ಸುದ್ದಿಗಳು

ಔಷಧೋತ್ಪನ್ನಗಳ ಟ್ರೇಡ್‌ಮಾರ್ಕ್‌ಗೆ ಸಂಬಂಧಿಸಿದ ವಿಚಾರದಲ್ಲಿ ನ್ಯಾಯಾಲಯಗಳು ಹೆಚ್ಚು ಕಠಿಣವಾಗಿರಬೇಕು: ದೆಹಲಿ ಹೈಕೋರ್ಟ್

ಔಷಧೋತ್ಪನ್ನಗಳ ಹಕ್ಕುಸ್ವಾಮ್ಯದ ಉಲ್ಲಂಘನೆಗೆ ಸಂಬಂಧಿಸಿದ ಪ್ರಕರಣಗಳಲ್ಲಿ ವ್ಯವಹರಿಸುವಾಗ ಸಾರ್ವಜನಿಕ ಹಿತದೃಷ್ಟಿಯ ಹಿನ್ನೆಲೆಯಲ್ಲಿ ನ್ಯಾಯಾಲಯಗಳು ಹೆಚ್ಚು ಕಠಿಣವಾಗಿ ವರ್ತಿಸಬೇಕು ಎಂದು ಅಭಿಪ್ರಾಯಟ್ಟ ನ್ಯಾಯಾಲಯ.

Bar & Bench

ಟ್ರೇಡ್‌ಮಾರ್ಕ್ (ವಾಣಿಜ್ಯ ಚಿಹ್ನೆ) ಅಥವಾ ಔಷಧೋತ್ಪನ್ನಗಳ ಹಕ್ಕುಸ್ವಾಮ್ಯ ಉಲ್ಲಂಘನೆಗೆ ಸಂಬಂಧಿಸಿದ ಪ್ರಕರಣಗಳಲ್ಲಿ ವ್ಯವಹರಿಸುವಾಗ ನ್ಯಾಯಾಲಯಗಳು ಹೆಚ್ಚು ಕಠಿಣವಾಗಿಯೂ, ಜಾಗರೂಕವಾಗಿಯೂ ವರ್ತಿಸಬೇಕು ಎಂದು ದೆಹಲಿ ಹೈಕೋರ್ಟ್ ಇತ್ತೀಚೆಗೆ ಹೇಳಿದೆ [ಮ್ಯಾನ್‌ಕೈಂಡ್ ಫಾರ್ಮಾ ಲಿಮಿಟೆಡ್ ವರ್ಸಸ್‌ ಸಂಶಿವ್ ಹೆಲ್ತ್ ಟೆಕ್ ಪ್ರೈವೇಟ್ ಲಿಮಿಟೆಡ್ ಮತ್ತು ಇನ್ನೊಬ್ಬರು].

ಸಂಶಿವ್‌ ಹೆಲ್ತ್‌ಟೆಕ್‌ ಪೈವೇಟ್‌ ಲಿಮಿಟೆಡ್‌ ಸಂಸ್ಥೆಯ ಪೂರಕ ಪೌಷ್ಠಿಕಾಂಶ ಉತ್ಪನ್ನವಾದ 'ಕ್ಯಾಲಿಕಾ -ಪಿ' ಅನ್ನು ಮಾರಾಟ ಮಾಡುವುದಕ್ಕೆ ಮಧ್ಯಂತರ ತಡೆಯಾಜ್ಞೆ ಹೊರಡಿಸುವ ವೇಳೆ ನ್ಯಾಯಾಲಯವು ಮೇಲಿನ ಅವಲೋಕನ ಮಾಡಿತು. ನ್ಯಾಯಮೂರ್ತಿ ಸೌರಭ್ ಬ್ಯಾನರ್ಜಿ ಅವರು ಸಾರ್ವಜನಿಕರ ಹಿತದೃಷ್ಟಿಯಿಂದ, ಔಷಧೀಯ ಉತ್ಪನ್ನಗಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಟ್ರೇಡ್‌ಮಾರ್ಕ್ ಉಲ್ಲಂಘನೆಯನ್ನು ತಡೆಯಲು ನ್ಯಾಯಾಲಯಗಳು ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಆದೇಶದಲ್ಲಿ ಹೇಳಿದರು.

