Justice Rohinton Nariman
Justice Rohinton Nariman 
ಸುದ್ದಿಗಳು

ದ್ವೇಷ ಭಾಷಣದ ವಿರುದ್ಧ ಕ್ರಿಮಿನಲ್ ಕಾನೂನಿನ ಬದಲು ಸಿವಿಲ್ ದಾವೆ ಬಳಸಿ: ನ್ಯಾ. ರೋಹಿಂಟನ್ ನಾರಿಮನ್

Bar & Bench

ದ್ವೇಷದ ಮಾತುಗಳು ಸೌಹಾರ್ದ, ಭ್ರಾತೃತ್ವವನ್ನು ಹಾಳು ಮಾಡಲಿದ್ದು ಅವುಗಳನ್ನು ಕಾನೂನಾತ್ಮಕವಾಗಿ ಎದುರಿಸಬೇಕಿದೆ ಎಂದು ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ರೋಹಿಂಟನ್ ಫಾಲಿ ನಾರಿಮನ್ ಹೇಳಿದರು.

ನವದೆಹಲಿಯಲ್ಲಿ ಶುಕ್ರವಾರ ನಡೆದ ವಿ ಎಂ ತಾರ್ಕುಂಡೆ ಸ್ಮಾರಕ 13ನೇ ಉಪನ್ಯಾಸ ಕಾರ್ಯಕ್ರಮದಲ್ಲಿ 'ಹಕ್ಕುಗಳು, ಕರ್ತವ್ಯಗಳು, ನಿರ್ದೇಶಕ ತತ್ವಗಳು: ಯಾವುದು ಮೂಲಭೂತವಾದುದು' ಎಂಬ ವಿಷಯದ ಕುರಿತು ಅವರು ಮಾತನಾಡಿದರು.

ದ್ವೇಷ ಭಾಷಣದ ವಿರುದ್ಧ ಕ್ರಿಮಿನಲ್‌ ದಾವೆ ಹೂಡುವುದು ಸಾಮಾನ್ಯ ಸಂಗತಿ. ಆದರೆ ಆದಕ್ಕೆ ಸಿವಿಲ್‌ ದಾವೆ ಎಂಬ ಮತ್ತೊಂದು ಕಾನೂನು ಪರಿಹಾರವಿದೆ. ದ್ವೇಷ ಭಾಷಣದ ವಿರುದ್ಧ ಜನ ಸಲ್ಲಿಸಿದ ಮೊಕದ್ದಮೆಗಳನ್ನು ಸಿವಿಲ್ ನ್ಯಾಯಾಲಯಗಳು ಕೈಗೆತ್ತಿಕೊಂಡು ದಂಡನೆ ವಿಧಿಸಬೇಕೆಂದು ಅವರು ಸಲಹೆ ನೀಡಿದರು.

ಸಂವಿಧಾನದ 51ಎ(ಎಫ್‌) ಅಡಿಯಲ್ಲಿ ಮೂಲಭೂತ ಕರ್ತವ್ಯದ ಆಧಾರದಲ್ಲಿ ಸಿವಿಲ್‌ ನ್ಯಾಯಾಲಯಗಳು ಅಂತಹ ದಾವೆಗಳ ಮೇಲೆ ಹೇಗೆ ಕೆಲಸ ಮಾಡಬಹುದು ಎಂಬುದನ್ನು ಅವರು ವಿವರಿಸಿದರು. ಸಂವಿಧಾನದ ಮೂಲಭೂತ ಕರ್ತವ್ಯಗಳ ಅಧ್ಯಾಯ  ನ್ಯಾಯಾಲಯದ ಪಾತ್ರದ ಬಗ್ಗೆ ಮೌನ ತಾಳುತ್ತದೆ. ಹೀಗಾಗಿ ಈ ಮೌನವನ್ನು ನ್ಯಾಯಾಲಯಗಳು ಭರ್ತಿ ಮಾಡಬೇಕು ಎಂದು ಅವರು ಹೇಳಿದರು.

