protein powder  
ಸುದ್ದಿಗಳು

ಫ್ಲಿಪ್‌ಕಾರ್ಟ್‌ ಮೂಲಕ ನಕಲಿ ಪ್ರೋಟಿನ್ ಪುಡಿ ಮಾರಾಟ: ₹30,000 ದಂಡ ವಿಧಿಸಿದ ಗ್ರಾಹಕ ನ್ಯಾಯಾಲಯ

ದೂರುದಾರರು ಒದಗಿಸಿರುವ ದಾಖಲೆಗಳು ಹಾಗೂ ಸಾಕ್ಷ್ಯ ನಕಲಿ ಉತ್ಪನ್ನ ಮಾರಾಟವನ್ನು ಸ್ಪಷ್ಟವಾಗಿ ಸಾಬೀತುಪಡಿಸಿರುವುದಾಗಿ ನ್ಯಾಯಾಲಯ ಆದೇಶದಲ್ಲಿ ತಿಳಿಸಿದೆ.

Bar & Bench

ಫ್ಲಿಪ್‌ಕಾರ್ಟ್ ಮೂಲಕ ಗ್ರಾಹಕರಿಗೆ ನಕಲಿ ಪ್ರೋಟೀನ್ ಪುಡಿ ಮಾರಾಟ ಮಾಡುತ್ತಿದ್ದ ಚಿಲ್ಲರೆ ವ್ಯಾಪಾರಿಯೊಬ್ಬರಿಗೆ ಪಶ್ಚಿಮ ಬಂಗಾಳ ರಾಜ್ಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ಈಚೆಗೆ ₹ 30,000 ದಂಡ ವಿಧಿಸಿದೆ [ಜಮಾಲ್ ಹೈದರ್‌ ಮತ್ತು ಫ್ಲಿಪ್‌ಕಾರ್ಟ್ ಇಂಟರ್‌ನೆಟ್‌ ಪ್ರೈವೇಟ್ ಲಿಮಿಟೆಡ್ ಇನ್ನಿತರರ ನಡುವಣ ಪ್ರಕರಣ].

ಗ್ರಾಹಕರಿಗೆ ₹ 6,524 ಮರುಪಾವತಿಸುವಂತೆ ಚಿಲ್ಲರೆ ವ್ಯಾಪಾರಿಗೆ ಆಯೋಗ ಆದೇಶಿಸಿದೆ. ದೂರನ್ನು ಚಿಲ್ಲರೆ ವ್ಯಾಪಾರಿ ಪ್ರಶ್ನಿಸಿಲ್ಲ ಜೊತೆಗೆ ದೂರುದಾರರು ಒದಗಿಸಿರುವ ದಾಖಲೆಗಳು ಹಾಗೂ ಸಾಕ್ಷ್ಯ ನಕಲಿ ಉತ್ಪನ್ನ ಮಾರಾಟವನ್ನು ಸ್ಪಷ್ಟವಾಗಿ ಸಾಬೀತುಪಡಿಸಿರುವುದಾಗಿ ಅಧ್ಯಕ್ಷತೆ ವಹಿಸಿದ್ದ ಕುಂದನ್‌ ಕುಮಾರ್‌ ಕೊರೈ ಮತ್ತು ಸದಸ್ಯ ಸ್ವಪನ್‌ ಕುಮಾರ್‌ ದಾಸ್‌ ಅವರಿದ್ದ ಪೀಠ ತಿಳಿಸಿತು.

ದೂರುದಾರರು ಅಮೆರಿಕ ಮೂಲದ ಮಸಲ್‌ಟೆಕ್‌ನಿಂದ ತಯಾರಿಸಲಾದ ಪುಡಿಯನ್ನು ಆರ್ಡರ್‌ ಮಾಡಿದ್ದರು. ಆದರೆ ಅದರಲ್ಲಿ 'ಸ್ಕ್ರ್ಯಾಚ್ ಕೋಡ್' ಕಂಡುಬಂದಿರಲಿಲ್ಲ ಹೀಗಾಗಿ ಅವರು ಫ್ಲಿಪ್‌ಕಾರ್ಟ್‌ ಗ್ರಾಹಕ ಕೇಂದ್ರವನ್ನು ಸಂಪರ್ಕಿಸಿದರು.

ಮಸಲ್‌ಟೆಕ್‌ ಪೂರಕಗಳ ಆಮದುದಾರರಾದ ಶ್ರೀ ಬಾಲಾಜಿ ಓವರ್‌ಸೀಸ್ ಅನ್ನು ಸಂಪರ್ಕಿಸಿದ ಫ್ಲಿಪ್‌ಕಾರ್ಟ್‌ ಗ್ರಾಹಕ ಕೇಂದ್ರ ಉತ್ಪನ್ನದ ನೈಜತೆ ಪರಿಶೀಲಿಸಲು ಸಲಹೆ ನೀಡಿತು. ಇತ್ತ ಉತ್ಪನ್ನ ನಕಲಿ ಎಂದು ಆಮದುದಾರರು ದೃಢಪಡಿಸಿದರು.

ಈ ಹಿನ್ನೆಲೆಯಲ್ಲಿ ಹಣ ಮರುಪಾವತಿಸುವಂತೆ ಚಿಲ್ಲರೆ ವ್ಯಾಪಾರಿಯನ್ನು ದೂರುದಾರರು ಸಂಪರ್ಕಿಸಿದರು. ಆದರೆ ಆತ ಹಣ ನೀಡಿದ ಕಾರಣ ಅವರು ಫ್ಲಿಪ್‌ಕಾರ್ಟ್‌ ಮತ್ತು ಚಿಲ್ಲರೆ ವ್ಯಾಪಾರಿ ವಿರುದ್ಧ ಆಯೋಗಕ್ಕೆ ಅರ್ಜಿ ಸಲ್ಲಿಸಿದರು. ಆಮದುದಾರರನ್ನು ಕೂಡ ಪ್ರತಿವಾದಿಯನ್ನಾಗಿ ಮಾಡಲಾಗಿತ್ತು.

