ಸಂವಿಧಾನದಲ್ಲಿ ನ್ಯಾಯಾಂಗವು ಪ್ರತ್ಯೇಕ ಅಂಗವಾಗಿರುವುದರಿಂದ ಭ್ರಷ್ಟಾಚಾರದ ವಿಚಾರಕ್ಕೆ ನ್ಯಾಯಾಂಗವೇ ಪರಿಹಾರ ಕಂಡುಕೊಳ್ಳಬೇಕು ಎಂದು ಕಾನೂನು ಸಚಿವ ಕಿರೆನ್ ರಿಜಿಜು ಅವರು ಶುಕ್ರವಾರ ಲೋಕಸಭೆಗೆ ತಿಳಿಸಿದರು.
1997ರ ಮೇನಲ್ಲಿ ಪೂರ್ಣ ಪೀಠದ ಸಭೆಯಲ್ಲಿ ಸುಪ್ರೀಂ ಕೋರ್ಟ್ ಅಳವಡಿಸಿಕೊಂಡಿರುವ 'ಆಂತರಿಕ ಪ್ರಕ್ರಿಯೆ' ಮೂಲಕ ಉನ್ನತ ನ್ಯಾಯಾಂಗಕ್ಕೆ ಸಂಬಂಧಿಸಿದ ಹೊಣೆಗಾರಿಕೆಯ ಕುರಿತಾದ ವಿಷಯಗಳನ್ನು ನಿರ್ವಹಿಸಲಾಗುತ್ತದೆ ಎಂದು ಮುಂಗಾರು ಅಧಿವೇಶನದಲ್ಲಿ ಬಹುಜನ ಸಮಾಜ ಪಕ್ಷದ ಸಂಸದ ಮಲೂಕ್ ನಗರ್ ಅವರು ಎತ್ತಿದ ಪ್ರಶ್ನೆಗೆ ಕಾನೂನು ಸಚಿವ ರಿಜಿಜು ಅವರು ಲೋಕಸಭೆಗೆ ಉತ್ತರಿಸಿದ್ದಾರೆ.
“ಸಂವಿಧಾನದ ಅಡಿಯಲ್ಲಿ ನ್ಯಾಯಾಂಗವು ಸ್ವತಂತ್ರ ಅಂಗವಾಗಿರುವುದರಿಂದ ನ್ಯಾಯಾಂಗದಲ್ಲಿ ಭ್ರಷ್ಟಾಚಾರ ತಡೆಯುವ ವಿಚಾರಕ್ಕೆ ಸಂಬಂಧಿಸಿದಂತೆ ನ್ಯಾಯಾಂಗವೇ ಪರಿಹಾರ ಕಂಡುಕೊಳ್ಳಬೇಕು” ಎಂದು ರಿಜಿಜು ಹೇಳಿದರು.
ನ್ಯಾಯಾಂಗದಲ್ಲಿನ ಭ್ರಷ್ಟಾಚಾರ ಪರಿಹಾರಕ್ಕೆ ಸಂಬಂಧಿಸಿದಂತೆ ಆಂತರಿಕ ಪ್ರಕ್ರಿಯೆ ಚಾಲ್ತಿಯಲ್ಲಿರುವುದರಿಂದ ನ್ಯಾಯಮೂರ್ತಿಗಳ ನಡತೆಗೆ ಸಂಬಂಧಿಸಿದಂತೆ ದೂರು ಸ್ವೀಕರಿಸಲು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಮತ್ತು ಸಂಬಂಧಪಟ್ಟ ಹೈಕೋರ್ಟ್‌ಗಳ ಮುಖ್ಯ ನ್ಯಾಯಮೂರ್ತಿಗಳು ಅಧಿಕಾರ ಹೊಂದಿದ್ದಾರೆ ಎಂದು ಕಾನೂನು ಸಚಿವರು ಹೇಳಿದರು.
ಹೈಕೋರ್ಟ್ ನ್ಯಾಯಮೂರ್ತಿಗಳ ಬಗ್ಗೆ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳು ದೂರು ಸ್ವೀಕರಿಸಬಹುದಾಗಿದೆ. ಸಂವಿಧಾನದ 235ನೇ ವಿಧಿಯ ಅನ್ವಯ ಜಿಲ್ಲಾ ಮತ್ತು ಅಧೀನ ನ್ಯಾಯಾಲಯಗಳ ನಿಯಂತ್ರಣವು ಹೈಕೋರ್ಟ್ ಬಳಿ ಇರುತ್ತದೆ. ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿದ ದೂರು ಅಥವಾ ಮನವಿ ಸ್ವೀಕರಿಸಿದ ಬಳಿಕ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಮತ್ತು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ನಿರ್ಧಾರ ಕೈಗೊಳ್ಳುತ್ತಾರೆ. ಅಧೀನ ನ್ಯಾಯಾಲಯಗಳಲ್ಲಿನ ನ್ಯಾಯಾಧೀಶರಿಗೆ ಸಂಬಂಧಿಸಿದ ದೂರುಗಳನ್ನು ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್ ಅವರಿಗೆ ಸೂಕ್ತ ಕ್ರಮಕೈಗೊಳ್ಳಲು ವರ್ಗಾಯಿಸಲಾಗುತ್ತದೆ” ಎಂದು ಪ್ರತಿಕ್ರಿಯಿಸಿದ್ದಾರೆ.