"ದ್ವೇಷ ಭಾಷಣದ ವಿರುದ್ಧ ನಾಗರಿಕರು ಅರ್ಜಿ ಸಲ್ಲಿಸಿದ ಕೂಡಲೇ, ಮೂಲಭೂತ ಕರ್ತವ್ಯಗಳ ಕಾರಣಕ್ಕೆ ನ್ಯಾಯಾಲಯ ಡಿಕ್ಲರೆಷನ್‌ ಮತ್ತು ತಡೆಯಾಜ್ಞೆ ನೀಡಬಹುದು ಜೊತೆಗೆ ದಂಡನೆಯನ್ನು ಕೂಡ ವಿಧಿಸಬಹುದು " ಎಂದು ನ್ಯಾಯಮೂರ್ತಿ ನಾರಿಮನ್ ಹೇಳಿದರು.

ಜೇಬಿಗೆ ಹೊರೆಯಾಗುವ ನೋವು ಬೇರೆ ನೋವುಗಳಿಗಿಂತ ಮಿಗಿಲಾದುದು ಎಂದು ಸಿವಿಲ್‌ ದಂಡ ಸ್ವರೂಪ ಪರಿಣಾಮಕಾರಿಯಾಗುವ ಸಾಧ್ಯತೆಯತ್ತ ಬೆರಳು ಮಾಡಿದರು. ಭ್ರಾತೃತ್ವ ಮತ್ತು ಸಾಮರಸ್ಯವನ್ನು ಉತ್ತೇಜಿಸುವಲ್ಲಿ ಸಿವಿಲ್ ಮೊಕದ್ದಮೆಗಳ ದಂಡನೆ ಹೆಚ್ಚು ಪರಿಣಾಮಕಾರಿಯಾಗಬಲ್ಲದು ಎಂದು ಅವರು ತಿಳಿಸಿದರು.

"ನಮ್ಮ ಸಂಯುಕ್ತ ಸಂಸ್ಕೃತಿ ಗೌರವಿಸುವ ಕುರಿತಂತೆ ನಾವು ನಿರ್ವಹಿಸಬಹುದಾದ  ಮಹತ್ತರ ಮೂಲಭೂತ ಕರ್ತವ್ಯ ಇದೆ. ಇದು ಅತ್ಯಂತ ಮುಖ್ಯವಾಗಿದ್ದು  ನನ್ನ ಪ್ರಕಾರ, ವಿಶೇಷವಾಗಿ ಈ ಸಮಯದಲ್ಲಿ  ರಾಷ್ಟ್ರಕ್ಕೆ ಭ್ರಾತೃತ್ವ ಬಹಳ ಮುಖ್ಯವಾಗಿದೆ... ದ್ವೇಷ ಭಾಷಣ ಸಾಮರಸ್ಯ ಮತ್ತು ಸಹೋದರತ್ವಕ್ಕೆ  ಅಡ್ಡಿಯಾಗಿದೆ" ಎಂದು ಅವರು ಹೇಳಿದರು.

ದ್ವೇಷ ಭಾಷಣದ ವಿರುದ್ಧ ಪ್ರತಿ ಅಂಗವೂ ಹೋರಾಡಬೇಕು ಎಂದು ಸುಪ್ರೀಂ ಕೋರ್ಟ್‌ ಇತ್ತೀಚೆಗೆ ನೀಡಿದ ತೀರ್ಪನ್ನು ಸ್ವಾಗತಿಸಿದ ಅವರು ಇದಕ್ಕೆ ಜನರ ಸಹಕಾರ ಅಗತ್ಯ ಎಂದರು.

ತಾರ್ಕುಂಡೆ ಸ್ಮಾರಕ ಪ್ರತಿಷ್ಠಾನದ ಅಧ್ಯಕ್ಷರಾಗಿರುವ ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಮದನ್‌ ಬಿ ಲೋಕೂರ್‌ ಈ ಸಂದರ್ಭದಲ್ಲಿ ಮಾತನಾಡಿದರು.