ನಿರ್ದಿಷ್ಟ ಬಗೆಯ ಆದೇಶಗಳನ್ನು ನೀಡುವಂತೆ ಉತ್ತರ ಪ್ರದೇಶ ಪೊಲೀಸರು ನ್ಯಾಯಾಧೀಶರ ಮೇಲೆ ಅದರಲ್ಲಿಯೂ ಚೀಫ್ ಜುಡಿಷಿಯಲ್ ಮ್ಯಾಜಿಸ್ಟ್ರೇಟ್‌ಗಳ (ಸಿಜೆಎಂ) ಮೇಲೆ ಒತ್ತಡ ಹಾಕುವ ಪ್ರಕರಣಗಳು ಹೆಚ್ಚುತ್ತಿವೆ ಎಂದು ಅಲಾಹಾಬಾದ್ ಹೈಕೋರ್ಟ್ ಶುಕ್ರವಾರ ಕಳವಳ ವ್ಯಕ್ತಪಡಿಸಿದೆ.
ಇದೇ ವೇಳೆ, ಉತ್ತರ ಪ್ರದೇಶವನ್ನು ಪೊಲೀಸ್ ರಾಜ್ಯವಾಗಲು ಎಂದಿಗೂ ಬಿಡುವುದಿಲ್ಲ ಎಂದು ನ್ಯಾಯಮೂರ್ತಿ ಅರುಣ್ ಕುಮಾರ್ ಸಿಂಗ್ ದೇಶ್ವಾಲ್ ಅವರು ಈ ವೇಳೆ ಗುಡುಗಿದರು.
ಆರೋಪಿಗಳ ಕಾಲಿಗೆ ಗುಂಡು ಹೊಡೆಯುವ ಉತ್ತರ ಪ್ರದೇಶ ಪೊಲೀಸರ ಪ್ರವೃತ್ತಿಯನ್ನು ನಿಯಂತ್ರಿಸಲು ಸರ್ಕಾರ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ವಿವರಿಸುವಂತೆ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ರಾಜೀವ್ ಕೃಷ್ಣ ಮತ್ತು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಗೃಹ) ಸಂಜಯ್ ಪ್ರಸಾದ್ ಅವರಿಂದ ಮಾಹಿತಿ ಪಡೆಯುವ ವೇಳೆ ನ್ಯಾಯಾಲಯವು ಮೇಲಿನಂತೆ ಹೇಳಿತು. ಈ ಇಬ್ಬರು ಅಧಿಕಾರಿಗಳಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಲು ನ್ಯಾಯಾಲಯ ಸೂಚಿಸಿತ್ತು.
ಸೇವೆಗೆ ಈಗಷ್ಟೇ ಸೇರ್ಪಡೆಯಾದ ಐಪಿಎಸ್ ಶ್ರೇಣಿಯ ಪೊಲೀಸ್ ಅಧಿಕಾರಿಗಳು ಜಿಲ್ಲಾ ನ್ಯಾಯಾಲಯಗಳಲ್ಲಿನ ನ್ಯಾಯಾಧೀಶರ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂಬ ಗಂಭೀರ ವಿಚಾರವನ್ನು ನ್ಯಾಯಾಲಯ ಪ್ರಸ್ತಾಪಿಸಿತು.
“ಯಾವುದೇ ಜಿಲ್ಲೆಯಲ್ಲಿಯೂ ಕಾನೂನು ಪಾಲನೆ ಆಗುತ್ತಿಲ್ಲ. ಸುಪ್ರೀಂ ಕೋರ್ಟ್ ನಿರ್ದೇಶನಗಳನ್ನು ಪಾಲಿಸಿದ ಒಂದೇ ಒಂದು ಪ್ರಕರಣವನ್ನೂ ನೋಡಿಲ್ಲ. ಅನೇಕ ಸಂದರ್ಭಗಳಲ್ಲಿ ಜಿಲ್ಲಾ ಪೊಲೀಸ್ ಮುಖ್ಯಸ್ಥರು ಮತ್ತು ನ್ಯಾಯಾಂಗ ಅಧಿಕಾರಿಗಳ ನಡುವೆ ಸಂಘರ್ಷ ಉಂಟಾಗುತ್ತಿದೆ. ನ್ಯಾಯಾಂಗ ಅಧಿಕಾರಿ ಅಥವಾ ಸಿಜೆಎಂ ಕಾನೂನು ಪಾಲನೆ ಬಗ್ಗೆ ಪ್ರಶ್ನಿಸಿದ ತಕ್ಷಣ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ನ್ಯಾಯಾಧೀಶರ ನಡುವೆ ಗೊಂದಲ ಆರಂಭವಾಗುತ್ತದೆ. ನಿರ್ದಿಷ್ಟ ಆದೇಶ ಪಡೆಯಲು ಪೊಲೀಸ್ ವರಿಷ್ಠಾಧಿಕಾರಿ, ನ್ಯಾಯಾಂಗ ಅಧಿಕಾರಿಗೆ ಒತ್ತಡ ಹೇರುವುದು ಈಗ ರೂಢಿಯಾಗಿಬಿಟ್ಟಿದೆ,” ಎಂದು ನ್ಯಾಯಾಲಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
“ಶಿಕ್ಷೆ ವಿಧಿಸುವುದು ನ್ಯಾಯಾಂಗದ ಅಧಿಕಾರವಾಗಿದ್ದು ಅದು ಪೊಲೀಸರ ಕೈಯಲ್ಲಿಲ್ಲ ಎಂದು ಅದು ಈ ವೇಳೆ ಕಿಡಿಕಾರಿತು.
ಹಿರಿಯ ಪೊಲೀಸ್ ಅಧಿಕಾರಿಗಳು ನ್ಯಾಯಾಲಯದ ಒಳಗೆ ಪ್ರವೇಶಿಸಿ ನ್ಯಾಯಾಧೀಶರ ಮೇಲೆ ಒತ್ತಡ ಹಾಕುತ್ತಾರೆ ಎಂಬ ಮಾಹಿತಿಯೂ ವಕೀಲ ಸಂಘಗಳಿಂದ ಲಭಿಸಿದೆ. ಪೊಲೀಸ್ ಮತ್ತು ನ್ಯಾಯಾಂಗ ಅಧಿಕಾರಿಗಳ ನಡುವೆ ಪರಸ್ಪರ ಗೌರವ ಅಗತ್ಯ; ಇಲ್ಲವಾದರೆ ಸಾಮಾನ್ಯ ಜನರಿಗೆ ಹಾನಿಯಾಗುತ್ತದೆ ಎಂದು ನ್ಯಾಯಾಲಯ ಎಚ್ಚರಿಸಿತು.
ವಿಚಾರಣೆ ನಡೆಸುತ್ತಿರುವ ನ್ಯಾಯಾಂಗ ಅಧಿಕಾರಿ ವಯಸ್ಸು ಇಲ್ಲವೇ ಸೇವಾನುಭವದಲ್ಲಿ ಕಿರಿಯರಾದರೂ, ಶಿಷ್ಟಾಚಾರದ ಪ್ರಕಾರ ಇವರು ಎಲ್ಲರಿಗಿಂತ ಮೇಲಿನವರಾಗಿರುತ್ತಾರೆ ಎಂದು ನ್ಯಾಯಾಲಯ ಒತ್ತಿ ಹೇಳಿತು.