ಅತಿ ಹೆಚ್ಚು ಬಾಕಿ ಉಳಿದಿರುವ ಪ್ರಕರಣಗಳ ದೇಶಗಳ ಪಟ್ಟಿಯಲ್ಲಿ ಭಾರತ ಅಗ್ರಸ್ಥಾನದಲ್ಲಿದ್ದು, ಇದಕ್ಕೆ ಅಂತ್ಯ ಹಾಡಲು ಇರುವ ನೀತಿ ಮತ್ತು ನ್ಯಾಯಾಲಯಗಳ ಕೊರತೆ, ಬಾಕಿ ಇರುವ ನ್ಯಾಯಮೂರ್ತಿ ಹುದ್ದೆ ಇತ್ಯಾದಿ ಬಗ್ಗೆ ಸರ್ಕಾರದ ನಿಲುವೇನು ಎಂಬ ಪ್ರಶ್ನೆಯನ್ನೂ ಮಲೂಕ್ ನಗರ್ ಎತ್ತಿದ್ದರು.
ಇದಕ್ಕೆ ಉತ್ತರಿಸಿರುವ ಸಚಿವರು, “ಬಾಕಿ ಪ್ರಕರಣಗಳನ್ನು ವಿಲೇವಾರಿ ಮಾಡುವ ವಿಚಾರವು ನ್ಯಾಯಾಂಗದ ವ್ಯಾಪ್ತಿಗೆ ಬಿಟ್ಟಿದ್ದಾಗಿದೆ. ಸಂಬಂಧಿತ ನ್ಯಾಯಾಲಯಗಳು ವಿವಿಧ ಪ್ರಕರಣಗಳ ವಿಲೇವಾರಿ ಯಾವುದೇ ಕಾಲಮಿತಿ ವಿಧಿಸಿಲ್ಲ” ಎಂದು ರಿಜಿಜು ಸ್ಪಷ್ಟಪಡಿಸಿದ್ದಾರೆ. “ಜಿಲ್ಲಾ ಮತ್ತು ಅಧೀನ ನ್ಯಾಯಾಲಯಗಳಿಗೆ ನ್ಯಾಯಾಧೀಶರನ್ನು ನೇಮಕ ಮಾಡುವ ವಿಚಾರದಲ್ಲಿ ಕೇಂದ್ರ ಸರ್ಕಾರದ ಪಾತ್ರ ಇಲ್ಲ” ಎಂದು ಹೇಳಿದರು.
ಅಧೀನ ನ್ಯಾಯಾಲಯಗಳಲ್ಲಿನ ಖಾಲಿ ಹುದ್ದೆ ಭರ್ತಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಲಿಕ್ ಮಜರ್ ಪ್ರಕರಣದಲ್ಲಿ 2007ರ ಜನವರಿ 4ರ ತೀರ್ಪಿನಲ್ಲಿ ಅಧೀನ ನ್ಯಾಯಾಲಯಗಳಿಗೆ ನ್ಯಾಯಾಧೀಶರ ನೇಮಕಾತಿ ಪ್ರಕ್ರಿಯೆಯು ಮಾರ್ಚ್ 31ರ ನಂತರ ಆರಂಭವಾಗಿ ಅದೇ ವರ್ಷದ ಅಕ್ಟೋಬರ್ 31ರಲ್ಲಿ ಪೂರ್ಣಗೊಳ್ಳಬೇಕು ಎಂದು ಕಾಲಮಿತಿ ವಿಧಿಸಿದೆ ಎಂದು ತಿಳಿಸಿದರು.
ಜುಲೈ 15ರ ಅಂತ್ಯಕ್ಕೆ ಸುಪ್ರೀಂ ಕೋರ್ಟ್, ಹೈಕೋರ್ಟ್‌ಗಳು ಮತ್ತು ಅಧೀನ ನ್ಯಾಯಾಲಯಗಳಲ್ಲಿ ಒಟ್ಟು 24,631 ಹುದ್ದೆಗಳಿದ್ದು, 19,289 ಹುದ್ದೆಗಳು ಭರ್ತಿಯಾಗಿವೆ ಎನ್ನುವ ಮಾಹಿತಿಯನ್ನು ಸಂಸತ್ತಿಗೆ ನೀಡಲಾಯಿತು.