ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಸಂಬಂಧ ಉಡುಪಿ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಮಧ್ಯೆ, ಸಾರ್ವಜನಿಕ ಪ್ರತಿರೋಧದ ಹಿನ್ನೆಲೆಯಲ್ಲಿ ಈಶ್ವರಪ್ಪ ಸಚಿವ ಸ್ಥಾನಕ್ಕೂ ರಾಜೀನಾಮೆ ನೀಡಿದ್ದರು.

ತನಿಖಾಧಿಕಾರಿಗಳಿಂದ ಕ್ಲೀನ್‌ಚಿಟ್: ಪ್ರಕರಣದ ತನಿಖೆ ನಡೆಸಿದ್ದ ಪೊಲೀಸರು, ಲಾಡ್ಜ್‌ನ ಸಿಸಿ ಕ್ಯಾಮರಾ ದೃಶ್ಯಾವಳಿ, ಆಡಿಯೋ, ಮೊಬೈಲ್ ಸಂದೇಶ, ಬ್ಯಾಂಕ್ ದಾಖಲೆ, ಗುತ್ತಿಗೆ ವಿವರ, ಕುಟುಂಬಸ್ಥರು, ಸ್ನೇಹಿತರ ಹೇಳಿಕೆ ಸಹಿತ ತಾಂತ್ರಿಕ ಸಾಕ್ಷ್ಯಗಳನ್ನು ಸಂಗ್ರಹಿಸಿ 1,800 ಪುಟಗಳ ಅಂತಿಮ ವರದಿಯನ್ನು ವಿಚಾರಣಾಧೀನ ನ್ಯಾಯಾಲಯಕ್ಕೆ ಸಲ್ಲಿಸಿರುವುದಾಗಿ ಪೊಲೀಸರು ತಿಳಿಸಿದ್ದರು.

ಕೊಲೆ ಅಥವಾ ಆತ್ಮಹತ್ಯೆಗೆ ಪ್ರಚೋದನೆ ಎಂಬುದಕ್ಕೆ ಸೂಕ್ತ ಸಾಕ್ಷಿಗಳು ಲಭ್ಯವಾಗಿಲ್ಲ. ಈಶ್ವರಪ್ಪ ಮತ್ತು ಸಹಚರರಿಂದ ಬೆದರಿಕೆ ಬಂದಿದೆ ಎಂಬುದಕ್ಕೆ ದಾಖಲೆಗಳ ಕೊರತೆ ಇದೆ. ಸಂತೋಷ್ ಪತ್ನಿ ಹಾಗೂ ಸಂಬಂಧಿಕರನ್ನು ಹೊರತುಪಡಿಸಿ ಬೇರೆ ಯಾರೂ ಈಶ್ವರಪ್ಪ ವಿರುದ್ಧ ಹೇಳಿಕೆ ನೀಡಿಲ್ಲ ಎಂದು ಜುಲೈ 20ರಂದು ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಸಲ್ಲಿಸಲಾಗಿದ್ದ ಬಿ-ವರದಿಯಲ್ಲಿ ಹೇಳಲಾಗಿತ್ತು.