CJI NV Ramana
CJI NV Ramana 
ಸುದ್ದಿಗಳು

ದೇಶದ ನ್ಯಾಯಾಲಯಗಳು ಮಧ್ಯಸ್ಥಿಕೆ ಪರ; ಭಾರತೀಯ ನ್ಯಾಯಾಂಗದ ಸಂಪೂರ್ಣ ಸ್ವಾತಂತ್ರ್ಯ ನಂಬಲರ್ಹ: ಸಿಜೆಐ

Bar & Bench

ಭಾರತದ ನ್ಯಾಯಾಲಯಗಳು ಮಧ್ಯಸ್ಥಿಕೆ ಪರವಾಗಿದ್ದು ಅವು ಮಧ್ಯಸ್ಥಿಕೆಗೆ ಸಹಾಯ ಮಾಡುತ್ತವೆ. ಇದಕ್ಕಾಗಿ ನ್ಯಾಯ ನಿರ್ಣಯದ ಪ್ರಮುಖ ಪಾತ್ರವನ್ನು ಮಧ್ಯಸ್ಥಿಕೆ ಮಂಡಳಿಗೆ ಬಿಡುತ್ತವೆ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಎನ್‌ ವಿ ರಮಣ ಹೇಳಿದ್ದಾರೆ.

ʼಜಾಗತಿಕರಣಗೊಂಡ ವಿಶ್ವದಲ್ಲಿ ಮಧ್ಯಸ್ಥಿಕೆ- ಭಾರತೀಯ ಅನುಭವʼ ಎಂಬ ವಿಷಯದ ಕುರಿತು ಇಂಡೋ-ಜರ್ಮನ್ ವಾಣಿಜ್ಯೋದ್ಯಮ ಮಂಡಳಿ ಜರ್ಮನಿಯ ಡಾರ್ಟ್‌ಮಂಡ್‌ನಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ವಾರ್ಷಿಕ ಸಭೆಯನ್ನು ಉದ್ಘಾಟಿಸಿ ಸಿಜೆಐ ಮಾತನಾಡಿದರು.

ವಿಶ್ವಸಂಸ್ಥೆ ಅಂತರರಾಷ್ಟ್ರೀಯ ವ್ಯಾಪಾರ ಕಾನೂನು ಆಯೋಗದ (ಯುಎನ್‌ಸಿಐಟಿಆರ್‌ಎಎಲ್‌) ನಿಯಮಾವಳಿಗಳನ್ನು ಅಳವಡಿಸಿಕೊಂಡು ಭಾರತ ಮಧ್ಯಸ್ಥಿಕೆ, ರಾಜಿ ಸಂಧಾನ ಹಾಗೂ ಪರ್ಯಾಯ ವ್ಯಾಜ್ಯ ಇತ್ಯರ್ಥ ವಿಧಾನಗಳನ್ನು ಪ್ರೋತ್ಸಾಹಿಸುತ್ತಿದೆ. ಮಧ್ಯಸ್ಥಿಕೆ ಪ್ರಕ್ರಿಯೆಗಳನ್ನು ಹೆಚ್ಚು ಪರಿಣಾಮಕಾರಿಯಾಗಿಸುವ ಸಲುವಾಗಿ ಮತ್ತು ಮಧ್ಯಸ್ಥಿಕೆಯನ್ನು ಅಂತರರಾಷ್ಟ್ರೀಯ ನಡಾವಳಿ ಮತ್ತು ಕಾರ್ಯವಿಧಾನದೊಂದಿಗೆ ಮೇಳೈಸಲು 1996ರಲ್ಲಿ ದೇಶದಲ್ಲಿ ಮಧ್ಯಸ್ಥಿಕೆ ಮತ್ತು ರಾಜಿ ಸಂಧಾನ ಕಾಯಿದೆ ಜಾರಿಗೆ ಬಂದಿತು ಎಂದು ಅವರು ವಿವರಿಸಿದರು.

ಭಾರತದ ನ್ಯಾಯಾಂಗವು ತನ್ನ ಸ್ವಾತಂತ್ರ್ಯ ಮತ್ತು ಕಾನೂನಾತ್ಮಕ ಆಡಳಿತಕ್ಕೆ ಪರಮ ಪ್ರಾಮುಖ್ಯತೆ ನೀಡುವುದಕ್ಕೆ ಹೆಸರಾಗಿದೆ ಎಂದು ಸಿಜೆಐ ಹೇಳಿದರು. “ತನ್ನ ಸಂಪೂರ್ಣ ಸ್ವಾತಂತ್ರ್ಯಕ್ಕಾಗಿ ಮತ್ತು ಎಲ್ಲಾ ಪಕ್ಷಕಾರರನ್ನು ಸಮಾನವಾಗಿ ಮತ್ತು ನಿಷ್ಪಕ್ಷಪಾತವಾಗಿ ಕಾಣುವ ಅದರ ಅಂತರ್ಗತ ಸಾಂವಿಧಾನಿಕ ಶಕ್ತಿಗಾಗಿ ಭಾರತೀಯ ನ್ಯಾಯಾಂಗವನ್ನು ನಂಬಬಹುದು” ಎಂದು ಅವರು ತಿಳಿಸಿದರು.

ಮುಂದುವರೆದು, "ಭಾರತದ ಸಾಂವಿಧಾನಿಕ ನ್ಯಾಯಾಲಯಗಳು - ಉಚ್ಚ ನ್ಯಾಯಾಲಯ ಮತ್ತು ಸರ್ವೋಚ್ಚ ನ್ಯಾಯಾಲಯ- ಸರ್ಕಾರದ ಪ್ರತಿಯೊಂದು ನಡೆಯನ್ನೂ ಸಹ ನ್ಯಾಯಾಂಗದ ಪರಿಶೀಲನೆಗೆ ಒಡ್ಡುವ ಅಧಿಕಾರ ಹೊಂದಿವೆ. ಸಂವಿಧಾನದ ತತ್ವಗಳಿಗೆ ಅನುಗುಣವಾಗಿ ಇಲ್ಲದ ಯಾವುದೇ ಕಾಯಿದೆಯನ್ನು ಅವು ರದ್ದುಗೊಳಿಸಬಹುದು. ಅದೇ ರೀತಿ ಕಾರ್ಯಾಂಗದ ಸ್ವೇಚ್ಛೆಯ ನಿರ್ಧಾರಗಳನ್ನೂ ಸಹ ಅವು ಬದಿಗೆ ಸರಿಸಬಲ್ಲವು" ಎಂದು ವಿವರಿಸಿದರು.