ಭಾರತದ ಸಂವಿಧಾನ
ಭಾರತದ ಸಂವಿಧಾನ 
ಸುದ್ದಿಗಳು

'ಸಂವಿಧಾನದ ಪೀಠಿಕೆ ಅಂಗೀಕರಿಸಿದ ದಿನಾಂಕ ಬದಲಿಸದೆ ಅದನ್ನು ತಿದ್ದುಪಡಿ ಮಾಡಬಹುದೇ?' ಸುಪ್ರೀಂ ಪ್ರಶ್ನೆ

Bar & Bench

ಸಂವಿಧಾನದ ಪೀಠಿಕೆಯನ್ನು ಔಪಚಾರಿಕವಾಗಿ ಅಂಗೀಕರಿಸಿದ ಮತ್ತು ಜಾರಿಗೆ ತಂದ ದಿನಾಂಕ ಬದಲಾಯಿಸದೆ ಸಂವಿಧಾನದ ಪೀಠಿಕೆಗೆ ತಿದ್ದುಪಡಿ ಮಾಡಬಹುದೇ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಪ್ರಶ್ನಿಸಿದೆ.

ಸಂವಿಧಾನಕ್ಕೆ ಮಾಡಲಾದ 42ನೇ ತಿದ್ದುಪಡಿ ಪ್ರಶ್ನಿಸಿ ಮತ್ತು ಸಂವಿಧಾನದ ಪೀಠಿಕೆಯಲ್ಲಿ ಭಾರತವನ್ನು ವಿವರಿಸಲು ಬಳಸಲಾಗಿರುವ ʼಸಮಾಜವಾದಿʼ ಮತ್ತು ʼಜಾತ್ಯತೀತʼ ಪದ ತೆಗೆದುಹಾಕಲು ಕೋರಿದ್ದ ಅರ್ಜಿಯ ವಿಚಾರಣೆ ಸುಪ್ರೀಂ ಕೋರ್ಟ್‌ನಲ್ಲಿ ನಡೆಯಿತು. ಬಿಜೆಪಿ ನಾಯಕ ಮತ್ತು ಕೇಂದ್ರದ ಮಾಜಿ ಸಚಿವ ಸುಬ್ರಮಣಿಯನ್‌ ಸ್ವಾಮಿ ಅವರು ಅರ್ಜಿ ಸಲ್ಲಿಸಿದ್ದರು.

ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ ಅವರಿದ್ದ ಪೀಠ ಪ್ರಕರಣದ ಕಕ್ಷಿದಾರರಿಗೆ ಅಕೆಡೆಮಿಕ್‌ ಹಂತದಲ್ಲಿ ತನ್ನ ಪ್ರಶ್ನೆಯನ್ನು ಪರಿಗಣಿಸುವಂತೆ ಕೇಳಿತು.

"ಅಕೆಡೆಮಿಕ್‌ ಹಂತದಲ್ಲಿ ಪರಿಗಣಿಸುವುದಾದರೆ, ದಿನಾಂಕ ಉಲ್ಲೇಖಿಸಿರುವ ಪೀಠಿಕೆಯನ್ನು ʼಅಳವಡಿಸಿಕೊಂಡು, ಜಾರಿಗೊಳಿಸಿ, ನಮಗೆ ನಾವೇ' ಎಂದ ನಂತರವಿರುವ ದಿನಾಂಕದ ನಮೂದನ್ನು ಬದಲಿಸದೆ ಮಾರ್ಪಡಿಸಬಹುದೇ ಎಂಬುದನ್ನು ತಿಳಿಸಿ. ಪೀಠಿಕೆಗೆ ತಿದ್ದುಪಡಿ ಮಾಡಲು ಸಾಧ್ಯವೇ ಇಲ್ಲ ಎಂದಲ್ಲ. ದಿನಾಂಕದೊಂದಿಗೆ ಇರುವ ಏಕೈಕ ಪೀಠಿಕೆ ಇದು" ಎಂದು ನ್ಯಾ. ದತ್ತಾ ಹೇಳಿದರು.

ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ . ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್‌

ಪ್ರಕರಣದ ಮುಂದಿನ ವಿಚಾರಣೆ ಏಪ್ರಿಲ್‌ ಕೊನೆಯ ವಾರದಲ್ಲಿ ನಡೆಯಲಿದೆ.

ಸಂವಿಧಾನದ ಪೀಠಿಕೆಯಲ್ಲಿ ಭಾರತದ ವಿವರಣೆಯನ್ನು "ಸಾರ್ವಭೌಮ ಪ್ರಜಾಪ್ರಭುತ್ವ ಗಣರಾಜ್ಯ" ದಿಂದ "ಸಾರ್ವಭೌಮ, ಸಮಾಜವಾದಿ, ಜಾತ್ಯತೀತ, ಪ್ರಜಾಪ್ರಭುತ್ವ ಗಣರಾಜ್ಯ" ಎಂದು ಬದಲಾಯಿಸಿದ ಸಂವಿಧಾನದ 42ನೇ ತಿದ್ದುಪಡಿಯನ್ನು ಸ್ವಾಮಿ ಅವರು ಪ್ರಶ್ನಿಸಿದ್ದಾರೆ.

ರಾಜಕೀಯ ಪಕ್ಷಗಳು ನೋಂದಾಯಿಸಿಕೊಳ್ಳಬೇಕಾದರೆ ಜಾತ್ಯತೀತತೆಯನ್ನು ಎತ್ತಿಹಿಡಿಯುವ ಭರವಸೆ ನೀಡಬೇಕಾಗುತ್ತದೆ ಎಂದು ಹೇಳುವ 1951ರ ಪ್ರಜಾ ಪ್ರತಿನಿಧಿ ಕಾಯಿದೆಯ ಸೆಕ್ಷನ್‌ಗಳನ್ನು ತೆಗೆದುಹಾಕುವಂತೆಯೂ ಸ್ವಾಮಿ ಅವರು ಮನವಿ ಮಾಡಿದ್ದರು. ದೇಶದ ಮೇಲೆ ಕರಾಳ ತುರ್ತು ಪರಿಸ್ಥಿತಿ ಹೇರಲಾಗಿದ್ದ ಸಂದರ್ಭದಲ್ಲಿ ಈ ಪದಗಳನ್ನು ಪೀಠಿಕೆಗೆ ಅಳವಡಿಸಿ ತಿದ್ದುಪಡಿ ಮಾಡಲಾಗಿದೆ ಎಂದು ಅವರು ದೂರಿದ್ದಾರೆ.

ಸಿಪಿಐ ನಾಯಕ ಮತ್ತು ರಾಜ್ಯಸಭಾ ಸದಸ್ಯ ಬಿನೋಯ್ ವಿಶ್ವಂ ಮನವಿಗೆ ವಿರೋಧ ವ್ಯಕ್ತಪಡಿಸಿದ್ದರು. ಸ್ವಾಮಿ ಅವರ ಮನವಿಯು ಕಾನೂನಿನ ಪ್ರಕ್ರಿಯೆಯ ದುರುಪಯೋಗವಾಗಿದ್ದು, ಅರ್ಹತೆಯಿಲ್ಲದಿರುವ ಅರ್ಜಿಯು ದಂಡದೊಂದಿಗೆ ವಜಾಗೊಳಿಸಲು ಅರ್ಹವಾಗಿದೆ ಎಂದು ವಿಶ್ವಂ ಅವರ ಪರ ವಕೀಲ ಶ್ರೀರಾಮ್ ಪರಕ್ಕಾಟ್ ವಾದಿಸಿದ್ದರು. ಸ್ವಾಮಿ ಅವರ ಪ್ರಕರಣದೊಂದಿಗೆ ಈ ಮನವಿಯನ್ನೂ ನ್ಯಾಯಾಲಯ ವಿಚಾರಣೆ ನಡೆಸಲಿದೆ.