ತನ್ನ ಅಂತರ್ಜಾಲ ತಾಣದಲ್ಲಿರುವ 'ಏಷ್ಯನ್ ನ್ಯೂಸ್ ಇಂಟರ್‌ನ್ಯಾಷನಲ್ ವರ್ಸಸ್ ವಿಕಿಮೀಡಿಯಾ ಫೌಂಡೇಶನ್' ಪುಟ ತೆಗೆದುಹಾಕುವಂತೆ ದೆಹಲಿ ಹೈಕೋರ್ಟ್ ನೀಡಿದ ಆದೇಶ ಪ್ರಶ್ನಿಸಿ ವಿಕಿಮೀಡಿಯಾ ಪ್ರತಿಷ್ಠಾನ (ವಿಕಿಪೀಡಿಯಾ) ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಸೋಮವಾರ ಏಷ್ಯನ್ ನ್ಯೂಸ್ ಇಂಟರ್‌ನ್ಯಾಷನಲ್‌ಗೆ (ಎಎನ್‌ಐ) ನೋಟಿಸ್ ನೀಡಿದೆ.
ವಿಕಿಪೀಡಿಯಾ ವಿರುದ್ಧ ಹೈಕೋರ್ಟ್ ನೀಡಿದ ಆದೇಶದ ಹಿಂದಿನ ತಾರ್ಕಿಕತೆ ಪ್ರಶ್ನಿಸಿದ ನ್ಯಾಯಮೂರ್ತಿ ಅಭಯ್ ಎಸ್ ಓಕಾ ಮತ್ತು ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಅವರಿದ್ದ ಪೀಠ ಇದು ಮಾಧ್ಯಮ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ವಿಷಯ ಎಂದು ಹೇಳಿದೆ.
ವಿಕಿಪೀಡಿಯಾ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿರುವ ಎಎನ್‌ಐ ಸಂಸ್ಥೆಯನ್ನು ಉದ್ದೇಶಿಸಿದ ನ್ಯಾಯಾಲಯವು "ಅಂತಿಮವಾಗಿ ಇದು ಮಾಧ್ಯಮದ ಪ್ರಶ್ನೆ. ಇಲ್ಲಿ ಪ್ರಶ್ನೆ ಇರುವುದು ಮಾಧ್ಯಮ ಸ್ವಾತಂತ್ರ್ಯದ ಬಗ್ಗೆ. ಇಂದು ಅದು (ವಿಕಿಪೀಡಿಯಾ), ನಾಳೆ ಅದು ನೀವೇ ಆಗಿರಬಹುದು" ಎಂದು ಹೇಳಿತು.
ಈಗಾಗಲೇ ತೆಗೆದುಹಾಕಲಾಗಿರುವ ಆಕ್ಷೇಪಾರ್ಹ ಪುಟವು ಎಎನ್‌ಐ ವಿರುದ್ಧವಾಗಿರಲಿಲ್ಲ, ಬದಲಾಗಿ ದೆಹಲಿ ಹೈಕೋರ್ಟ್‌ನಲ್ಲಿ ವಿಕಿಪೀಡಿಯಾ ವಿರುದ್ಧ ಎಎನ್‌ಐ ಹೂಡಿರುವ ಮಾನನಷ್ಟ ಮೊಕದ್ದಮೆಯ ವಿವರಗಳನ್ನು ಒಳಗೊಂಡಿರುವ ಪುಟವಾಗಿತ್ತು. ವಾಸ್ತವವಾಗಿ ಆ ಪುಟವು ಹೈಕೋರ್ಟ್‌ನಲ್ಲಿ ನಡೆದ ವಿಚಾರಣೆ ಮತ್ತು ಎಎನ್‌ಐ ಮಾನನಷ್ಟ ಮೊಕದ್ದಮೆಯ ವಿಚಾರಣೆಯ ಸಮಯದಲ್ಲಿ ಹೈಕೋರ್ಟ್ ಮಾಡಿದ ಅವಲೋಕನಗಳ ವಿವರಗಳನ್ನು ಒಳಗೊಂಡಿತ್ತು ಎಂದು ವಿಕಿಪಿಡಿಯಾ ವಾದಿಸಿತ್ತು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಹೈಕೋರ್ಟ್ ನ್ಯಾಯಾಲಯದ ಅವಲೋಕನಗಳ ಬಗ್ಗೆ ಚರ್ಚಿಸುವುದು ನ್ಯಾಯಾಂಗ ನಿಂದನೆಯಾಗುತ್ತದೆ ಎಂದು ತನ್ನ ಆದೇಶದಲ್ಲಿ ಹೇಳಿತ್ತು. ಅಂತೆಯೇ ವಿಕಿಪೀಡಿಯಾ ಆ ಪುಟವನ್ನು ತೆಗೆದುಹಾಕಬೇಕೆಂದು ಅಕ್ಟೋಬರ್ 2024ರಲ್ಲಿ ಅದು ಆದೇಶಿಸಿತ್ತು.
