ರಾಜ್ಯದ ಮ್ಯಾಜಿಸ್ಟ್ರೇಟ್, ದಿವಾಣಿ ಮತ್ತು ಸತ್ರ ನ್ಯಾಯಾಲಯಗಳಲ್ಲಿ ಭ್ರಷ್ಟಾಚಾರ ಅನೂಹ್ಯ ರೀತಿಯಲ್ಲಿ ಬೆಳೆಯುತ್ತಿದೆ ಎಂದು ಬೆಂಗಳೂರು ವಕೀಲರ ಸಂಘ (ಎಎಬಿ) ತೀವ್ರ ಕಳವಳ ವ್ಯಕ್ತಪಡಿಸಿದೆ.
ಈ ಕುರಿತಂತೆ ಸಂಘವು ನವೆಂಬರ್ 18ರಂದು ನಡೆದ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಸರ್ವಾನುಮತದ ನಿರ್ಣಯವನ್ನು ಅಂಗೀಕರಿಸಿದ್ದು, ವಿಚಾರಣಾ ನ್ಯಾಯಾಲಯಗಳ ಯಾವುದೇ ನ್ಯಾಯಾಧೀಶರ ವಿರುದ್ಧ ಇಂತಹ ಆರೋಪಗಳು ಕೇಳಿ ಬಂದಲ್ಲಿ ಹೈಕೋರ್ಟ್ ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ಬಲವಾಗಿ ಆಗ್ರಹಿಸಿದೆ.
ಸಂಘದ ಅಧ್ಯಕ್ಷ ವಿವೇಕ್ ರೆಡ್ಡಿ, ಉಪಾಧ್ಯಕ್ಷ ಸಿ ಎಸ್ ಗಿರೀಶ್ ಕುಮಾರ್, ಪ್ರಧಾನ ಕಾರ್ಯದರ್ಶಿ ಎಚ್ ವಿ ಪ್ರವೀಣ್ ಗೌಡ, ಖಜಾಂಚಿ ಶ್ವೇತಾ ರವಿಶಂಕರ್ ಮತ್ತು ಹೆಚ್ಚಿನ ಸಂಖ್ಯೆಯ ಸರ್ವ ಸದಸ್ಯರು ಹಾಜರಿದ್ದ ಈ ತುರ್ತು ಸಭೆಯಲ್ಲಿ ಕ್ರಮಕ್ಕೆ ಒತ್ತಾಯಿಸಿದ ಸರ್ವಾನುಮತದ ನಿರ್ಣಯಕ್ಕೆ ಸಹಿ ಹಾಕಲಾಗಿದೆ.
ಬಹು ದೀರ್ಘಕಾಲದಿಂದ ಚಾಲ್ತಿಯಲ್ಲಿರುವ ಎಂಟು ವಾರಗಳ ರೋಸ್ಟರ್ ಪದ್ಧತಿಯನ್ನು ಯಥಾಸ್ಥಿಯಲ್ಲೇ ಮುಂದುವರಿಸಬೇಕು ಮತ್ತು ಇದನ್ನು ಯಾವುದೇ ರೀತಿಯಲ್ಲಿ ಬದಲಾವಣೆ ಮಾಡುವುದನ್ನು ವಿರೋಧಿಸಲಾಗುತ್ತದೆ.
ಕರ್ನಾಟಕ ಹೈಕೋರ್ಟ್‌ಗೆ ಹೊರಗಿನ ರಾಜ್ಯಗಳ ನ್ಯಾಯಮೂರ್ತಿಗಳನ್ನು ಬೇಕಾಬಿಟ್ಟಿಯಾಗಿ ಹೇರುವ ಸುಪ್ರೀಂ ಕೋರ್ಟ್ ಕೊಲಿಜಿಯಂ ನಡೆ ಇಲ್ಲಿಗೇ ಸ್ಥಗಿತಗೊಳ್ಳಬೇಕು. ವರ್ಗಾವಣೆ ನೀತಿಯಿಂದ ಈಗಾಗಲೇ ಕರ್ನಾಟಕ ಹೈಕೋರ್ಟ್‌ಗೆ ಹೇಳಿಕೊಳ್ಳಲಾಗದಷ್ಟು ಅನ್ಯಾಯ ಉಂಟಾಗಿದೆ.
ಕರ್ನಾಟಕ ಹೈಕೋರ್ಟ್ ಕೊಲಿಜಿಯಂನಲ್ಲಿ ಕಡ್ಡಾಯವಾಗಿ ಸ್ಥಳೀಯ ನ್ಯಾಯಮೂರ್ತಿ ಇರುವಂತೆ ನೋಡಿಕೊಳ್ಳಬೇಕು. ಇದು ಇಂದಿನ ಅಗತ್ಯ.
