wikipedia and supreme court 
ಸುದ್ದಿಗಳು

ನ್ಯಾಯಾಲಯಗಳು, ನ್ಯಾಯಮಂಡಳಿಗಳು ವಿಕಿಪೀಡಿಯಾ ಮೇಲೆ ಅವಲಂಬಿತವಾಗಬಾರದು: ಸುಪ್ರೀಂ ಕೋರ್ಟ್ ಎಚ್ಚರಿಕೆ

ಆನ್ಲೈನ್ ವಿಶ್ವಕೋಶ ಎನಿಸಿಕೊಂಡಿರುವ ವಿಕಿಪೀಡಿಯಾ ಬಳಕೆದಾರರು ಸಂಪಾದಿಸುವ ಬರಹಗಳನ್ನೊಳಗೊಂಡಿರುವುದರಿಂದ ಹೆಚ್ಚು ಅಧಿಕೃತ ಮೂಲಗಳನ್ನು ಅವಲಂಬಿಸಬೇಕು ಎಂದಿತು ಪೀಠ.

Bar & Bench

ವಿಕಿಪೀಡಿಯಾದಂತಹ ಉಚಿತ ಆನ್‌ಲೈನ್‌ ಮಾಹಿತಿ ಮೂಲಗಳನ್ನು ಅವಲಂಬಿಸದಂತೆ ನ್ಯಾಯಾಲಯಗಳು ಮತ್ತು ನ್ಯಾಯನಿರ್ಣಯ ಪ್ರಾಧಿಕಾರಗಳಿಗೆ ಸುಪ್ರೀಂ ಕೋರ್ಟ್‌ ಮಂಗಳವಾರ ಎಚ್ಚರಿಕೆ ನೀಡಿದೆ.

ಆನ್‌ಲೈನ್‌ ವಿಶ್ವಕೋಶ ಎನಿಸಿಕೊಂಡಿರುವ ವಿಕಿಪೀಡಿಯಾ ಬಳಕೆದಾರರು ಸಂಪಾದಿಸುವ ಬರಹಗಳನ್ನೊಳಗೊಂಡಿರುವುದರಿಂದ ಹೆಚ್ಚು ಅಧಿಕೃತ ಮೂಲಗಳನ್ನು ಅವಲಂಬಿಸುವಂತೆ ತಮ್ಮ ವಕೀಲರುಗಳಿಗೆ ನ್ಯಾಯಲಯಗಳು ಹೇಳಬೇಕು ಎಂದು ಕೂಡ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ವಿಕ್ರಮ್ ನಾಥ್ ಅವರಿದ್ದ ಪೀಠ ಹೇಳಿತು.

ತನ್ನ ಮುಂದಿರುವ ಪ್ರಕರಣದಲ್ಲಿ ಸುಂಕ ಆಯುಕ್ತರು (ಮೇಲ್ಮನವಿ ಮತ್ತು ಮುಂಬೈ ಸುಂಕ, ಅಬಕಾರಿ ಹಾಗೂ ಸೇವಾ ತೆರಿಗೆ ಮೇಲ್ಮನವಿ ನ್ಯಾಯಮಂಡಳಿ (ಸಿಎಸ್‌ಟಿಎಟಿ) ತಮ್ಮ ಅವಲೋಕನಗಳಿಗಾಗಿ ವಿಕಿಪೀಡಿಯಾವನ್ನು ಅವಲಂಬಿಸಿವೆ ಎಂಬುದನ್ನು ಗಮನಿಸಿದ ನ್ಯಾಯಾಲಯ ಈ ಸಲಹೆ ನೀಡಿತು.

“ಜಗತ್ತಿನಾದ್ಯಂತ ಜ್ಞಾನವನ್ನು ಉಚಿತವಾಗಿ ಪಸರಿಸುತ್ತಿರುವ ವೇದಕೆಗಳನ್ನು ನಾವು ಸ್ಪಷ್ಟವಾಗಿ ಒಪ್ಪಿಕೊಳ್ಳುತ್ತೇವೆ. ಆದರೆ ಕಾನೂನು ವ್ಯಾಜ್ಯ ಪರಿಹಾರಕ್ಕಾಗಿ ಅಂತಹ ಮೂಲ ಬಳಸುವುದರ ವಿರುದ್ಧ ನಾವು ಎಚ್ಚರಿಕೆಯನ್ನು ಕೂಡ ನೀಡಬೇಕಿದೆ. ವಿಕಿಪೀಡಿಯಾ ಬಳಕೆದಾರರು ಸಂಪಾದಿಸುವ ಬರಹಗಳನ್ನೊಳಗೊಂಡಿದೆ. ಅಕಾಡೆಮಿಕ್‌ ಸತ್ಯಾಸತ್ಯತೆಯ ದೃಷ್ಟಿಯಿಂದ ಅದನ್ನು ಸಂಪೂರ್ಣವಾಗಿ ಅವಲಂಬಿಸುವಂತಿಲ್ಲ. ಹಿಂದಿನ ಸಂದರ್ಭಗಳಲ್ಲಿ ಈ ನ್ಯಾಯಾಲಯ ಗಮನಿಸಿದಂತೆ ಅದು ತಪ್ಪು ದಾರಿಗೆಳೆಯುವ ಮಾಹಿತಿಯನ್ನು ನೀಡುತ್ತಿರಬಹುದು” ಎಂದು ಪೀಠ ಆತಂಕ ವ್ಯಕ್ತಪಡಿಸಿತು.

ಈ ಹಿನ್ನೆಲೆಯಲ್ಲಿ 10 ಕಿಲೋಗ್ರಾಂಗಿಂತ ಕಡಿಮೆ ತೂಕದ ಡೆಸ್ಕ್‌ಟಾಪ್ ಕಂಪ್ಯೂಟರ್‌ಗಳನ್ನು 'ಪೋರ್ಟಬಲ್' ಎಂದು ವರ್ಗೀಕರಿಸಬೇಕು ಹಾಗೂ ಇತರ ಕಂಪ್ಯೂಟರ್‌ಗಳಿಗಿಂತ ಹೆಚ್ಚಿನ ಸುಂಕ ವಿಧಿಸಬೇಕು ಎಂಬ ಸಿಇಎಸ್‌ಟಿಎಟಿ ಆದೇಶವನ್ನು ಸುಪ್ರೀಂ ಕೋರ್ಟ್‌ ರದ್ದುಗೊಳಿಸಿತು.

ಆಮದು  ಮಾಡಿಕೊಳ್ಳಲಾದ ಕೆಲ ಕಂಪೆನಿಗಳ ಡೆಸ್ಕ್‌ಟಾಪ್‌ಗಳಿಗೆ ಅಗಾಧ ಪ್ರೋಸೆಸಿಂಗ್‌ ಯುನಿಟ್‌ಗಳಿಗೆ ವಿಧಿಸುವ ಸುಂಕಕ್ಕಿಂತಲೂ ಕಡಿಮೆ ಸುಂಕವನ್ನು ವಿಧಿಸಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ನೀಡಿದ್ದ ಆದೇಶವನ್ನು ಸಿಇಎಸ್‌ಟಿಎಟಿ ಪಶ್ಚಿಮ ವಲಯ ಪೀಠ ಎತ್ತಿ ಹಿಡಿದಿತ್ತು. ಇದನ್ನು ಪ್ರಶ್ನಿಸಿ ಕಂಪೆನಿಗಳು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದವು.