“ನೀತಿ-ನಿರೂಪಣೆ ವಿಚಾರದಲ್ಲಿ ನ್ಯಾಯಾಲಯ ಮಧ್ಯಪ್ರವೇಶ ಮಾಡುವುದಿಲ್ಲ” ಎಂದು ಮಂಗಳವಾರ ಸ್ಪಷ್ಟಪಡಿಸಿರುವ ಕರ್ನಾಟಕ ಹೈಕೋರ್ಟ್ ರಾಜ್ಯ ಶಿಕ್ಷಣ ನೀತಿ ಜಾರಿಗೆ ಆಕ್ಷೇಪಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಜಾಗೊಳಿಸಿದೆ.
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರಾಷ್ಟ್ರೀಯ ಶಿಕ್ಷಣ ನೀತಿಯನ್ನು (ಎನ್‌ಇಪಿ) ಕೈಬಿಟ್ಟು ರಾಜ್ಯ ಶಿಕ್ಷಣ ನೀತಿ ಜಾರಿಗೆ ತರುತ್ತಿರುವ ರಾಜ್ಯ ಸರ್ಕಾರದ ಕ್ರಮ ಪ್ರಶ್ನಿಸಿ ಬೆಂಗಳೂರಿನ ಗಿರೀಶ್ ಭಾರದ್ವಾಜ್ ಹಾಗೂ ಆರ್ ಆನಂದ ಮೂರ್ತಿ ಅವರು ಸಲ್ಲಿಸಿದ್ದಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ರಾಮಚಂದ್ರ ಡಿ. ಹುದ್ದಾರ್ ಅವರ ವಿಧ್ಯುಕ್ತ ಪೀಠವು ವಜಾಗೊಳಿಸಿತು.
“ನೀತಿ-ನಿರೂಪಣೆಯ ವಿಚಾರದಲ್ಲಿ ನ್ಯಾಯಾಲಯ ಮಧ್ಯಪ್ರವೇಶಿಸಲಾಗದು. ಅರ್ಜಿದಾರರ ಮೂಲಭೂತ ಹಕ್ಕು ಅಥವಾ ಶಾಸನಬದ್ಧ ಹಕ್ಕು ಉಲ್ಲಂಘನೆಯಾಗಿದೆ ಎಂಬುದನ್ನು ತೋರಿಸದ ಹೊರತು ನ್ಯಾಯಾಲಯವು ಸಂವಿಧಾನದ 226ನೇ ವಿಧಿಯಡಿ ಹಕ್ಕು ಚಲಾಯಿಸಲಾಗದು. ಹೀಗಾಗಿ, ಅರ್ಜಿಯನ್ನು ವಜಾಗೊಳಿಸಲಾಗಿದೆ” ಎಂದು ಆದೇಶದಲ್ಲಿ ನ್ಯಾಯಾಲಯ ಹೇಳಿದೆ.
ಅರ್ಜಿದಾರರ ಪರವಾಗಿ ವಾದಿಸಿದ ಹಿರಿಯ ವಕೀಲ ಎಂ ಅರುಣ್ ಶ್ಯಾಮ್ ಅವರು “ದೇಶಾದ್ಯಂತ ಒಂದೇ ತೆರನಾದ ಶಿಕ್ಷಣ ನೀತಿ ಇರಬೇಕು ಎಂದು ಸಾಕಷ್ಟು ಶ್ರಮಿಸಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳಿಸಲಾಗಿದೆ. ಇದಕ್ಕಾಗಿ ನಿರ್ದಿಷ್ಟ ನಿಧಿಯನ್ನು ಸ್ಥಾಪಿಸಲಾಗಿದೆ. ಕೇಂದ್ರ ಸರ್ಕಾರವು ಸಾಕಷ್ಟು ಹಣವನ್ನು ಇದಕ್ಕೆ ವಿನಿಯೋಗಿಸಿದೆ. ಜನರ ತೆರಿಗೆ ಹಣವನ್ನು ಇದಕ್ಕೆ ವಿನಿಯೋಗಿಸಲಾಗಿದೆ. ಈಗಾಗಲೇ ಜಾರಿಗೊಳಿಸಿರುವ ಎನ್‌ಇಪಿಯನ್ನು ನಿಲ್ಲಿಸುವ ಪ್ರಯತ್ನವನ್ನು ರಾಜ್ಯ ಸರ್ಕಾರ ಮಾಡುತ್ತಿದೆ” ಎಂದು ಆಕ್ಷೇಪಿಸಿದರು.
