ವಿಧಾನಸಭೆ ಸದಸ್ಯರು ಸಲ್ಲಿಸಿದ ರಾಜೀನಾಮೆ ಅಂಗೀಕರಿಸುವ ಅಥವಾ ತಿರಸ್ಕರಿಸುವ ಕುರಿತು ನಿರ್ಧಾರ ಕೈಗೊಳ್ಳಲು ವಿಧಾನಸಭೆಯ ಸ್ಪೀಕರ್‌ಗೆ ಸಾಂವಿಧಾನಿಕ ನ್ಯಾಯಾಲಯ ಕಾಲಮಿತಿ ನಿಗದಿಪಡಿಸಲು ಸಾಧ್ಯವಿಲ್ಲ ಎಂದು ಹಿಮಾಚಲ ಪ್ರದೇಶ ಹೈಕೋರ್ಟ್ ಇತ್ತೀಚೆಗೆ ತೀರ್ಪು ನೀಡಿದೆ [ಹೋಶಿಯಾರ್ ಸಿಂಗ್ ಚಂಬ್ಯಾಲ್ ಮತ್ತಿತರರು ಹಾಗೂ ಗೌರವಾನ್ವಿತ ಸ್ಪೀಕರ್ ಇನ್ನಿತರರ ನಡುವಣ ಪ್ರಕರಣ].
ಸ್ಪೀಕರ್ ನಿರ್ಧಾರಕ್ಕೆ ನ್ಯಾಯಾಲಯ ಕಾಲಮಿತಿ ನಿಗದಿಪಡಿಸಬಹುದೇ ಎಂಬ ಬಗ್ಗೆ ಮುಖ್ಯ ನ್ಯಾಯಮೂರ್ತಿ ಎಂ ಎಸ್ ರಾಮಚಂದ್ರ ರಾವ್ ಮತ್ತು ನ್ಯಾಯಮೂರ್ತಿ ಜ್ಯೋತ್ಸ್ನಾ ರೇವಾಲ್ ದುವಾ ಭಿನ್ನ ನಿರ್ಧಾರ ತಳೆದ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ಸಂದೀಪ್ ಶರ್ಮಾ ಅವರು ಕಾನೂನು ಪ್ರಶ್ನೆಗೆ ಸಂಬಂಧಿಸಿದಂತೆ ತೀರ್ಪಿತ್ತರು.
ಸ್ಪೀಕರ್ ರಾಜೀನಾಮೆಯ ವಿಚಾರ ನಿರ್ಧರಿಸುವಾಗ, ರಾಜ್ಯ ಶಾಸಕರ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಾರೆ. ಹೀಗಾಗಿ ಸ್ಪೀಕರ್ ಅವರು ಸಾಂವಿಧಾನಿಕ ನ್ಯಾಯಾಲಯಕ್ಕೆ ಸಾಂವಿಧಾನಿಕ ಅಧಿಕಾರಿಯಾಗಿ ಸಮನಾಗಿರುತ್ತಾರೆ. ಅಂತಹ ಸಂದರ್ಭಗಳಲ್ಲಿ ಸಾಂವಿಧಾನಿಕ ನ್ಯಾಯಾಲಯಗಳು ಇತರ ಸಾಂವಿಧಾನಿಕ ಅಧಿಕಾರಿಗಳ ಕ್ಷೇತ್ರವನ್ನು ಸಂವಿಧಾನದ ಅಡಿಯಲ್ಲಿ ನಿರ್ದಿಷ್ಟವಾಗಿ ನಿಯೋಜಿಸಲಾದ ಪಾತ್ರಗಳಿಗೆ ಸಂಬಂಧಿಸಿದಂತೆ ಗೌರವಿಸುತ್ತವೆ. ಭಿನ್ನ ತೀರ್ಪು ನೀಡುವಾಗ ಉಳಿದ ಇಬ್ಬರು ನ್ಯಾಯಮೂರ್ತಿಗಳು ಈ ಅಂಶವನ್ನು ಒಪ್ಪಿಕೊಂಡಿದ್ದಾರೆ ಎಂದು ನ್ಯಾ. ಶರ್ಮಾ ತಿಳಿಸಿದ್ದಾರೆ.
ಪಕ್ಷೇತರ ಶಾಸಕರಾದ ಹೋಶಿಯಾರ್ ಸಿಂಗ್, ಆಶಿಶ್ ಶರ್ಮಾ ಮತ್ತು ಕೆಎಲ್ ಠಾಕೂರ್ ಅವರು ತಮ್ಮ ರಾಜೀನಾಮೆ ತಕ್ಷಣ ಅಂಗೀಕರಿಸುವಂತೆ ಸ್ಪೀಕರ್ ಅವರಿಗೆ ನಿರ್ದೇಶನ ನೀಡಬೇಕು ಎಂದು ಕೋರಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ತೀರ್ಪು ನೀಡಲಾಗಿದೆ.
ಮುಖ್ಯ ನ್ಯಾಯಮೂರ್ತಿ ರಾವ್ ಮತ್ತು ನ್ಯಾಯಮೂರ್ತಿ ದುವಾ ಅವರಿದ್ದ ವಿಭಾಗೀಯ ಪೀಠ ಮೇ 8ರಂದು ಶಾಸಕರ ರಾಜೀನಾಮೆ ಅಂಗೀಕರಿಸುವಂತೆ ನ್ಯಾಯಾಲಯ ಸ್ಪೀಕರ್‌ಗೆ ನಿರ್ದೇಶಿಸಲು ಸಾಧ್ಯವಿಲ್ಲ ಎಂದು ಹೇಳಿತ್ತು. ಆದರೆ, ಎರಡು ತಿಂಗಳೊಳಗೆ ರಾಜೀನಾಮೆಯ ಅಸಲಿತನದ ಬಗ್ಗೆ ನಿರ್ಧರಿಸಲು ಸ್ಪೀಕರ್‌ಗೆ ನಿರ್ದೇಶನ ನೀಡಬಹುದು ಎಂದು ನ್ಯಾ. ರಾವ್ ತೀರ್ಪು ನೀಡಿದ್ದರು.
ಮುಖ್ಯ ನ್ಯಾ. ರಾವ್ ಅವರು ಕಾಲಮಿತಿ ನಿಗದಿಗೆ ಒಪ್ಪಿಗೆ ನೀಡದ ಕಾರಣ, ಪ್ರಕರಣವನ್ನು ನ್ಯಾ. ಶರ್ಮಾ ಅವರ ಮುಂದೆ ಇಡಲಾಗಿತ್ತು.