ಕಳೆದ 14 ವರ್ಷದ ಹಿಂದೆ ನಗರವನ್ನು ಬೆಚ್ಚಿಬೀಳಿಸಿದ್ದ ಕಾರ್ಪೋರೇಷನ್ ಬ್ಯಾಂಕ್‌ನ ಚಿಕ್ಕಬಾಣಾವರ ಶಾಖೆಯಲ್ಲಿ ನಡೆದಿದ್ದ ಗ್ರಾಹಕನ ಕೊಲೆ ಮತ್ತು ₹15 ಲಕ್ಷ ದರೋಡೆ ಪ್ರಕರಣ ಸಂಬಂಧ ಬಿಹಾರ ರಾಜ್ಯದ ಮೂವರು ಮತ್ತು ಛತ್ತೀಸಗಢದ ಒಬ್ಬನಿಗೆ ಜೀವಾವಧಿ ಶಿಕ್ಷೆ ವಿಧಿಸಿ ಈಚೆಗೆ ಕರ್ನಾಟಕ ಹೈಕೋರ್ಟ್ ಆದೇಶಿಸಿದೆ.
ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿಗಳಾದ ಎಚ್ ಪಿ ಸಂದೇಶ್ ಮತ್ತು ಟಿ ವೆಂಕಟೇಶ್ ನಾಯಕ್ ಅವರ ವಿಭಾಗೀಯ ಪೀಠ ಭಾಗಶಃ ಪುರಸ್ಕರಿಸಿದೆ.
ಬಿಹಾರ ಮೂಲದ ದೇವೇಶ್ ಕುಮಾರ್ ಸಿಂಗ್, ವಿಕಾಸ್ ಕುಮಾರ್ ಗುಪ್ತಾ, ಇಮ್ರಾನ್ ಮತ್ತು ಛತ್ತೀಸ್‌ಗಢದ ಪ್ರೇಮ ಕುಮಾರ್ ಸಾಹುಗೆ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ. ನಾಲ್ವರೂ ಅಪರಾಧಿಗಳು ಎರಡು ವಾರದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಏಳನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಮುಂದೆ ಹಾಜರಾಗಬೇಕು. ವಿಚಾರಣಾಧೀನ ನ್ಯಾಯಾಲಯವು ಅಪರಾಧಿಗಳಿಗೆ ಶಿಕ್ಷೆ ಅನುಭವಿಸಲು ಜೈಲಿಗೆ ಕಳುಹಿಸಬೇಕು. ಅಪರಾಧಿಗಳಿಗೆ ವಿಧಿಸಲಾದ ತಲಾ ₹90 ಸಾವಿರ ಪೈಕಿ ಶೇ.80ರಷ್ಟು ಹಣವನ್ನು ಘಟನೆಯಲ್ಲಿ ಕೊಲೆಗೀಡಾದ ಮುರಳೀಧರ ಪತ್ನಿಗೆ ಪರಿಹಾರವಾಗಿ ನೀಡಬೇಕು ಎಂದು ಪೀಠ ನಿರ್ದೇಶಿಸಿದೆ.
2012ರ ನವೆಂಬರ್ 19ರಂದು ಸಂಜೆ 4 ಗಂಟೆಗೆ ತಲೆ ಟೋಪಿತೊಟ್ಟು ಕೈಯಲ್ಲಿ ಪಿಸ್ತೂಲ್ ಹಿಡಿದು ಕಾರ್ಪೋರೇಷನ್ ಬ್ಯಾಂಕಿನ ಚಿಕ್ಕಬಾಣಾವರ ಶಾಖೆಯ ಒಳ ನುಗ್ಗಿದ ದೇವೇಶ್ ಕುಮಾರ್ ಸಿಂಗ್, ಮ್ಯಾನೇಜರ್ ಅನ್ನು ಹೊರಗೆ ಕರೆದು ಹಣ ನೀಡಲು ಬೇಡಿಕೆಯಿಟ್ಟಿದ್ದ. ಅಲ್ಲದೆ, ಗ್ರಾಹಕರಿಗೆ ಪಿಸ್ತೂಲ್ ತೋರಿಸಿ ಕದಲದಂತೆ ಎಚ್ಚರಿಕೆ ನೀಡಿದ್ದ. ಆದರೆ, ಆ ಎಚ್ಚರಿಕೆಯನ್ನು ಪಾಲಿಸದ್ದಕ್ಕೆ ಮುರಳೀಧರ್‌ಗೆ ದೇವೇಶ್ ಗುಂಡಿಟ್ಟಿದ್ದ. ನಂತರ ಕ್ಯಾಷಿಯರ್‌ನಿಂದ ₹15.23 ಲಕ್ಷ ದರೋಡೆ ಮಾಡಿ ಪರಾರಿಯಾಗಿದ್ದನು.