ಆಗ ಪೀಠವು “ಇಲ್ಲಿ ಯಾವ ಪಕ್ಷಕಾರರ ಹಕ್ಕು ಉಲ್ಲಂಘನೆಯಾಗಿದೆ? ಎನ್‌ಇಪಿ ಜಾರಿಗೊಳಿಸಬೇಕು ಎಂಬುದು ನಿಮ್ಮ (ಅರ್ಜಿದಾರರ) ಕೋರಿಕೆ. ರಾಜ್ಯ ಸರ್ಕಾರವು ತನ್ನ ನೀತಿ ರೂಪಿಸಲು ತಜ್ಞರ ಸಮಿತಿ ರಚಿಸಿದೆ. ಯಾವ ಕಾನೂನಿನಲ್ಲಿ ರಾಜ್ಯ ಸರ್ಕಾರ ಇಂತಹದ್ದೇ ನೀತಿ ಜಾರಿ ಮಾಡಬೇಕು ಎಂದು ಹೇಳಿದೆ ಎಂಬುದನ್ನು ತಿಳಿಸಬೇಕು” ಎಂದು ಅರ್ಜಿದಾರರನ್ನು ಕುರಿತು ಹೇಳಿತು.
ಈ ವಿಚಾರದಲ್ಲಿ ನ್ಯಾಯಾಲಯದ ಮುಂದೆ ಸಮರ್ಥವಾಗಿ ವಾದಿಸಲು ಅರುಣ್ ಶ್ಯಾಮ್ ವಿಫಲರಾದ ಹಿನ್ನೆಲೆಯಲ್ಲಿ ಪೀಠವು ಅರ್ಜಿ ಪರಿಗಣಿಸಲಾಗದು ಎಂದು ವಜಾಗೊಳಿಸಿತು.
ಕೇಂದ್ರ ಸರ್ಕಾರದ ಆದೇಶದ ಮೇರೆಗೆ 2020ರಲ್ಲಿ ಹೊಸ ಮತ್ತು ಪರಿಷ್ಕೃತ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಬಂದಿತ್ತು. ಸರ್ಕಾರದ ಆದೇಶದ ಅನ್ವಯ 2021ರ ಆಗಸ್ಟ್ 7ರಂದು ರಾಜ್ಯ ವ್ಯಾಪ್ತಿ ಜಾರಿಗೆ ಬಂದಿತ್ತು. ಈ ಮಧ್ಯೆ, ರಾಜ್ಯದಲ್ಲಿ ಸರ್ಕಾರ ಬದಲಾಗಿದ್ದು, ರಾಜ್ಯ ಶಿಕ್ಷಣ ನೀತಿ ರೂಪಿಸಲು ನಿರ್ಧರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಶಿಕ್ಷಣ ನೀತಿ ರೂಪಿಸಲು ಸಮಿತಿ ರಚಿಸಿರುವುದಾಗಿ 2023ರ ಅಕ್ಟೋಬರ್ 11 ರಂದು ಸರ್ಕಾರ ಆದೇಶ ಹೊರಡಿಸಿದೆ. ಈ ಆದೇಶ ರದ್ದುಪಡಿಸಬೇಕು. ಎಂದಿನಿಂತೆ ಎನ್‌ಇಪಿ ಜಾರಿಗೊಳಿಸಬೇಕು ಎಂಬುದು ಅರ್ಜಿದಾರರ ಕೋರಿಕೆಯಾಗಿತ್ತು.