ಕೌಟುಂಬಿಕ ವ್ಯಾಜ್ಯದಲ್ಲಿ ನಿರತರಾಗಿರುವ ದಂಪತಿಯ ಪೈಕಿ ಯಾರಾದರೊಬ್ಬರು ಅಪ್ರಾಪ್ತ ಮಗುವಿಗೆ ಪಾಸ್‌ಪೋರ್ಟ್ ನೀಡುವಂತೆ ಅರ್ಜಿ ಸಲ್ಲಿಸಿದಾಗ ಮಗುವಿನ ಸುಪರ್ದಿನ ಬಗ್ಗೆ ಸುಳ್ಳು ಘೋಷಣೆಗಳನ್ನು ಮಾಡಿದರೆ ಅದನ್ನು ಮಾನ್ಯ ಮಾಡಲಾಗದು ಎಂದು ಕರ್ನಾಟಕ ಹೈಕೋರ್ಟ್ ಈಚೆಗೆ ಆದೇಶ ಮಾಡಿದೆ.
ಇಬ್ಬರು ಅಪ್ರಾಪ್ತ ಮಕ್ಕಳ ಹೊಸ ಪಾಸ್‌ಪೋರ್ಟ್ ನೀಡುವಂತೆ ಮತ್ತು ಅಸ್ತಿತ್ವದಲ್ಲಿರುವ ಪಾಸ್‌ಪೋರ್ಟ್ ನವೀಕರಣಕ್ಕೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಿದ ಅರ್ಜಿಗಳನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಏಕಸದಸ್ಯ ಪೀಠ ಮಾನ್ಯ ಮಾಡಿದೆ.
ಪೋಷಕರು ಪಾಸ್‌ಪೋರ್ಟ್‌ಗಳಲ್ಲಿ ವಾಸ್ತವಾಂಶಗಳನ್ನು ಸರಿಯಾಗಿ ಘೋಷಿಸಬೇಕು ಮತ್ತು ಒಂದು ವೇಳೆ ವಿಚ್ಛೇದನವಾಗಿದ್ದರೆ ಮತ್ತು ಮಗುವಿನ ಸುಪರ್ದಿಯ ಕುರಿತು ಆದೇಶಗಳಿದ್ದರೆ ಆ ದಾಖಲೆಗಳನ್ನು ಅರ್ಜಿಯೊಂದಿಗೆ ಲಗತ್ತಿಸಬೇಕು ಎಂದು ಪೀಠ ಆದೇಶಿಸಿದೆ.
ಅರ್ಜಿದಾರರು ಅಪ್ರಾಪ್ತ ವಯಸ್ಕರಾಗಿರುವುದರಿಂದ, ಇಬ್ಬರೂ ಪೋಷಕರಿಂದ ಅಗತ್ಯವಿರುವ ಒಪ್ಪಂದವನ್ನು ಲಗತ್ತಿಸದ ಕಾರಣ ಅವರ ಅರ್ಜಿಗಳನ್ನು ಪರಿಗಣಿಸಲಾಗಿರಲಿಲ್ಲ. ಹೀಗಾಗಿ ಅವರು ನ್ಯಾಯಾಲಯದ ಮೊರೆ ಹೋಗಿದ್ದರು.
ಭೇಟಿ ಹಕ್ಕುಗಳ ಅನುಸರಣೆಗೆ ಒಳಪಟ್ಟು, ಪತಿ ಈಗ ಪಾಸ್‌ಪೋರ್ಟ್ ನೀಡಲು ಯಾವುದೇ ಆಕ್ಷೇಪಣೆ ಇಲ್ಲ ಎಂದು ಪತ್ರ ನೀಡಿದ್ದಾರೆ ಎಂದು ನ್ಯಾಯಾಲಯ ದಾಖಲಿಸಿದೆ ಮತ್ತು ಅದಕ್ಕೆ ಅನುಗುಣವಾಗಿ ಪಾಸ್‌ಪೋರ್ಟ್ ಅರ್ಜಿಗಳನ್ನು ಅನುಮತಿಸುವಂತೆ ಆದೇಶಿಸಿದೆ.
