Karnataka HC (Dharwad Bench) - Justices Suraj Govindaraj and G Basavaraja 
ಸುದ್ದಿಗಳು

ಸಾಕ್ಷ್ಯ ಆಧರಿಸಿ ಆರೋಪಿಯನ್ನು ದೋಷಿಯನ್ನಾಗಿಸಬೇಕೆ ವಿನಾ ನೈತಿಕ ಆಧಾರದ ಮೇಲಲ್ಲ: ಹೈಕೋರ್ಟ್‌

ಹಾಲಿ ಪ್ರಕರಣದಲ್ಲಿ ಆರೋಪಿಗಳನ್ನು ಅಪರಾಧದಲ್ಲಿ ಸಿಲುಕಿಸಲು ಯಾವುದೇ ಸಾಕ್ಷ್ಯಗಳಿಲ್ಲ. ಬದಲಿಗೆ ತನಿಖಾಧಿಕಾರಿ ಮತ್ತು ವಿಚಾರಣಾಧೀನ ನ್ಯಾಯಾಲಯದ ಊಹೆಗಳನ್ನು ಆಧರಿಸಲಾಗಿದೆ ಎಂದಿರುವ ಪೀಠ.

Bar & Bench

“ಅಧಿಕೃತ ಸಾಕ್ಷ್ಯಗಳಿಂದ ನಿರೂಪಿತವಾದ ಕಾನೂನು ತತ್ವದ ಮೇಲೆ ಆರೋಪಿಗಳನ್ನು ದೋಷಿಗಳನ್ನಾಗಿಸಬೇಕೆ ವಿನಾ ನೈತಿಕತೆಯ ಆಧಾರದ ಮೇಲಲ್ಲ” ಎಂದು ಅಭಿಪ್ರಾಯಪಟ್ಟ ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠವು ಇತ್ತೀಚೆಗೆ ಕೊಲೆ ಪ್ರಕರಣವೊಂದರಲ್ಲಿ ವಿಚಾರಣಾಧೀನ ನ್ಯಾಯಾಲಯ ವಿಧಿಸಿದ್ದ ಶಿಕ್ಷೆಯನ್ನು ಬದಿಗೆ ಸರಿಸಿದೆ.

ಧಾರವಾಡ ಜಿಲ್ಲೆಯ ಬಸವರಾಜ ಮಹಾದೇವಪ್ಪ ರಾಮಜಿ ಸೇರಿದಂತೆ ಒಂಭತ್ತು ಮಂದಿಯು ವಿಚಾರಣಾಧೀನ ನ್ಯಾಯಾಲಯದ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಕ್ರಿಮಿನಲ್‌ ಮೇಲ್ಮನವಿಗಳನ್ನು ನ್ಯಾಯಮೂರ್ತಿಗಳಾದ ಸೂರಜ್‌ ಗೋವಿಂದರಾಜ್‌ ಮತ್ತು ಜಿ ಬಸವರಾಜ ಅವರ ನೇತೃತ್ವದ ವಿಭಾಗೀಯ ಪೀಠವು ಮಾನ್ಯ ಮಾಡಿದೆ.

“ನಮ್ಮ ಕ್ರಿಮಿನಲ್‌ ಅಪರಾಧ ವ್ಯವಸ್ಥೆಯಲ್ಲಿ ಆರೋಪಿಯನ್ನು ದೋಷಿ ಎಂದು ಘೋಷಿಸಲು ಯಾವುದೇ ತೆರನಾದ ಅನುಮಾನಕ್ಕೆ ಆಸ್ಪದವಿಲ್ಲದೇ ಅದನ್ನು ಸಾಬೀತುಪಡಿಸಬೇಕು. ಹಾಲಿ ಪ್ರಕರಣದಲ್ಲಿ ಆರೋಪಿಗಳನ್ನು ಅಪರಾಧದಲ್ಲಿ ಸಿಲುಕಿಸಲು ಯಾವುದೇ ಸಾಕ್ಷ್ಯಗಳಿಲ್ಲ. ಬದಲಿಗೆ ತನಿಖಾಧಿಕಾರಿ ಮತ್ತು ವಿಚಾರಣಾಧೀನ ನ್ಯಾಯಾಲಯು ಊಹೆಗಳನ್ನು ಆಧರಿಸಲಾಗಿದೆ” ಎಂದು ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ.