ಹೈಕೋರ್ಟ್‌ನ ಈ ಆದೇಶ ಒಪ್ಪದ ಸುಪ್ರೀಂ ಕೋರ್ಟ್ ಈ ವಿಚಾರದಲ್ಲಿ ಹೈಕೋರ್ಟ್ ಇಷ್ಟು ʼಭಾವನಾತ್ಮಕವಾಗಿʼ ಇರುವುದೇಕೆ ಎಂದು ಪ್ರಶ್ನಿಸಿತು.
ಇಂದು ನ್ಯಾಯಾಲಯದ ಕಲಾಪಗಳು ಸಾಮಾಜಿಕ ಮಾಧ್ಯಮ ಇತ್ಯಾದಿಗಳಲ್ಲಿ ಟೀಕೆಗೆ ಗುರಿಯಾಗುತ್ತಿದ್ದು ತನ್ನನ್ನು ಟೀಕಿಸುತ್ತದೆ ಎಂಬ ಕಾರಣಕ್ಕಾಗಿ ಅದನ್ನು ರದ್ದುಗೊಳಿಸಲು ನ್ಯಾಯಾಲಯ ಸೂಚಿಸಬಾರದು ಎಂದು ಸುಪ್ರೀಂ ಕೋರ್ಟ್ ತಿಳಿಹೇಳಿತು. ಮುಂದುವರಿದು, ನ್ಯಾಯಮೂರ್ತಿಗಳು ಟೀಕೆಗಳ ಬಗ್ಗೆ ಹೆಚ್ಚು ಸಹನಶೀಲರಾಗಿರುವಂತೆ ಎಂದು ಬುದ್ಧಿವಾದ ಹೇಳಿತು.
ಪ್ರಶ್ನೆ ಇರುವುದು ಮಾಧ್ಯಮ ಸ್ವಾತಂತ್ರ್ಯದ ಬಗ್ಗೆ. ಇಂದು ವಿಕಿಪೀಡಿಯಾ, ನಾಳೆ ಅದು ನೀವೇ (ಎಎನ್‌ಐ) ಆಗಿರಬಹುದು.ಸುಪ್ರೀಂ ಕೋರ್ಟ್
ವಿಕಿಪೀಡಿಯಾ ಪರವಾಗಿ ಇಂದು ವಾದ ಮಂಡಿಸಿದ ಹಿರಿಯ ನ್ಯಾಯವಾದಿ ಕಪಿಲ್ ಸಿಬಲ್ ಇದೊಂದು ಗಂಭೀರ ವಿಚಾರ.. ಮಾನನಷ್ಟ ಮೊಕದ್ದಮೆಯ ಕುರಿತು ಯಾವುದೇ ತೀರ್ಮಾನವನ್ನು ತಿಳಿಸದೆ ಆದೇಶ ನೀಡಲಾಗಿದೆ ಎಂದರು. ಎಎನ್‌ಐ ಪರವಾಗಿ ವಕೀಲ ಸಿದ್ಧಾಂತ್ ಕುಮಾರ್ ವಾದ ಮಂಡಿಸಿದರು. ನೋಟಿಸ್ ಜಾರಿ ಮಾಡಿದ ಸುಪ್ರೀಂ ಕೋರ್ಟ್ ಏಪ್ರಿಲ್ 4ಕ್ಕೆ ವಿಚಾರಣೆ ಮುಂದೂಡಿತು.
