Supreme Court, Gauhati High Court, Patna High Court, Allahabad High Court
Supreme Court, Gauhati High Court, Patna High Court, Allahabad High Court  
ಸುದ್ದಿಗಳು

ನ್ಯಾಯಾಲಯ ವರ್ಸಸ್ ಬುಲ್ಡೋಜರ್: ತೆರವು ಕಾರ್ಯಾಚರಣೆಯಲ್ಲಿ ಕೋರ್ಟ್ ಮಧ್ಯಪ್ರದೇಶಿಸಿದ ಕೆಲ ಪ್ರಕರಣಗಳ ವಿವರ

Bar & Bench

ಉತ್ತರಾಖಂಡದ ಹಲ್‌ದ್ವಾನಿಯ ಬನ್‌ಭೂಲ್‌ಪುರ ಪ್ರದೇಶದಲ್ಲಿರುವ ರೈಲ್ವೆ ಭೂಮಿಯಿಂದ 4,000 ಕ್ಕೂ ಹೆಚ್ಚು ಕುಟುಂಬಗಳನ್ನು ತೆರವುಗೊಳಿಸುವಂತೆ ಉತ್ತರಾಖಂಡ ಹೈಕೋರ್ಟ್ ನೀಡಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್ ಕೆಲದಿನಗಳ ಹಿಂದಷ್ಟೇ ತಾತ್ಕಾಲಿಕ ತಡೆ ನೀಡಿತು.

ಹೀಗೆ ಮನೆ ಅಥವಾ ಸಂಸ್ಥೆಗಳನ್ನು ಕಳೆದುಕೊಂಡವರಿಗೆ ಪರಿಹಾರ ನೀಡಲು ಸಾಂವಿಧಾನಿಕ ನ್ಯಾಯಾಲಯಗಳು ಮಧ್ಯಪ್ರವೇಶಿಸಿದ್ದು ಇದೇ ಮೊದಲಲ್ಲ. ಈ ಪ್ರಕರಣಗಳಲ್ಲಿ ಅತಿಕ್ರಮಣಕಾರರೆಂದು ದೂಷಣೆಗೊಳದ ಅದೃಷ್ಟವಂಚಿತ ಜನರ ವಿರುದ್ಧ ಅಧಿಕಾರಿಗಳು ಕೈಗೊಂಡ ಕಠೋರ ಕ್ರಮಗಳನ್ನು ನ್ಯಾಯಾಲಯಗಳು ಖಂಡಿಸಿದವು. ಕಟ್ಟಡ, ಮನೆಗಳ ಧ್ವಂಸ ಅಥವಾ ತೆರವು ಕಾರ್ಯಾಚರಣೆಗೆ ಸಂಬಂಧಿಸಿದಂತೆ ನ್ಯಾಯಾಲಯಗಳು ಇತ್ತೀಚಿನ ದಿನಗಳಲ್ಲಿ ನೀಡಿದ ಪ್ರಮುಖ ತೀರ್ಪುಗಳ ಅವಲೋಕನ ಇಲ್ಲಿದೆ:

1. ಮಾನವೀಯ ʼನೆಲೆʼ

ರೈಲ್ವೆಗೆ ಸೇರಿದ ಭೂಮಿಯಲ್ಲಾಗಿರುವ ಒತ್ತುವರಿ ತೆರವುಗೊಳಿಸುವಂತೆ ಉತ್ತರಾಖಂಡ ಹೈಕೋರ್ಟ್‌ ಆದೇಶಿಸಿದ ಬಳಿಕ ಹಲ್‌ದ್ವಾನಿಯ ಬನ್‌ಫೂಲ್‌ಪುರ ನಿವಾಸಿಗಳು ಮೇಣದಬತ್ತಿ ಬೆಳಗಿಸಿ ಬೀದಿಗಿಳಿದು ಪ್ರತಿಭಟನೆ ನಡೆಸಿದ ವರದಿಗಳು ಮತ್ತು ದೃಶ್ಯಗಳು ಸಾಮಾಜಿಕ ಮಾಧ್ಯಮಗಳನ್ನು ಆವರಿಸಿಕೊಂಡವು. ರಾಜ್ಯ ಸರ್ಕಾರ ಸೂಕ್ತ ರೀತಿಯ ಕಾನೂನು ಹೋರಾಟ ನಡೆಸದ ಪರಿಣಾಮ ಉತ್ತರಾಖಂಡ ಹೈಕೋರ್ಟ್‌ ಅಂತಹ ತೀರ್ಪು ನೀಡಿತು ಎಂಬುದು ಜನರ ಆಕ್ರೋಶಕ್ಕೆ ಕಾರಣವಾದ ಅಂಶವಾಗಿತ್ತು.