ಪಾಸ್‌ಪೋರ್ಟ್‌ಗಳ ಮರು-ವಿತರಣೆಗಾಗಿ ಅರ್ಜಿಗಳ ಪ್ರಕ್ರಿಯೆ ಮುಂದುವರಿಸಲು ಮತ್ತು ಅರ್ಜಿದಾರರು-ತಾಯಿ ಮತ್ತು ಪ್ರತಿವಾದಿ ತಂದೆ ಇಬ್ಬರೂ ಪೋಷಕರು ಸಹಿ ಮಾಡಿದ ಅನುಬಂಧ-ಡಿ ಪ್ರಕಾರ ಘೋಷಣೆಯನ್ನು ಸಲ್ಲಿಸಿದ ಹತ್ತು ದಿನಗಳಲ್ಲಿಅಗತ್ಯ ಆದೇಶಗಳನ್ನು ಮಾಡುವಂತೆ ನ್ಯಾಯಾಲಯವು ಪಾಸ್‌ಪೋರ್ಟ್ ಅಧಿಕಾರಿಗಳಿಗೆ ನಿರ್ದೇಶಿಸಿತು.
“ಅನುಬಂಧ-ಡಿ ಯಲ್ಲಿನ ಒಪ್ಪಂದದ ಯಾವುದೇ ಉಲ್ಲಂಘನೆ ಅಥವಾ ಅನುಸರಣೆಯಿಲ್ಲದ ಸಂದರ್ಭದಲ್ಲಿ, ತಾಯಿಯ ಘೋಷಣೆ/ ಒಪ್ಪಂದದ ಆಧಾರದ ಮೇಲೆ ಪಾಸ್‌ಪೋರ್ಟ್ ಅನ್ನು ರದ್ದುಗೊಳಿಸಲು, ಮುಟ್ಟುಗೋಲು ಹಾಕಿಕೊಳ್ಳಲು ಅಥವಾ ಹಿಂತೆಗೆದುಕೊಳ್ಳಲು ತನ್ನ ಅಧಿಕಾರವನ್ನು ಚಲಾಯಿಸಬಹುದು ಮತ್ತು ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ 2023 ಮತ್ತು ಪಾಸ್‌ಪೋರ್ಟ್ ಕಾಯಿದೆ 1967 ರಡಿಯಲ್ಲಿ ಕ್ರಿಮಿನಲ್ ಮೊಕದ್ದಮೆಗಳನ್ನು ಸಹ ದಾಖಲಿಸಬಹುದು” ಎಂದು ನ್ಯಾಯಾಲಯ ಹೇಳಿದೆ.
ಉಪ ಸಾಲಿಸಿಟರ್ ಜನರಲ್ ಎಚ್ ಶಾಂತಿ ಭೂಷಣ್ ಅವರು “ಒಬ್ಬ ಪೋಷಕರು ಪಾಸ್‌ಪೋರ್ಟ್ ನೀಡಲು ಅರ್ಜಿ ಸಲ್ಲಿಸಿದಾಗ, ಕಾನೂನು ಬದ್ಧ ಪೋಷಕರು ಎಂದು ಹೇಳಿಕೊಳ್ಳುವ ಅರ್ಜಿದಾರರು ಸೂಕ್ತವಾದ ಘೋಷಣೆ ಮಾಡಬೇಕು. ವಿಚ್ಛೇದನ ನೀಡಿದ್ದರೆ ಮತ್ತು ಮಗುವನ್ನು ಯಾರ ಕಸ್ಟಡಿ ನೀಡಲಾಗಿದೆ ಎಂಬುದನ್ನು ನಿರ್ದಿಷ್ಟಪಡಿಸಬೇಕು ಮತ್ತು ಆ ವ್ಯಕ್ತಿಯೇ ಮಗುವಿನ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಬಹುದು. ವಿಚ್ಛೇದನ ಪ್ರಕ್ರಿಯೆಗಳು ಬಾಕಿ ಇದ್ದರೆ ಮತ್ತು ಮದುವೆ ಇನ್ನೂ ಮುಂದುವರಿದಿದ್ದರೆ, ಇತರ ಸಂಗಾತಿಯ ಒಪ್ಪಿಗೆಯನ್ನು ಲಗತ್ತಿಸದಿರಲು ಕಾರಣಗಳನ್ನು ಪಾಸ್‌ಪೋರ್ಟ್ ಅರ್ಜಿಯೊಂದಿಗೆ ಸೇರಿಸಬೇಕು” ಎಂದರು.