ಈ ಕುರಿತು ಶಾಖೆಯ ಮ್ಯಾನೇಜರ್ ನೀಡಿದ ದೂರು ಆಧರಿಸಿ ತನಿಖೆ ನಡೆಸಿದ್ದ ಸೋಲದೇವನಹಳ್ಳಿ ಠಾಣಾ ಪೊಲೀಸರು, ಅದೇ ದಿನ ಬೆಂಗಳೂರಿನ ಸನ್ಮಾನ್ ಲಾಡ್ಜ್‌ನಲ್ಲಿ ತಂಗಿದ್ದ ದೇವೇಶ್‌ನನ್ನು ಬಂಧಿಸಿದ್ದರು. ಆತನಿಂದ ₹7 ಲಕ್ಷ ಜಫ್ತಿ ಮಾಡಿದ್ದರು. ಆತನನ್ನು ವಿಚಾರಣೆಗೆ ಒಳಪಡಿಸಿದಾಗ ದರೋಡೆಗೆ ಒಳಸಂಚು ರೂಪಿಸಿದ್ದ ಇತರೆ ಮೂವರ ಬಗ್ಗೆ ಬಾಯಿಬಿಟ್ಟಿದ್ದನು. ಆ ಮೂವರನ್ನು ಬಂಧಿಸಿ ಹಣ ಜಫ್ತಿ ಮಾಡಲಾಗಿತ್ತು. ಆನಂತರ ಪೊಲೀಸರು ಎಲ್ಲಾ ಆರೋಪಿಗಳ ವಿರುದ್ಧ ಪೊಲೀಸರು ಆರೋಪ ಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ್ದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ 7ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ವಿಕಾಸ್ ಕುಮಾರ್ ಗುಪ್ತಾ, ಇಮ್ರಾನ್ ಮತ್ತು ಪ್ರೇಮ ಕುಮಾರ್ ಸಾಹು ಅವರನ್ನು ಖುಲಾಸೆಗೊಳಿಸಿ 2016ರ ಏಪ್ರಿಲ್‌ನಲ್ಲಿ ಆದೇಶಿಸಿತ್ತು. ಮೊದಲನೆ ಆರೋಪಿ ದೇವೇಶ್ ಕುಮಾರ್ ಸಿಂಗ್ ಅನ್ನು ಅತಿಕ್ರಮ ಪ್ರವೇಶ ಮತ್ತು ದರೋಡೆ ಮತ್ತು ಅಕ್ರಮವಾಗಿ ಶಸ್ತ್ರಾಸ್ತ್ರ ಹೊಂದಿದದ ಅಪರಾಧದಡಿ ಜೈಲಿಗೆ ಕಳುಹಿಸಿತ್ತು. ಈ ಆದೇಶ ಪ್ರಶ್ನಿಸಿ ದೇವೇಶ್ ಕುಮಾರ್ ಸಿಂಗ್ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದನು. ಮತ್ತೊಂದೆಡೆ ಎಲ್ಲಾ ಆರೋಪಿಗಳನ್ನು ಕೊಲೆ, ದರೋಡೆ, ಕೊಲೆಯೊಂದಿಗೆ ದರೋಡೆ, ಅಪರಾಧಿಕ ಒಳಸಂಚು, ಅತಿಕ್ರಮ ಪ್ರವೇಶ ಮತ್ತು ಅಕ್ರಮ ಶಸ್ತ್ರಾಸ್ತ್ರ ಹೊಂದಿದ ಅಪರಾಧಗಳಲ್ಲಿ ದೋಷಿಗಳು ಎಂದು ತೀರ್ಮಾನಿಸ ಗರಿಷ್ಠ ಶಿಕ್ಷೆ ವಿಧಿಸಬೇಕು ಎಂದು ಕೋರಿ ರಾಜ್ಯ ಸರ್ಕಾರ ಮೇಲ್ಮನವಿ ಸಲ್ಲಿಸಿತ್ತು.
ದೇವೇಶ್ ಕುಮಾರ್ ಸಿಂಗ್ ಮೇಲ್ಮನವಿಯನ್ನು ವಜಾಗೊಳಿಸಿರುವ ಹೈಕೋರ್ಟ್, ರಾಜ್ಯ ಸರ್ಕಾರದ ಮೇಲ್ಮನವಿಯನ್ನು ಭಾಗಶಃ ಪುರಸ್ಕರಿಸಿ ವಿಚಾರಣಾಧೀನ ನ್ಯಾಯಾಲಯದ ಆದೇಶವನ್ನು ತಿದ್ದುಪಡಿ ಮಾಡಿ ಈ ತೀರ್ಪು ನೀಡಿದೆ.
ಸಾಕ್ಷ್ಯಧಾರಗಳ ಪ್ರಕಾರ ದೇವೇಸ್ ಕುಮಾರ್ ಸಿಂಗ್ ಬ್ಯಾಂಕ್‌ನೊಳಗೆ ಅತಿಕ್ರಮ ಪ್ರವೇಶ ಮಾಡಿ ಮುರಳೀಧನನ್ನು ಕೊಂದಿದ್ದಾನೆ. ಆತನೊಂದಿಗೆ ಅಪರಾಧಿಕ ಒಳಸಂಚು ನಡೆಸಿದ್ದ ಇತರೆ ಮೂವರು, ಬ್ಯಾಂಕಿನ ಹೊರಗಡೆ ನಿಂತಿದ್ದರು. ಬ್ಯಾಂಕ್ ಸೈರನ್ ಕೇಳಿ ಎಲ್ಲರೂ ಪರಾರಿಯಾಗಿದ್ದರು. ಅದಕ್ಕೆ ಪ್ರತ್ಯಕ್ಷದರ್ಶಿಗಳ ಹೇಳಿಕೆಯಿದೆ. ದರೋಡೆ ನಂತರ ಎಲ್ಲಾ ಆರೋಪಿಗಳು ಹಣ ಹಂಚಿಕೊಂಡಿರುವುದು ದೃಢಪಟ್ಟಿದೆ ಎಂದು ನ್ಯಾಯಾಲಯ ಹೇಳಿದೆ. ರಾಜ್ಯ ಸರ್ಕಾರದ ಪರ ಹೆಚ್ಚುವರಿ ಸರ್ಕಾರಿ ಅಭಿಯೋಜಕರಾದ ರಶ್ಮಿ ಜಾಧವ್ ವಾದಿಸಿದ್ದರು.