Justice Suraj Govindaraj and Karnataka HC, Kalburgi bench 
ಸುದ್ದಿಗಳು

ಶಿಕ್ಷೆ ವಿರುದ್ಧ ಮೇಲ್ಮನವಿ ಸಲ್ಲಿಸಿದ ಮಾತ್ರಕ್ಕೆ ದೋಷಿ ಪರೋಲ್‌ಗೆ ಅನರ್ಹವಾಗಲ್ಲ: ಹೈಕೋರ್ಟ್‌

ಕರ್ನಾಟಕ ಕಾರಾಗೃಹ ನಿಯಮಗಳು 1974ರಲ್ಲಿ ಉಲ್ಲೇಖಿಸಿರುವ ಬಾಕಿ ಪ್ರಕರಣಗಳು ಪದಗಳಲ್ಲಿ ಮೇಲ್ಮನವಿಯನ್ನು ಪ್ರಕರಣಗಳು ಎನ್ನಲಾಗದು. ಇದು ದೋಷಿಯ ವಿರುದ್ಧ ಬಾಕಿ ಇರುವ ಇತರೆ ಕ್ರಿಮಿನಲ್‌ ಪ್ರಕರಣಗಳು ಎಂದು ಪರಿಗಣಿತವಾಗುತ್ತದೆ ಎಂದು ಪೀಠ ಹೇಳಿದೆ.

Bar & Bench

ದೋಷಿಯು ತನಗೆ ವಿಧಿಸಿರುವ ಶಿಕ್ಷೆಯ ವಿರುದ್ಧ ಮೇಲ್ಮನವಿ ಸಲ್ಲಿಸಿದ ಮಾತ್ರಕ್ಕೆ ಜೈಲಿನ ಅಧಿಕಾರಿಗಳು ಆತನಿಗೆ ಸಾಮಾನ್ಯವಾಗಿ ಪರೋಲ್‌ ನಿರಾಕರಿಸುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್‌ನ ಕಲಬುರ್ಗಿ ಪೀಠವು ಈಚೆಗೆ ಆದೇಶ ಮಾಡಿದೆ.

ಬೆಳಗಾವಿಯ ರಾಮದುರ್ಗ ತಾಲ್ಲೂಕಿನ ಅರ್ಜುನ್‌ಗೆ ಕಲಬುರ್ಗಿಯ ಕೇಂದ್ರ ಕಾರಾಗೃಹದ ಅಧಿಕಾರಿಗಳು ಪೆರೋಲ್‌ ನೀಡುವುದನ್ನು ವಿಳಂಬ ಮಾಡಿದ್ದ ನಿರ್ಧಾರವನ್ನು ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ಅವರ ನೇತೃತ್ವದ ಏಕಸದಸ್ಯ ಪೀಠವು ವಜಾ ಮಾಡಿದೆ. ವಿಚಾರಣಾಧೀನ ನ್ಯಾಯಾಲಯದ ದೋಷಿ ಆದೇಶ ಪ್ರಶ್ನಿಸಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದನ್ನು ಬಾಕಿ ಪ್ರಕರಣ ಎಂದು ಪರಿಗಣಿಸಲಾಗದು ಎಂಬ ಆಧಾರದಲ್ಲಿ ಜೈಲು ಪ್ರಾಧಿಕಾರದ ನಿರ್ಧಾರವನ್ನು ನ್ಯಾಯಾಲಯ ವಜಾ ಮಾಡಿದೆ.

ಕರ್ನಾಟಕ ಕಾರಾಗೃಹ ನಿಯಮಗಳು 1974ರಲ್ಲಿ ಉಲ್ಲೇಖಿಸಿರುವ ಬಾಕಿ ಪ್ರಕರಣಗಳು ಪದಗಳಲ್ಲಿ ಮೇಲ್ಮನವಿಯನ್ನು ಪ್ರಕರಣಗಳು ಎನ್ನಲಾಗದು. ಇದು ದೋಷಿಯ ವಿರುದ್ಧ ಬಾಕಿ ಇರುವ ಇತರೆ ಕ್ರಿಮಿನಲ್‌ ಪ್ರಕರಣಗಳು ಎಂದು ಪರಿಗಣಿತವಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.

ಮೇಲ್ಮನವಿಯೂ ‘ಪ್ರಕರಣ’ ಎಂಬ ಜೈಲು ಅಧಿಕಾರಿಗಳ ವಾದವನ್ನು ಅಂಗೀಕರಿಸಿದರೆ, ಅಪರಾಧಕ್ಕೆ ಶಿಕ್ಷೆಗೊಳಗಾದ ವ್ಯಕ್ತಿಯು ಮೇಲ್ಮನವಿ ಸಲ್ಲಿಸದೆ ಪೆರೋಲ್‌ಗಾಗಿ ಅರ್ಜಿ ಸಲ್ಲಿಸಿದರೆ ಅವರ ಅರ್ಜಿಯನ್ನು ಪರಿಗಣಿಸಲಾಗುವುದು. ದೋಷಿಯು ಮೇಲ್ಮನವಿ ಸಲ್ಲಿಸಿದ ಮಾತ್ರಕ್ಕೆ ಅವರ ಪೆರೋಲ್‌ ಅರ್ಜಿ ಪರಿಗಣಿಸುವುದಿಲ್ಲ ಎಂಬುದನ್ನು ಒಪ್ಪಲಾಗದು ಎಂದು ನ್ಯಾಯಾಲಯ ಹೇಳಿದೆ.

ದೋಷಿ ಆದೇಶ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ಬಾಕಿ ಇದ್ದಾಗ ಜಾಮೀನು ಅರ್ಜಿ ತಿರಸ್ಕೃತವಾದರೂ ಕಾನೂನಿನ ಅನ್ವಯ ಪೆರೋಲ್‌ ಅರ್ಜಿಯನ್ನು ಪರಿಗಣಿಸಬೇಕು. ಯಾವುದೇ ಆಧಾರ ಇಲ್ಲದ ಸಂದರ್ಭದಲ್ಲಿ ಪೆರೋಲ್‌ ಅರ್ಜಿಯನ್ನು ತಿರಸ್ಕರಿಸಬಹುದು. ಇಲ್ಲವಾದಲ್ಲಿ ಅದನ್ನು ಮಾನ್ಯ ಮಾಡಬೇಕು ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.

ಪ್ರಕರಣದ ಹಿನ್ನೆಲೆ: ಅರ್ಜಿದಾರರು 2018ರ ಏಪ್ರಿಲ್‌ 6ರಿಂದ ಜೈಲಿನಲ್ಲಿದ್ದು, ಹಲವು ಕಾರಣಗಳನ್ನು ನೀಡಿ 2022ರ ಡಿಸೆಂಬರ್‌ 7ರಂದು ಪೆರೋಲ್ ಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ, ಕ್ರಿಮಿನಲ್ ಮೇಲ್ಮನವಿ ಹಾಗೂ ಜಾಮೀನು ಅರ್ಜಿ ಬಾಕಿ ಇದೆ ಎಂಬ ಕಾರಣ ನೀಡಿದ ಜೈಲಿನ ಅಧೀಕ್ಷಕರು ಪೆರೋಲ್ ಅರ್ಜಿಯನ್ನು ತಿರಸ್ಕರಿಸಿದ್ದರು. ಅದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೊರೆಹೋಗಿದ್ದರು.

Arjun Vs State of Karnataka.pdf
Preview