ಸಹಾಯಕ ಸರ್ಕಾರಿ ಅಭಿಯೋಜಕರು ಮತ್ತು (ಎಪಿಪಿ) ಸಹಾಯಕ ಸರ್ಕಾರಿ ವಕೀಲರ (ಎಜಿಪಿ) ನೇಮಕಾತಿಗಾಗಿ 2022ರ ಜುಲೈ 23 ಮತ್ತು 24ರಂದು ನಡೆದ ಪರೀಕ್ಷೆಯಲ್ಲಿ ಭ್ರಷ್ಟಾಚಾರ, ಅಕ್ರಮ ನಡೆದಿರುವ ಕುರಿತು ವ್ಯಾಪಕ ದೂರುಗಳು ಸಲ್ಲಿಕೆಯಾಗಿವೆ. ಈ ಬಗ್ಗೆ ಕೂಡಲೇ ಇಲಾಖಾ ತನಿಖೆ ನಡೆಸಿ, ತಪ್ಪಿತಸ್ಥರ ವಿವರಗಳೊಂದಿಗೆ 10 ದಿನಗಳ ಒಳಗಾಗಿ ವರದಿ ಸಲ್ಲಿಸುವಂತೆ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಸೂಚಿಸಿದ್ದಾರೆ.
ಖಾಲಿ ಇರುವ ಸರ್ಕಾರಿ ಅಭಿಯೋಜಕರು, ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕರು ಮತ್ತು ಸಹಾಯಕ ಸರ್ಕಾರಿ ಅಭಿಯೋಜಕರ ಹುದ್ದೆಗಳನ್ನು ತುಂಬುವ ಸಂಬಂಧ ಹೈಕೋರ್ಟ್ 2019ರ ಸೆಪ್ಟೆಂಬರ್ 27ರಂದು ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿಕೊಂಡಿತ್ತು. ಇದರ ಭಾಗವಾಗಿ ನೇಮಕಾತಿ ನಡೆದಿದೆ.
ಅಪರಾಧ ಪ್ರಕ್ರಿಯೆ ಸಂಹಿತಾ 1973ಯ ಸೆಕ್ಷನ್ 24 ಮತ್ತು 24ರ ಅನ್ವಯ ಸರ್ಕಾರಿ ಅಭಿಯೋಜಕರ ನೇಮಕ ಮಾಡಬೇಕಿದ್ದು, ಶೇ. 40ರಷ್ಟು ಹುದ್ದೆಗಳು ಖಾಲಿ ಇವೆ. ಸರ್ಕಾರದ ವಿಫಲತೆಯಿಂದಾಗಿ ಕ್ರಿಮಿನಲ್ ಪ್ರಕರಣಗಳಿಗೆ ಸಂಬಂಧಿಸಿದಂತೆ ನ್ಯಾಯದಾನಕ್ಕೆ ಭಾರಿ ಹಾನಿಯಾಗಿದೆ ಎಂದು ನ್ಯಾಯಾಲಯ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ದಾಖಲಿಸಿತ್ತು.