“ಸಾವನ್ನಪ್ಪಿರುವ ವ್ಯಕ್ತಿ ಮತ್ತು ಮೊದಲ ಆರೋಪಿಯ ಸೊಸೆಗೆ ಅಕ್ರಮ ಸಂಬಂಧ ಇತ್ತು. ಆರೋಪ ಖಾತರಿಪಡಿಸಲು ಕುಟುಂಬ ಅಥವಾ ಗ್ರಾಮದ ಯಾವುದೇ ವ್ಯಕ್ತಿಯನ್ನು ತನಿಖೆ ಒಳಪಡಿಸಲಾಗಿಲ್ಲ. ಆರೋಪ ಪಟ್ಟಿಯಲ್ಲಿ ಬೀಸು ಹೇಳಿಕೆ ಮತ್ತು ಆರೋಪಗಳನ್ನು ಮಾಡಲಾಗಿದೆ. ಆದರೆ, ಸೂಕ್ತ ಸಾಕ್ಷ್ಯಗಳ ಮೂಲಕ ಸಾಬೀತುಪಡಿಸಲಾಗಿಲ್ಲ” ಎಂದು ಪೀಠ ಹೇಳಿದೆ.

ಪ್ರಕರಣದ ಹಿನ್ನೆಲೆ: 2018ರ ಆಗಸ್ಟ್‌ 27ರಂದು ದೂರುದಾರ ವೀರನಗೌಡ ಪಾಟೀಲ್‌ ಅವರು ದೂರು ದಾಖಲಿಸಿದ್ದರು. ಮೊದಲನೇ ಆರೋಪಿಯು ಲಿಂಗಾಯತ ಸಮುದಾಯಕ್ಕೆ ಸೇರಿದ್ದು, ಅವರ ಸೊಸೆಯ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಪರಿಶಿಷ್ಟ ಜಾತಿಯ ವ್ಯಕ್ತಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದರು. ಇದರ ಪ್ರತೀಕಾರ ತೀರಿಸಿಕೊಳ್ಳಲು ಮೊದಲ ಆರೋಪಿಯು ಸೊಸೆ ಮತ್ತು ಸಾವನ್ನಪ್ಪಿರುವ ವ್ಯಕ್ತಿಯ ಕೊಲೆ ಮಾಡಲು ಐದು ಲಕ್ಷ ರೂಪಾಯಿ ಸುಫಾರಿ ನೀಡಿದ್ದರು. ಪೂರ್ವ ನಿಯೋಜಿತ ಕೃತ್ಯದ ಭಾಗವಾಗಿ ಸಾವನ್ನಪ್ಪಿರುವ ವ್ಯಕ್ತಿಯನ್ನು ರಾತ್ರಿ ಊಟಕ್ಕೆ ಕರೆದೊಯ್ಯಲಾಗಿತ್ತು. ಮಾರ್ಗ ಮಧ್ಯದಲ್ಲಿ ನೈಸರ್ಗಿಕ ಕರೆ ಮುಗಿಸುವುದಾಗಿ ವಾಹನ ನಿಲ್ಲಿಸಿ, ಕೊಲೆ ಮಾಡಲಾಗಿತ್ತು ಎನ್ನುವುದು ಆರೋಪ.

ಈ ಹಿನ್ನೆಲೆಯಲ್ಲಿ ಐಪಿಸಿ ಸೆಕ್ಷನ್‌ಗಳಾದ 120ಬಿ, 201, 302 ಜೊತೆಗೆ 34ರ ಅಡಿ ಆರೋಪಿಗಳನ್ನು ದೋಷಿಗಳು ಎಂದು ಅವರಿಗೆ ಜೀವಾವಧಿ ಶಿಕ್ಷೆಯನ್ನು ಧಾರವಾಡದ ವಿಚಾರಣಾಧೀನ ನ್ಯಾಯಾಲಯ ವಿಧಿಸಿತ್ತು. ಇದನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು. ಆದರೆ, ಸೂಕ್ತ ಸಾಕ್ಷ್ಯಾಧಾರಗಳಿಲ್ಲದ ಕಾರಣ ವಿಚಾರಣಾಧೀನ ನ್ಯಾಯಾಲಯ ವಿಧಿಸಿದ್ದ ಶಿಕ್ಷೆಯನ್ನು ಹೈಕೋರ್ಟ್‌ ಬದಿಗೆ ಸರಿಸಿತು.