ಮ್ಯಾನ್‌ಕೈಂಡ್ ಫಾರ್ಮಾ ಲಿಮಿಟೆಡ್‌ ಸಲ್ಲಿಸಿದ್ದ ಟ್ರೇಡ್‌ ಮಾರ್ಕ್‌ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಆದೇಶ ನೀಡಲಾಗಿದೆ. ತನ್ನ ಅರ್ಜಿಯಲ್ಲಿ ಮ್ಯಾನ್‌ಕೈಂಡ್‌ ಫಾರ್ಮಾವು ತನ್ನದೇ ಉತ್ಪನ್ನವನ್ನು ಹೋಲುವ ಉತ್ಪನ್ನವನ್ನು ಸಂಶಿವ್ ಹೆಲ್ತ್ ಮಾರಾಟ ಮಾಡುತ್ತಿದೆ. ಆ ಮೂಲಕ ಮ್ಯಾನ್‌ಕೈಂಡ್ ಫಾರ್ಮಾದ 'ಕ್ಯಾಲ್ಡಿಕೈಂಡ್' ಮತ್ತು 'ಕ್ಯಾಲ್ಡಿಕೈಂಡ್ -ಪಿ' ಸಪ್ಲಿಮೆಂಟ್‌ನ ಟ್ರೇಡ್‌ಮಾರ್ಕ್ ಅನ್ನು ಉಲ್ಲಂಘಿಸಿದೆ ಎಂದು ದೂರಿದೆ.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು, “ಔಷಧೀಯ ಉತ್ಪನ್ನಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ವ್ಯವಹರಿಸುವಾಗ ಈ ನ್ಯಾಯಾಲಯವು ಹೆಚ್ಚು ಎಚ್ಚರಿಕೆಯಿಂದ, ಕಟ್ಟುನಿಟ್ಟಾಗಿರಬೇಕಾಗುತ್ತದೆ. ಒಂದೊಮ್ಮೆ ಪ್ರತಿವಾದಿಗಳು ಹೊಂದಿರುವ ಸ್ಪರ್ಧಾತ್ಮಕ ಟ್ರೇಡ್ ಡ್ರೆಸ್ (ಉತ್ಪನ್ನದ ರೂಪ), ಟ್ರೇಡ್ ಮಾರ್ಕ್ ಮತ್ತು ವಿನ್ಯಾಸವನ್ನು ಉಳಿಸಿಕೊಳ್ಳಲು ಅವಕಾಶ ನೀಡಿದರೆ ಸಾರ್ವಜನಿಕರ ಮನಸ್ಸಿನಲ್ಲಿ ಗೊಂದಲ ಉಂಟಾಗುವ ಸಾಧ್ಯತೆ ಇದೆ” ಎಂದು ಮ್ಯಾನ್‌ಕೈಂಡ್ ಫಾರ್ಮಾಗೆ ಮಧ್ಯಂತರ ಪರಿಹಾರವನ್ನು ನೀಡುವ ವೇಳೆ ವಿವರಿಸಿತು. ಸಂಶಿವ್ ಹೆಲ್ತ್ ಮುಂದಿನ ವಿಚಾರಣೆಯ ದಿನಾಂಕದವರೆಗೆ 'ಕ್ಯಾಲಿಕಾ ಪಿ' ಅನ್ನು ಮಾರಾಟ ಮಾಡದಂತೆ ನಿರ್ಬಂಧಿಸಿತು.

ಮ್ಯಾನ್‌ಕೈಂಡ್ ತನ್ನ ದೂರಿನಲ್ಲಿ 2007 ರಲ್ಲಿ ತಾನು ಕ್ಯಾಲ್ಸಿಯಂ ಮತ್ತು ಝಿಂಕ್‌ ಕ್ಯಾಪ್ಸುಲ್‌ಗಳನ್ನು ತಯಾರಿಸಲು ಟ್ರೇಡ್‌ಮಾರ್ಕ್ 'ಕ್ಯಾಲ್ಡಿಕೈಂಡ್‌' ಅನ್ನು ಅಳವಡಿಸಿಕೊಂಡಿರುವುದಾಗಿ ತಿಳಿಸಿತ್ತು. ಅಲ್ಲದೆ, 2017ರಲ್ಲಿ, ಮಕ್ಕಳಿಗಾಗಿ 'ಕ್ಯಾಲ್ಡಿಕೈಂಡ್-ಪಿ' ಟ್ರೇಡ್‌ಮಾರ್ಕ್ ಅಡಿಯಲ್ಲಿ 'ಕ್ಯಾಲ್ಡಿಕೈಂಡ್‌' ನ ಮತ್ತೊಂದು ರೂಪಾಂತರಿತ ಉತ್ಪನ್ನವನ್ನು ಪರಿಚಯಿಸಿದ್ದಾಗಿ ತಿಳಿಸಿತ್ತು.

