Delhi High Court
Delhi High Court  
ಸುದ್ದಿಗಳು

ಮಗು ಶಿಕ್ಷಣದಿಂದ ವಂಚಿತವಾಗದಂತೆ ಖಾತರಿಪಡಿಸಲು ನ್ಯಾಯಾಲಯವು ಪಾಲಕರ ಪಾತ್ರ ನಿಭಾಯಿಸಬಹುದು: ದೆಹಲಿ ಹೈಕೋರ್ಟ್‌

Bar & Bench

ಮೂಲಭೂತ ಹಕ್ಕಾಗಿರುವ ಶಿಕ್ಷಣವನ್ನು ಖಾತರಿಪಡಿಸಲು ನ್ಯಾಯಾಲಯಗಳು ಮಗುವಿನ ಪಾಲಕರಾಗಿ ಕೆಲಸ ಮಾಡಬಹುದು ಎಂದು ಈಚೆಗೆ ದೆಹಲಿ ಹೈಕೋರ್ಟ್‌ ಹೇಳಿದೆ.

ಕೊಲೆ ಪ್ರಕರಣದಲ್ಲಿ ಮಗುವಿನ ಪೋಷಕರು ನ್ಯಾಯಾಂಗ ಬಂಧನದಲ್ಲಿರುವುದರಿಂದ ಎಂಟು ವರ್ಷದ ಹೆಣ್ಣು ಮಗುವನ್ನು ಶಾಲೆಗೆ ದಾಖಲಿಸುವಂತೆ ದೆಹಲಿ ಪೊಲೀಸರಿಗೆ ನ್ಯಾಯಮೂರ್ತಿ ಸ್ವರಾನಾ ಕಾಂತ ಶರ್ಮಾ ಅವರ ನೇತೃತ್ವದ ಏಕಸದಸ್ಯ ಪೀಠವು ಆದೇಶಿಸಿದೆ.

“ಹಾಲಿ ಪ್ರಕರಣದಲ್ಲಿ ನ್ಯಾಯಾಲಯವು ಧ್ವನಿಯಿಲ್ಲದ ಮಗುವಿನ ಧ್ವನಿಯಾಗಿ ಕೆಲಸ ಮಾಡಬೇಕಿದೆ. ಸಂವಿಧಾನದಲ್ಲಿ ಉಲ್ಲೇಖಿಸಲಾಗಿರುವ ಹಕ್ಕುಗಳನ್ನು ಎತ್ತಿ ಹಿಡಿದು ಮಗುವಿನ ಭವಿಷ್ಯವನ್ನು ರಕ್ಷಿಸುವ ದೃಷ್ಟಿಯಿಂದ ಮಧ್ಯಪ್ರವೇಶ ಮಾಡಬೇಕಿದೆ” ಎಂದು ಪೀಠ ಹೇಳಿದೆ.

“ಇನ್ನಷ್ಟೇ ನಿರ್ಧಾರವಾಗಬೇಕಿರುವ ಅಪರಾಧ ಪ್ರಕರಣದಲ್ಲಿ ಮಗುವಿನ ಪೋಷಕರು ನ್ಯಾಯಾಂಗ ಬಂಧನಲ್ಲಿದ್ದು, ಇದರಿಂದಾಗಿ ಮಗು ಯಾತನೆ ಅನುಭವಿಸಬಾರದು. ಈ ನ್ಯಾಯಾಲಯವು ಎಲ್ಲಾ ಪ್ರಜೆಗಳ ಮೂಲಭೂತ ಹಕ್ಕುಗಳನ್ನು ರಕ್ಷಿಸುವ ಜವಾಬ್ದಾರಿ ಹೊಂದಿದ್ದು, ಈ ಪ್ರಕರಣದಲ್ಲಿ ಅದು ಮಗುವಿನ ಶಿಕ್ಷಣದ ಹಕ್ಕಾಗಿದೆ” ಎಂದು ಪೀಠ ಹೇಳಿದೆ.

"ಕೌಟುಂಬಿಕ ಕಾರಣಗಳಿಂದ ಯಾವುದೇ ಮಗು ಶಿಕ್ಷಣ ವಂಚಿತವಾಗುವುದನ್ನು ಸಾಧ್ಯವಿರುವ ಎಲ್ಲ ಪ್ರಯತ್ನಗಳ ಮೂಲಕ ತಡೆಯಬೇಕು. ಶಿಕ್ಷಿತ ಮಗು ಇಡೀ ಕುಟುಂಬಕ್ಕೆ ಶಿಕ್ಷಣ ನೀಡುತ್ತದೆ, ದೇಶದ ಆಸ್ತಿಯಾಗುತ್ತದೆ," ಎಂದು ನ್ಯಾಯಾಲಯ ಹೇಳಿತು.

ಮಗು ಪ್ರಸಕ್ತ ಶೈಕ್ಷಣಿಕ ವರ್ಷ ಕಳೆದುಕೊಳ್ಳಬಾರದು ಎಂದು ನ್ಯಾಯಾಲಯವು ಸ್ವಯಂಪ್ರೇರಿತವಾಗಿ ಪ್ರಕರಣವನ್ನು ಪರಿಗಣಿಸಿದ್ದು, ಮಗುವಿನ ಹಿರಿಯ ಸಹೋದರರು ಈಗಾಗಲೇ ಸೇರ್ಪಡೆಯಾಗಿರುವ ಶಾಲೆಯ ಸಮೀಪದ ಶಾಲೆಗೆ ಆಕೆಗೆ ಪ್ರವೇಶ ಕೊಡಿಸುವಂತೆ ಪೊಲೀಸ್‌ ಅಧಿಕಾರಿಗೆ ನ್ಯಾಯಾಲಯ ಆದೇಶ ಮಾಡಿದೆ. “ಶಾಲೆಯ ಪ್ರಾಚಾರ್ಯರು ಮಗುವಿನ ಪ್ರವೇಶಾತಿ ಸಂಪೂರ್ಣ ಸಹಕಾರ ನೀಡಬೇಕು. ಹತ್ತು ದಿನಗಳಲ್ಲಿ ಅನುಪಾಲನಾ ವರದಿ ಸಲ್ಲಿಸಬೇಕು” ಪೀಠ ಆದೇಶಿಸಿದೆ.