Cows
Cows 
ಸುದ್ದಿಗಳು

ಕರ್ನಾಟಕ ಹೈಕೋರ್ಟ್‌ನಲ್ಲಿ ಜಾನುವಾರು ವಧೆ ತಡೆ ಕಾಯಿದೆ ಸಮರ್ಥಿಸಿಕೊಂಡ ರಾಜ್ಯ ಸರ್ಕಾರ

Bar & Bench

ರಾಜ್ಯದ ಆರ್ಥಿಕತೆ ಈಗಲೂ ಕೃಷಿ ಪ್ರಧಾನವಾಗಿದ್ದು ಹಸುವಿನ ಸಂತತಿ ವ್ಯವಸಾಯದ ಬೆನ್ನೆಲುಬು ಎಂದು ಕರ್ನಾಟಕ ಹೈಕೋರ್ಟ್‌ಗೆ ಬುಧವಾರ ತಿಳಿಸಿರುವ ರಾಜ್ಯ ಸರ್ಕಾರ 2020ರ ಕರ್ನಾಟಕ ಜಾನುವಾರು ವಧೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯಿದೆಯನ್ನು ಸಮರ್ಥಿಸಿಕೊಂಡಿದೆ.

ಗೂಳಿ ಅಥವಾ ದನ ಹೈನುಗಾರಿಕೆಗೆ ಮಾತ್ರವಲ್ಲದೆ ಜಾನುವಾರು ಆಧಾರಿತ ಕೃಷಿ ಉದ್ದೇಶ ಮತ್ತು ಸಂತಾನೋತ್ಪತ್ತಿಗೆ ಕೂಡ ಉಪಯುಕ್ತ ಎಂದು ಅದು ಹೇಳಿದೆ. ಕಾಯಿದೆಯ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ನ್ಯಾಯಾಲಯಕ್ಕೆ ಸಲ್ಲಿಸಲಾದ ಅರ್ಜಿಗಳಿಗೆ ಪ್ರತಿಕ್ರಿಯೆಯಾಗಿ ಸರ್ಕಾರ ಅಫಿಡವಿಟ್ ಸಲ್ಲಿಸಿದೆ.

ಬೇರಾವುದೇ ಪ್ರಾಣಿಗಳಿಗೆ ಹೋಲಿಸಿದರೆ ಕೆಲಸ ಮಾಡುವ ಎತ್ತುಗಳು ಅಪಾರ ಶಕ್ತಿ ಪೂರೈಸುತ್ತವೆ. ಜೈವಿಕ ಅನಿಲ ಸ್ಥಾವರಗಳಂತಹ ಅಸಾಂಪ್ರದಾಯಿಕ ಇಂಧನ ಮೂಲ ಹೆಚ್ಚಿಸಲು ಇವು ಮುಖ್ಯ, ಸಂತಾನೋತ್ಪತ್ತಿ ಬಳಿಕವೂ ಅವು ಇಂಧನ, ಗೊಬ್ಬರಕ್ಕಾಗಿ ಸಗಣಿ ನೀಡುತ್ತಲೇ ಇದ್ದು ಆರ್ಥಿಕವಾಗಿ ಅನುತ್ಪಾದಕವಲ್ಲ. ಗೂಳಿ ಅಥವಾ ದನ ದಿನವೊಂದಕ್ಕೆ 15-20 ಕೆಜಿ ಸಗಣಿ ಮತ್ತು 10-12 ಲೀಟರ್ ಗೋಮೂತ್ರ ನೀಡುತ್ತದೆ ಎಂದು ಅಂದಾಜಿಸಲಾಗಿದೆ. ಇದರಲ್ಲಿ ಒಂದು ಕಿಲೋ ಸಗಣಿಯಿಂದ 40 ಲೀಟರ್‌ನಷ್ಟು ಜೈವಿಕ ಅನಿಲ ಉತ್ಪಾದಿಸಬಹುದು ಎಂದು ಸರ್ಕಾರ ತನ್ನ ಪ್ರತಿಕ್ರಿಯೆಯಲ್ಲಿ ತಿಳಿಸಿದೆ.

ರಾಸಾಯನಿಕ ಗೊಬ್ಬರಕ್ಕೆ ಪ್ರತಿಯಾಗಿ ಅಗ್ಗವಾಗಿ ದೊರೆಯುವ ಆರೋಗ್ಯಕರ ಪರ್ಯಾಯ ಗೊಬ್ಬರ ಇದಾಗಿದೆ. ಅವುಗಳ ಮೂತ್ರವನ್ನು ಕೂಡ ಕಾಂಪೋಸ್ಟ್‌ ಗುಂಡಿಗಳಲ್ಲಿ ಉಪ ಉತ್ಪನ್ನಗಳಾಗಿ ಬಳಸಬಹುದು. ಅವುಗಳ ಅಪಾರ ಕೊಡುಗೆ ಪರಿಗಣಿಸಿ ಜಾನುವಾರುಗಳ ಸಂತತಿ ರಕ್ಷಿಸುವುದು ಅಗತ್ಯ. ಕರ್ನಾಟಕ ಆರ್ಥಿಕ ಸಮೀಕ್ಷೆ 2020- 21ರ ಪ್ರಕಾರ, ರಾಜ್ಯ ಜಿಡಿಪಿಗೆ ಕೃಷಿಯ ಕೊಡುಗೆ ರೂ. 1,28,045 ಕೋಟಿಯಷ್ಟಿದ್ದು ಜಾನವಾರುಗಳು ರೂ 52,688 ಕೋಟಿಯಷ್ಟು ಕೊಡುಗೆ ನೀಡುತ್ತದೆ ಎಂದು ಸರ್ಕಾರ ವಿವರಿಸಿದೆ. ಜಾನುವಾರುಗಳ ಸಂಖ್ಯೆಯಲ್ಲಿ ಆಗುತ್ತಿರುವ ಕುಸಿತದ ಬಗ್ಗೆಯೂ ಇದೇ ವೇಳೆ ನ್ಯಾಯಾಲಯದ ಗಮನ ಸೆಳೆಯಲಾಯಿತು.

1958ರ ಗುಜರಾತ್ ಸರ್ಕಾರ ಮತ್ತು ಮಿರ್ಜಾಪುರ ಮೋತಿ ಖುರೇಷಿ ಕಸಬ್ ಜಮಾತ್ ನಡುವಣ ಪ್ರಕರಣದಲ್ಲಿ ಗೋಹತ್ಯೆಯನ್ನು ತಡೆಯುವ ಗುಜರಾತ್‌ ಕಾಯಿದೆಯನ್ನು ಸುಪ್ರೀಂಕೋರ್ಟ್‌ ಎತ್ತಿಹಿಡಿದಿತ್ತು ಎಂದು ಸರ್ಕಾರ ನ್ಯಾಯಾಲಯಕ್ಕೆ ವಿವರಿಸಿತು.