ಪ್ರಶ್ನೆ ಪತ್ರಿಕೆ ರೂಪಿಸುವ ಜವಾಬ್ದಾರಿಯನ್ನು ಬೆಂಗಳೂರಿನ ಭಾರತೀಯ ವಿಶ್ವವಿದ್ಯಾಲಯದ ರಾಷ್ಟ್ರೀಯ ಕಾನೂನು ಶಾಲೆಗೆ (ಎನ್‌ಎಲ್‌ಎಸ್‌ಐಯು) ವಹಿಸಲಾಗಿತ್ತು. ಈ ಮಧ್ಯೆ, ಈ ಪ್ರಶ್ನೆ ಪತ್ರಿಕೆಯಲ್ಲಿ ಸಾಂವಿಧಾನಿಕ ಕಾನೂನಿಗೆ ಸಂಬಂಧಿಸಿದಂತೆ ಹೆಚ್ಚು ಪ್ರಶ್ನೆಗಳಿದ್ದು, ಇದಕ್ಕೆ ಕರ್ನಾಟಕ ರಾಜ್ಯ ವಕೀಲರ ಪರಿಷತ್ (ಕೆಎಸ್‌ಬಿಸಿ) ಮತ್ತು ಬೆಂಗಳೂರು ವಕೀಲರ ಸಂಘ (ಎಎಬಿ) ಆಕ್ಷೇಪಿಸಿದ್ದರಿಂದ ಪರೀಕ್ಷೆಯನ್ನು ಮುಂದೂಡಲಾಗಿತ್ತು. ಅಂತಿಮವಾಗಿ 2022ರ ಜುಲೈ 23 ಮತ್ತು 24ರಂದು ಪರೀಕ್ಷೆ ನಡೆಸಲಾಗಿತ್ತು. 2022ರ ಡಿಸೆಂಬರ್ 15ರ ಒಳಗೆ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಬೇಕು ಎಂಬ ಗಡುವನ್ನೂ ಹೈಕೋರ್ಟ್, ರಾಜ್ಯ ಸರ್ಕಾರಕ್ಕೆ 2022ರ ಆಗಸ್ಟ್ 17ರಂದು ವಿಧಿಸಿತ್ತು.
ಆನಂತರ ಪರೀಕ್ಷೆ ಪೂರ್ಣಗೊಂಡು ನೇಮಕಾತಿಯೂ ಮುಗಿದಿತ್ತು. ಈ ಮಧ್ಯೆ, ರಾಜ್ಯ ಸರ್ಕಾರವು ಇಲಾಖಾ ತನಿಖೆಗೆ ಆದೇಶಿಸಿರುವುದು ಕುತೂಹಲ ಮೂಡಿಸಿದೆ.
“ಸಹಾಯಕ ಸರ್ಕಾರಿ ಅಭಿಯೋಜಕರು ಮತ್ತು ಸಹಾಯಕ ಸರ್ಕಾರಿ ವಕೀಲರ ನೇಮಕಾತಿ ಪರೀಕ್ಷೆಯನ್ನು ಎನ್‌ಎಲ್‌ಎಸ್‌ಐಯು ನಡೆಸಿದೆ. ಇಲ್ಲಿ ಯಾವುದೇ ತೆರನಾದ ಅಕ್ರಮಕ್ಕೆ ಅವಕಾಶವಿಲ್ಲ. ಇನ್ನು ವೈವಾದಲ್ಲಿ ಕಾನೂನು ಇಲಾಖೆಯ ಕಾರ್ಯದರ್ಶಿ (ಜಿಲ್ಲಾ ನ್ಯಾಯಧೀಶರ ಶ್ರೇಣಿ), ಪ್ರಾಸಿಕ್ಯೂಷನ್ ವಿಭಾಗದ ನಿರ್ದೇಶಕರು ಮತ್ತು ಗೃಹ ಇಲಾಖೆಯ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಅವರು ಇದ್ದರು. ವೈವಾದಲ್ಲಿ ನ್ಯಾಯಾಧೀಶರು ಇರುವುದರಿಂದ ಅಕ್ರಮಕ್ಕೆ ಅವಕಾಶ ಸಿಗುವ ಸಾಧ್ಯತೆ ತುಂಬಾ ಕಡಿಮೆ. ಸಮರ್ಥರಾಗಿರುವವರೇ ಬಹುತೇಕ ಆಯ್ಕೆಯಾಗಿದ್ದಾರೆ. ಅವಕಾಶ ವಂಚಿತರು ದೂರು ನೀಡಿರಬಹುದು. ಇದರ ಹಿಂದೆ ಬೆಂಗಳೂರು ವಕೀಲರ ಸಂಘದ ಕೆಲವು ಪದಾಧಿಕಾರಿಗಳ ಚಿತಾವಣೆ ಇದ್ದಂತೆ ಇದೆ” ಎಂದು ಹೆಸರು ಹೇಳಲು ಇಚ್ಛಿಸದ ಪದಾಧಿಕಾರಿಯೊಬ್ಬರು “ಬಾರ್ ಅಂಡ್ ಬೆಂಚ್”ಗೆ ತಿಳಿಸಿದರು.