ಸೆಪ್ಟೆಂಬರ್ 2024ರಲ್ಲಿ ಸಂಶಿವ್ ಹೆಲ್ತ್‌ನಿಂದ ತನ್ನ ಉತ್ಪನ್ನಗಳ ವಾಣಿಜ್ಯ ಚಿಹ್ನೆಗಳ ಉಲ್ಲಂಘನೆಯಾಗಿರುವುದು ಗಮನಕ್ಕೆ ಬಂದಿತು ಎಂದು ಮ್ಯಾನ್‌ಕೈಂಡ್ ತನ್ನ ಮನವಿಯಲ್ಲಿ ದೂರಿತ್ತು. ಈ ವೇಳೆ ನ್ಯಾಯಾಲಯವು ಎರಡೂ ಸ್ಪರ್ಧಾತ್ಮಕ ಉತ್ಪನ್ನಗಳ ತುಲನಾತ್ಮಕ ವಿಶ್ಲೇಷಣೆಯನ್ನು ನಡೆಸಿತು. ತದನಂತರ, ಸಂಶಿವ್‌ ಹೆಲ್ತ್ ಮ್ಯಾನ್‌ಕೈಂಡ್‌ ಫಾರ್ಮಾ ಸಂಸ್ಥೆಯ ಉತ್ಪನ್ನದ ರೂಪ, ವಿನ್ಯಾಸವನ್ನು ಬಳಸಿಕೊಂಡು ಅದು ಮಾರುಕಟ್ಟೆಯಲ್ಲಿ ಹೊಂದಿರುವ ವಿಶ್ವಾಸ, ನಂಬಿಕೆಯ ಆಧಾರದಲ್ಲಿ ತನ್ನ ಉತ್ಪನ್ನವನ್ನು ಮಾರಾಟ ಮಾಡಲು ಪ್ರಯತ್ನಿಸುವ ಮೂಲಕ ತಪ್ಪೆಸಗಿದೆ ಎನ್ನುವ ತೀರ್ಮಾನಕ್ಕೆ ಬಂದಿತು.

"ಹೊರನೋಟಕ್ಕೆ ಪ್ರತಿವಾದಿಗಳ ಉತ್ಪನ್ನದ ರೂಪ / ಲೇಬಲ್ / ವಿನ್ಯಾಸ / ಟ್ರೇಡ್ ಮಾರ್ಕ್‌ಗೂ ಮ್ಯಾನ್‌ಕೈಂಡ್‌ ಉತ್ಪನ್ನಕ್ಕೂ ನಡುವೆ ಯಾವುದೇ ವ್ಯತ್ಯಾಸವಿಲ್ಲ. ಪ್ರತಿವಾದಿಗಳು ಕೂಡ ಅದೇ ವ್ಯಾಪಾರದ ಜಾಲದ ಮೂಲಕ ವ್ಯವಹರಿಸುತ್ತಿದ್ದು, ಅದೇ ಗ್ರಾಹಕ ಗುಂಪನ್ನು ಗುರಿಯಾಗಿಸಿಕೊಂಡಿರುತ್ತಾರೆ. ಇದರಿಂದ ಗೊಂದಲದ ಸಾಧ್ಯತೆ ಹೆಚ್ಚು ಇದ್ದು, ಇದು ಔಷಧೋತ್ಪನ್ನಗಳಿಗೆ ಸಂಬಂಧಿಸಿರುವುದರಿಂದ ಪ್ರತಿವಾದಿಗಳನ್ನು ತಡೆಯಲು ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಳ್ಳುವುದು ಸಾರ್ವಜನಿಕರ ಹಿತಾಸಕ್ತಿಯಾಗಿರಲಿದೆ,” ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿತು. ಮುಂದಿನ ವಿಚಾರಣೆಯವರೆಗೆ ಸಂಶಿವ್‌ನ ಉತ್ಪನ್ನದ ಮಾರಾಟಕ್ಕೆ ಮಧ್ಯಂತರ ನಿರ್ಬಂಧ ವಿಧಿಸಿತು.