ಬಹಳ ವರ್ಷಗಳಿಂದ ಹೈಕೋರ್ಟ್ ನ್ಯಾಯಮೂರ್ತಿ ಸ್ಥಾನಗಳಿಗೆ ವಕೀಲ ವೃಂದದಿಂದ ವಕೀಲರನ್ನು ನೇಮಕ ಮಾಡುವುದೇ ನಿಂತು ಹೋಗಿದೆ. ನಿಪುಣ ಮತ್ತು ನ್ಯಾಯನಿಷ್ಠರಾಗಿರುವ ಎಲ್ಲಾ ವರ್ಗಗಳಿಗೂ ಪ್ರಾತಿನಿಧ್ಯ ನೀಡುವ ಮೂಲಕ ಸಮರ್ಥ ವಕೀಲರನ್ನು ಪದನ್ನೋತಿಗೆ ಶಿಫಾರಸ್ಸು ಮಾಡಲು ಹೆಜ್ಜೆ ಇರಿಸಬೇಕು.
ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಗಳ ಮಂಜೂರಾತಿ ಸಂಖ್ಯೆ ಸದ್ಯ 62 ಇದ್ದು ಇದನ್ನು 100ಕ್ಕೆ ಏರಿಸಲು ಕೇಂದ್ರ ಸರ್ಕಾರ ಚಿಂತಿಸಬೇಕು. ಹೆಚ್ಚುತ್ತಿರುವ ವ್ಯಾಜ್ಯಗಳ ಸಂಖ್ಯೆ ಮತ್ತು ಧಾರವಾಡ, ಕಲಬುರ್ಗಿ ಪೀಠಗಳ ಬೆಳವಣಿಗೆಯನ್ನು ಗಮನದಲ್ಲಿ ಇರಿಸಿಕೊಂಡು ಈ ನಿಟ್ಟಿನಲ್ಲಿ ಮುಂದಡಿ ಇಡಬೇಕು.
ಪ್ರತಿದಿನದ ಕಾಸ್‌ಲಿಸ್ಟ್‌ಗಳನ್ನು ಅಂದಂದಿನ ರಾತ್ರಿ 9 ಅಥವಾ 9.30ಕ್ಕೆ ನವೀಕರಿಸಲಾಗುತ್ತಿದೆ. ಇದರಿಂದ ವಕೀಲರಿಗೆ ತೀವ್ರ ತೊಂದರೆಯಾಗುತ್ತಿದೆ. ಇದು ವಕೀಲರ ಆರೋಗ್ಯಗಳ ಮೇಲೂ ದುಷ್ಪರಿಣಾಮ ಬೀರುತ್ತಿದೆ. ಹೀಗಾಗಿ, ಅಂತಿಮ ಕಾಸ್‌ಲಿಸ್ಟ್ ಅನ್ನು ಅಂದಂದಿನ 6.30ಕ್ಕೇ ನವೀಕರಣ ಮಾಡಬೇಕು. ಈ ನಿಯಮ 2026ರ ಜನವರಿಯಿಂದ ಜಾರಿಗೆ ಬರುವಂತೆ ನೋಡಿಕೊಳ್ಳಬೇಕು.
ತೆರೆದ ನ್ಯಾಯಾಲಯಗಳಲ್ಲಿ ಮೆಮೊ (ಜ್ಞಾಪನ ಪತ್ರ) ಸಲ್ಲಿಸಿದರೂ ವ್ಯಾಜ್ಯದಲ್ಲಿರುವ ಪ್ರಕರಣ ಕಾಸ್ ಲಿಸ್ಟ್‌ಗಳಲ್ಲಿ ನಿಯುಕ್ತಿಗೊಳ್ಳುತ್ತಿಲ್ಲ. ಆದ್ದರಿಂದ, ಮೆಮೊ ಸಲ್ಲಿಸಿದ ಎಲ್ಲ ವ್ಯಾಜ್ಯದಲ್ಲಿರುವ ಪ್ರಕರಣ ಪೋಸ್ಟ್ ಆಗುವಂತೆ ನೋಡಿಕೊಳ್ಳಲು ಮುಖ್ಯ ನ್ಯಾಯಮೂರ್ತಿಗಳು ರಿಜಿಸ್ಟ್ರಿ ಅಧಿಕಾರಿಗಳಿಗೆ ನಿರ್ದೇಶಿಸಬೇಕು.