ಹಿನ್ನೆಲೆ: ವಿಕಿಪೀಡಿಯಾ ತನ್ನ ಪುಟದಲ್ಲಿ ಬಳಕೆದಾರರು ಮಾನಹಾನಿಕರ ಮಾಹಿತಿಗಳನ್ನು ಹಂಚಿಕೊಳ್ಳಲು ಅನುಮತಿಸಿದೆ ಎಂದು ದೂರಿ ಎಎನ್‌ಐ ಮಾನನಷ್ಟ ಮೊಕದ್ದಮೆ ಹೂಡಿತ್ತು. ಎಎನ್‌ಐ ಆಡಳಿತಾರೂಢ ಸರ್ಕಾರದ ಪ್ರಚಾರ ಸಾಧನ, ಮುಖವಾಣಿ ಎಂದು ವಿಕೀಪಿಡಿಯಾದ ಬಳಕೆದಾರರು ಅದರ ಪುಟದಲ್ಲಿ ಉಲ್ಲೇಖಿಸಿದ್ದಕ್ಕೆ ಸುದ್ದಿ ಸಂಸ್ಥೆ ಎಎನ್‌ಐ ಆಕ್ಷೇಪ ವ್ಯಕ್ತಪಡಿಸಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ವಿಕಿಪೀಡಿಯಾಕ್ಕೆ ಸಮನ್ಸ್ ಜಾರಿ ಮಾಡಿತ್ತು. ಅಲ್ಲದೆ, ಎಎನ್‌ಐ ಕುರಿತಾದ ವಿಕಿಪೀಡಿಯಾ ಪುಟದಲ್ಲಿ ಲೇಖನವನ್ನು ಸಂಕಲಿಸಿದ ಮೂವರ ಬಗ್ಗೆ ಮಾಹಿತಿಯನ್ನು ಬಹಿರಂಗಪಡಿಸುವಂತೆ ಆದೇಶಿಸಿತ್ತು. ಆದರೆ, ವಿಕಿಪೀಡಿಯಾ ಈ ಆದೇಶ ಪಾಲಿಸಿಲ್ಲ ಎಂದು ದೂರಿ ಎಎನ್‌ಐ ನಂತರ ಹೈಕೋರ್ಟ್ ಏಕಸದಸ್ಯ ಪೀಠದೆದುರು ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿತ್ತು.
ವಿಕಿಪೀಡಿಯಾ ನಡೆಗೆ ಆಕ್ಷೇಪ ವ್ಯಕ್ತಪಡಿಸಿದ್ದ ನ್ಯಾ. ನವೀನ್ ಚಾವ್ಲಾ ಅವರು ವಿಕಿಪೀಡಿಯಾದ ಅಧಿಕೃತ ಪ್ರತಿನಿಧಿಯೊಬ್ಬರು ನ್ಯಾಯಾಲಯದಲ್ಲಿ ಖುದ್ದು ಹಾಜರಿರಬೇಕೆಂದು ಸೆಪ್ಟೆಂಬರ್ 5ರಂದು ಆದೇಶಿಸಿದ್ದರು. ಬಳಿಕ ವಿಕಿಪೀಡಿಯಾ ವಿಭಾಗೀಯ ಪೀಠದ ಮೆಟ್ಟಿಲೇರಿತ್ತು. ಆದರೆ ಪ್ರಕರಣದ ಬಗ್ಗೆಯೇ ಪುಟವೊಂದನ್ನು ಸೃಜಿಸಲಾಗಿದೆ ಎಂಬುದನ್ನು ಗಮನಿಸಿದ್ದ ವಿಭಾಗೀಯ ಪೀಠ ಪುಟವನ್ನು ಸಂಕಲಿಸಿದವರ ಮಾಹಿತಿ ಬಹಿರಂಗಪಡಿಸದ ವಿಕಿಪೀಡಿಯಾ ನಡೆಯನ್ನೂ ಖಂಡಿಸಿತ್ತು.
ಎಎನ್‌ಐ ಪ್ರಕರಣ ಕುರಿತಾದ ಪುಟ ತೆಗೆದುಹಾಕುವಂತೆ ಮುಖ್ಯ ನ್ಯಾಯಮೂರ್ತಿ ಮನಮೋಹನ್ (ಸುಪ್ರೀಂ ಕೋರ್ಟ್ ಹಾಲಿ ನ್ಯಾಯಮೂರ್ತಿಗಳು) ಮತ್ತು ನ್ಯಾಯಮೂರ್ತಿ ತುಷಾರ್ ರಾವ್ ಗೆಡೆಲಾ ಅವರಿದ್ದ ವಿಭಾಗೀಯ ಪೀಠ ವಿಕಿಪೀಡಿಯಾಕ್ಕೆ ಅಂತಿಮವಾಗಿ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ವಿಕಿಪೀಡಿಯಾ ಸುಪ್ರೀಂ ಕೋರ್ಟ್ ಕದ ತಟ್ಟಿತ್ತು.