ತಾನು ಕೇವಲ ಮಧ್ಯಸ್ಥಿಕೆದಾರನಾಗಿದ್ದು ಉತ್ಪನ್ನದ ಮಾರಾಟವನ್ನಷ್ಟೇ ಸುಗಮಗೊಳಿಸುವುದಾಗಿ ಫ್ಲಿಪ್‌ಕಾರ್ಟ್‌ ಆಯೋಗಕ್ಕೆ ತಿಳಿಸಿತು. ಅಲ್ಲದೆ ಮಾರಾಟಗಾರರನ್ನು ಕಪ್ಪುಪಟ್ಟಿಗೆ ಸೇರಿಸಿರುವುದಾಗಿ ಆಯೋಗಕ್ಕೆ ತಿಳಿಸಿತು.

ಇತ್ತ ದೂರನ್ನು ಚಿಲ್ಲರೆ ವ್ಯಾಪಾರಿ ಪ್ರಶ್ನಿಸದೇ ಇದ್ದುದರಿಂದ ಆಯೋಗ ಏಕ ಪಕ್ಷೀಯ ಆದೇಶ ನೀಡಿತು.  

ಗ್ರಾಹಕ ಸಂರಕ್ಷಣಾ (ಇ-ಕಾಮರ್ಸ್) ನಿಯಮಾವಳಿ 5 (ಮಾರುಕಟ್ಟೆ ಇ-ಕಾಮರ್ಸ್ ಘಟಕಗಳ ಹೊಣೆಗಾರಿಕೆಗಳು) ಅಡಿಯಲ್ಲಿನ ಹೊಣೆಗಾರಿಕೆಯನ್ನು ಫ್ಲಿಪ್‌ಕಾರ್ಟ್‌ ಉಲ್ಲಂಘಿಸದೇ ಇರುವುದರಿಂದ ಅದರ ವಿರುದ್ಧ ಆರೋಪಗಳು ಸಾಬೀತಾಗಿಲ್ಲ ಎಂದು ಆಯೋಗ ನಿರ್ಧರಿಸಿತು.

ಆದರೂ, ಗಂಭೀರವಾದ ಆರೋಗ್ಯ ತೊಡಕುಗಳಿಗೆ ಕಾರಣವಾಗಬಹುದಾದ್ದರಿಂದ ಫ್ಲಿಪ್‌ಕಾರ್ಟ್ ನಕಲಿ ಖಾದ್ಯ ಉತ್ಪನ್ನದ ಮಾರಾಟದ ಬಗ್ಗೆ ಕಟ್ಟುನಿಟ್ಟಾದ ಕ್ರಮ ಕೈಗೊಳ್ಳಬೇಕಿತ್ತು ಎಂದು ಆಯೋಗ ಅಸಮಾಧಾನ ವ್ಯಕ್ತಪಡಿಸಿತು. ಮಾರಾಟಗಾರರ ವಿರುದ್ಧ ಫ್ಲಿಪ್‌ಕಾರ್ಟ್ ಕ್ರಮ ಕೈಗೊಳ್ಳುತ್ತಿದೆ ಎಂದು ತೋರಿಸಲು ಯಾವುದೇ ಪುರಾವೆಗಳಿಲ್ಲ ಎಂದು ಅದು ಹೇಳಿತು.  

ಬಳಿಕ, ದೂರುದಾರರು ಒದಗಿಸಿದ ದಾಖಲೆಗಳು ಹಾಗೂ ಸಾಕ್ಷ್ಯ ನಕಲಿ ಉತ್ಪನ್ನ ಮಾರಾಟವನ್ನು ಸ್ಪಷ್ಟವಾಗಿ ಸಾಬೀತುಪಡಿಸಿದೆ. ಹೀಗಾಗಿ ಮಾರಾಟಗಾರನು ಉತ್ಪನ್ನದ ಬೆಲೆಯನ್ನು ಮರುಪಾವತಿಸಬೇಕಷ್ಟೇ ಅಲ್ಲದೆ ದೂರುದಾರನ ಮಾನಸಿಕ ಮತ್ತು ದೈಹಿಕ ಸಂಕಟ ನಿವಾರಿಸಲು ಹೊಣೆಗಾರನಾಗಿರುತ್ತಾನೆ ಎಂದು ಅದು ತಿಳಿಸಿತು.

ಇದೇ ವೇಳೆ ಆಮದುದಾರರ ವಿರುದ್ಧ ಯಾವುದೇ ಪ್ರಕರಣ ದಾಖಲಿಸದೇ ಇದ್ದುದರಿಂದ ಅವರ ವಿರುದ್ಧದ ದೂರನ್ನು ಅದು ವಜಾಗೊಳಿಸಿತು.

ಈ ಹಿನ್ನೆಲೆಯಲ್ಲಿ ದೂರುದಾರರಿಗೆ ₹ 6,524 ಮರುಪಾವತಿ ಮಾಡಬೇಕು. ಜೊತೆಗೆ ಅವರು ಅನುಭವಿಸಿದ ಮಾನಸಿಕ ಮತ್ತು ದೈಹಿಕ ಸಂಕಟಕ್ಕಾಗಿ ₹ 20,000 ಹಾಗೂ ದಾವೆ ವೆಚ್ಚದ ರೂಪದಲ್ಲಿ ₹ 10,000 ಪರಿಹಾರ ನೀಡಬೇಕು ಎಂದು ಆಯೋಗ ಸೂಚಿಸಿತು.