ಕರ್ನಾಟಕ ಹೈಕೋರ್ಟ್ ವಕೀಲರು ವಿನಮ್ರ ನಡವಳಿಕೆಗೆ ದೇಶದಲ್ಲೇ ಅತ್ಯಂತ ಹೆಸರುವಾಸಿ. ಆದರೆ, ಕೋರ್ಟ್ ಹಾಲ್ 4ರಲ್ಲಿ ಕಾರ್ಯ ನಿರ್ವಹಿಸುತ್ತಿರುವ ನ್ಯಾಯಮೂರ್ತಿ ಜಯಂತ ಬ್ಯಾನರ್ಜಿ ಹಾಗೂ ಕೋರ್ಟ್ ಹಾಲ್ 5ರಲ್ಲಿರುವ ನ್ಯಾಯಮೂರ್ತಿ ಡಿ ಕೆ ಸಿಂಗ್ ಅವರು ತೆರೆದ ನ್ಯಾಯಾಲಯದಲ್ಲಿ ವಕೀಲ ವೃಂದದ ಜೊತೆ ಕಲಾಪದಲ್ಲಿ ನಡೆದುಕೊಳ್ಳುವ ವರ್ತನೆಯಿಂದ ವಕೀಲರು ಆಘಾತಕ್ಕೆ ಒಳಗಾಗಿದ್ದಾರೆ ಎಂದು ಸಂಘವು ನಿರ್ಣಯದಲ್ಲಿ ವಿವರಿಸಿದೆ.
ಇವರ ಮುಂದೆ ಹಾಜರಾಗುವ ವಕೀಲರ ವಿನೀತ ಮನವಿಗಳನ್ನು ವಿನಾಕಾರಣ ಧಿಕ್ಕರಿಸಲಾಗುತ್ತಿದೆ. ಇವರಿಬ್ಬರ ಒರಟು ಮತ್ತು ಹೆಚ್ಚುಗಾರಿಕೆಯ ವರ್ತನೆಯಿಂದ ವಕೀಲರು ರೋಸಿ ಹೋಗಿದ್ದು ಕೂಡಲೇ ಈ ಕುರಿತಂತೆ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಮತ್ತು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಎಎಬಿ ಮನವಿ ಮಾಡಿದೆ.
ಕರ್ನಾಟಕ ಹೈಕೋರ್ಟ್ ಅನ್ನು ಈಗಿರುವ ಪಾರಂಪರಿಕ ಕಟ್ಟಡದಿಂದ ರೇಸ್ ಕೋರ್ಸ್, ಅರಮನೆ ಮೈದಾನ ಅಥವಾ ಬೆಂಗಳೂರಿನ ಹೃದಯ ಭಾಗದ ಯಾವುದಾದರೂ ಪ್ರಶಸ್ತ ಜಾಗಕ್ಕೆ ಶೀಘ್ರವೇ ಸ್ಥಳಾಂತರ ಮಾಡಬೇಕು ಎಂದು ಸಂಘವು ನಿರ್ಣಯಿಸಿದೆ.
ದಿನೇ ದಿನೇ ಕಾರ್ಯಭಾರ ಹೆಚ್ಚಳದಿಂದ ಹಾಲಿ ಪುರಾತನ ಕಟ್ಟಡ ನಲುಗಿ ಹೋಗಿದೆ. ಆದ್ದರಿಂದ, ವಾಹನಗಳ ಪಾರ್ಕಿಂಗ್‌ಗೆ ಯಥೇಚ್ಛವಾದ ಸ್ಥಳ ಹೊಂದಿದ, ವಕೀಲರ ಛೇಂಬರ್‌ಗಳಿಗೆ ಸೂಕ್ತ ಸ್ಥಳಾವಕಾಶ ಕಲ್ಪಿಸುವ ವಕೀಲರು ಕಕ್ಷಿದಾರರಿಗೆ ಮತ್ತು ಅಧಿಕಾರಿಗಳಿಗೆ ಹೆಚ್ಚಿನ ಕ್ಷಮತೆಯಿಂದ ಕೆಲಸ ಮಾಡಲು ಅನುವು ಮಾಡಿಕೊಡುವಂತಹ ಆತ್ಯಾಧುನಿಕ ಸೌಲಭ್ಯ ಹಾಗೂ ಮೂಲ ಸೌಕರ್ಯ ಅಳವಡಿಸಿಕೊಂಡ ಹೊಸ ಕಟ್ಟಡವನ್ನು ನಿರ್ಮಿಸಲು ಮುಖ್ಯಮಂತ್ರಿಗೆ ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ.