ಭ್ರಷ್ಟಾಚಾರ ಮತ್ತು ದುವರ್ತನೆಯ ಘಟನೆಗಳು ನ್ಯಾಯಾಂಗದ ಮೇಲಿನ ಸಾರ್ವಜನಿಕ ನಂಬಿಕೆಯನ್ನು ಕುಗ್ಗಿಸಬಹುದು ಎಂದು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ ಆರ್ ಗವಾಯಿ ಮಂಗಳವಾರ ಹೇಳಿದ್ದಾರೆ.
ಭಾರತೀಯ ನ್ಯಾಯಾಂಗದಲ್ಲಿ ಇಂತಹ ಪ್ರಕರಣಗಳು ಬೆಳಕಿಗೆ ಬಂದಿವೆ. ಈ ಹಿನ್ನೆಲೆಯಲ್ಲಿ ವ್ಯವಸ್ಥೆಯಲ್ಲಿ ನಂಬಿಕೆಯನ್ನು ಮರುಸ್ಥಾಪಿಸುವ ಮಾರ್ಗವು ತ್ವರಿತವಾಗಿಯೂ, ನಿರ್ಣಾಯಕ ಮತ್ತು ಪಾರದರ್ಶಕ ಕ್ರಮಗಳಿಂದಲೂ ಕೂಡಿರಬೇಕು ಎಂದು ಅವರು ಹೇಳಿದರು.
"ಭಾರತದಲ್ಲಿ, ಇಂತಹ ಪ್ರಕರಣಗಳು ಬೆಳಕಿಗೆ ಬಂದಾಗಲೆಲ್ಲಾ, ಸುಪ್ರೀಂ ಕೋರ್ಟ್ ನಿರಂತರವಾಗಿ ದುವರ್ತನೆಯನ್ನು ನಿಗ್ರಹಿಸುವಂತಹ ತಕ್ಷಣದ ಮತ್ತು ಸೂಕ್ತ ಕ್ರಮಗಳನ್ನು ತೆಗೆದುಕೊಂಡಿದೆ" ಎಂದು ಅವರು ಹೇಳಿದರು.
ಸಿಜೆಐ ಗವಾಯಿಯವರು ಬ್ರಿಟನ್‌ನ ಸುಪ್ರೀಂ ಕೋರ್ಟ್‌ನಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ 'ನ್ಯಾಯಾಂಗದ ಧರ್ಮಸಮ್ಮತತೆಯ ಕಾಪಾಡುವಿಕೆ ಮತ್ತು ಸಾರ್ವಜನಿಕ ವಿಶ್ವಾಸದ ಗಳಿಕೆ' ಎಂಬ ವಿಷಯದ ಕುರಿತು ಮಾತನಾಡುತ್ತಿದ್ದರು.
ಭ್ರಷ್ಟಾಚಾರದ ಆರೋಪ ಹೊತ್ತಿರುವ ನ್ಯಾಯಮೂರ್ತಿ ಯಶವಂತ್ ವರ್ಮಾ ವಿರುದ್ಧ ಕೇಂದ್ರ ಸರ್ಕಾರವು ವಾಗ್ದಂಡನೆಯ ಪ್ರಕ್ರಿಯೆಗಳನ್ನು ಪ್ರಾರಂಭಿಸಬಹುದು ಎಂಬ ವರದಿಗಳ ಹಿನ್ನೆಲೆಯಲ್ಲಿ ಸಿಜೆಐ ಅವರ ಹೇಳಿಕೆಗಳು ಮಹತ್ವ ಪಡೆದಿವೆ.
ನ್ಯಾಯಾಂಗದ ಮಹತ್ವವನ್ನು ಒತ್ತಿ ಹೇಳಿದ ಸಿಜೆಐ ಗವಾಯಿ ಅವರು, ಕೊಲಿಜಿಯಂ ವ್ಯವಸ್ಥೆಯ ಬಗ್ಗೆ ಟೀಕೆಗಳಿರಬಹುದು, ಆದರೆ ನ್ಯಾಯಾಂಗ ಸ್ವಾತಂತ್ರ್ಯವನ್ನು ಬಲಿಕೊಟ್ಟು ಪರಿಹಾರವು ಬರಬಾರದು ಎಂದು ಎಚ್ಚರಿಕೆಯ ಮಾತುಗಳನ್ನು ಹೇಳಿದರು. "ನ್ಯಾಯಾಧೀಶರು ಬಾಹ್ಯ ನಿಯಂತ್ರಣದಿಂದ ಮುಕ್ತರಾಗಿರಬೇಕು" ಎಂದು ಪ್ರತಿಪಾದಿಸಿದರು.
ನ್ಯಾಯಾಧೀಶರು ನಿವೃತ್ತಿಯ ನಂತರ ಸರ್ಕಾರದಲ್ಲಿ ಕೆಲಸ ಮಾಡುವುದನ್ನು ಅಥವಾ ಚುನಾವಣೆಯಲ್ಲಿ ಸ್ಪರ್ಧಿಸಲು ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡುವುದನ್ನು ಅವರು ತಮ್ಮ ಭಾಷಣದಲ್ಲಿ ವಿರೋಧಿಸಿದರು.
"ಚುನಾವಣೆಯಲ್ಲಿ ನ್ಯಾಯಮೂರ್ತಿಯೊಬ್ಬರು ಸ್ಪರ್ಧಿಸುವುದು ನ್ಯಾಯಾಂಗದ ಸ್ವಾತಂತ್ರ್ಯ ಮತ್ತು ನಿಷ್ಪಕ್ಷಪಾತದ ಬಗ್ಗೆ ಅನುಮಾನಗಳನ್ನು ಹುಟ್ಟಿಹಾಕಬಹುದು. ಅದು ಹಿತಾಸಕ್ತಿಯ ಸಂಘರ್ಷವಾಗಿಯೂ, ಸರ್ಕಾರದಿಂದ ನೆರವನ್ನು ಪಡೆಯುವ ಪ್ರಯತ್ನವಾಗಿಯೂ ಭಾಸವಾಗಬಹುದು. ನಿವೃತ್ತಿಯ ನಂತರದ ಅಂತಹ ತೊಡಗುವಿಕೆಯ ಸಮಯ ಸಂದರ್ಭಗಳು ನ್ಯಾಯಾಂಗದ ಸಮಗ್ರತೆಯ ಬಗೆಗಿನ ಸಾರ್ವಜನಿಕ ವಿಶ್ವಾಸಕ್ಕೆ ಧಕ್ಕೆ ತರಬಹುದು. ಭವಿಷ್ಯದಲ್ಲಿ ದೊರೆಯಬಹುದಾದ ಸರ್ಕಾರಿ ನೇಮಕಾತಿಗಳೆಡೆಗೆ ಕಣ್ಣಿರಿಸಿ ನ್ಯಾಯಿಕ ನಿರ್ಣಯಗಳನ್ನು ಕೈಗೊಳ್ಳಲಾಗಿದೆ ಎನ್ನುವ ಭಾವನೆ ಮೂಡಿಸಬಹುದು" ಎಂದು ಅವರು ಎಚ್ಚರಿಸಿದರು.
ನ್ಯಾಯಾಂಗದ ಸ್ವಾತಂತ್ರ್ಯ ಹಾಗೂ ಸಮಗ್ರತೆಯನ್ನು ಕಾಯ್ದುಕೊಳ್ಳುವ ಉದ್ದೇಶದಿಂದ ತಾವು ಮತ್ತು ತಮ್ಮ ಅನೇಕ ಸಹೋದ್ಯೋಗಿಗಳು ನಿವೃತ್ತಿಯ ನಂತರ ಯಾವುದೇ ಹುದ್ದೆಗಳನ್ನು ಒಪ್ಪಿಕೊಳ್ಳದೆ ಇರಲು ಪ್ರಮಾಣ ಮಾಡಿರುವುದಾಗಿ ಅವರು ಈ ವೇಳೆ ತಿಳಿಸಿದರು.