ಇನ್ನೇನು ನೆಲೆ ಕಳೆದುಕೊಳ್ಳಲಿದ್ದ ಅವರೆಲ್ಲಾ ಸುಪ್ರೀಂ ಕೋರ್ಟ್‌ ಕದ ತಟ್ಟಿದರು. ಪರಿಣಾಮ ʼಪ್ರಕರಣ ಮಾನವೀಯ ಅಂಶಗಳನ್ನು ಒಳಗೊಂಡಿರುವುದರಿಂದ ಪುನರ್ವಸತಿಗೆ ಆದ್ಯತೆ ನೀಡಬೇಕುʼ ಎಂದು  ಪೀಠ ತಾಕೀತು ಮಾಡಿತು. “ಜನ 1947ರ ನಂತರ ಹರಾಜಿನಲ್ಲಿ ಖರೀದಿಸಿ, ಜಾಗದ ಒಡೆತನ ಹೊಂದಿರುವ ಈ ಪರಿಸ್ಥಿತಿಯನ್ನು ನೀವು (ಭಾರತೀಯ ರೈಲ್ವೆ) ಹೇಗೆ ಎದುರಿಸುತ್ತೀರಿ ಎಂಬುದು ನಮ್ಮನ್ನು ತೊಂದರೆಗೀಡು ಮಾಡಿದೆ. ನೀವು ಭೂಮಿ ಸ್ವಾಧೀನಪಡಿಸಿಕೊಳ್ಳಬಹುದು. ಆದರೆ 60-70 ವರ್ಷಗಳ ಕಾಲ ವಾಸಿಸುತ್ತಿದ್ದ ಜನರು ಪುನರ್ವಸತಿಯಾಗಬೇಕು. ಎಲ್ಲ ಸಮಸ್ಯೆಗೂ ಅಂತ್ಯ ಎನ್ನುವುದಿರುತ್ತದೆ. ಈಗ ಏನು ನಡೆಯುತ್ತಿದೆಯೋ ಅದಕ್ಕೆ ನಮ್ಮ ಪ್ರೋತ್ಸಾಹ ಇಲ್ಲ” ಎಂದು ಅಧಿಕಾರಿಗಳಿಗೆ ಖಂಡತುಂಡವಾಗಿ ತಿಳಿಸಿತು.

ದೇಶದಲ್ಲಿ ಯಾರೂ ಸುರಕ್ಷಿತವಾಗಿ ಇರುವುದಿಲ್ಲ

ಪೊಲೀಸ್‌ ವಶದಲ್ಲಿದ್ದ ಗ್ರಾಮಸ್ಥನೊಬ್ಬ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಗ್ರಾಮದ ಜನ ಅಸ್ಸಾಂನ ನಾಗಾಂವ್‌ ಜಿಲ್ಲೆಯ ಬಟದ್ರವಾ ಪೊಲೀಸ್‌ ಠಾಣೆಗೆ ಬೆಂಕಿ ಹಚ್ಚಿದ ಆರೋಪಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಗ್ರಾಮದ ಐವರು ಮುಸ್ಲಿಮರ ಮನೆಗಳನ್ನು ಧ್ವಂಸಗೊಳಿಸುವಂತೆ ಆದೇಶಿಸಿದ್ದರು.

ಆದರೆ ಇತ್ತೀಚೆಗೆ ಪ್ರಕರಣದ ವಿಚಾರಣೆ ನಡೆಸಿದ ಗುವಾಹಟಿ ಹೈಕೋರ್ಟ್‌ ಘಟನೆಯಲ್ಲಿ ಮನೆ ಕಳೆದುಕೊಂಡವರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಅಸ್ಸಾಂ ಸರ್ಕಾರಕ್ಕೆ ಆದೇಶಿಸಿತು.  ತನಿಖೆಯ ನೆಪದಲ್ಲಿ ಆರೋಪಿಗಳ ಮನೆ ಧ್ವಂಸಗೊಳಿಸುವ ಪ್ರವೃತ್ತಿ ಬಗ್ಗೆ ಮುಖ್ಯ ನ್ಯಾಯಮೂರ್ತಿ ಆರ್‌ ಎಂ ಛಾಯಾ ನೇತೃತ್ವದ ಪೀಠ ಕಳವಳ ವ್ಯಕ್ತಪಡಿಸಿತು.

“ಅಧಿಕಾರಿ ಪೊಲೀಸ್‌ ಇಲಾಖೆ ಮುಖ್ಯಸ್ಥರು ಎಂಬ ಒಂದೇ ಕಾರಣಕ್ಕೆ ಯಾರದೋ ಮನೆಯನ್ನು ಧ್ವಂಸಗೊಳಿಸಲಾಗದು. ಇಂತಹ ಕ್ರಮಕ್ಕೆ ಅನುಮತಿ ನೀಡಿದರೆ ದೇಶದ ಯಾರೊಬ್ಬರೂ ಸುರಕ್ಷಿತವಾಗಿ ಇರುವುದಿಲ್ಲ. ಸರ್ಚ್‌ ವಾರೆಂಟ್‌ ಹಿಡಿದು ಬುಲ್ಡೋಜರ್‌ ಪ್ರಯೋಗಿಸಿದ ಪೊಲೀಸ್‌ ಅಧಿಕಾರಿಯನ್ನು ನಾವು ಕಂಡಿಲ್ಲ”  ಎಂದು ಕುಟುಕಿತು. ನ್ಯಾಯಾಲಯದ ಮಧ್ಯಪ್ರವೇಶದಿಂದಾಗಿ ಮುಖ್ಯ ಕಾರ್ಯದರ್ಶಿ ನೇತೃತ್ವದ ಸಮಿತಿ ವತಿಯಿಂದ ತನಿಖೆ ನಡೆಸಿ, ಇದಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಅಸ್ಸಾಂ ಸರ್ಕಾರ ಮುಂದಾಯಿತು.

3. ಯಾರ ಮನೆಯನ್ನಾದರೂ ಧ್ವಂಸ ಮಾಡುವಿರಾ?

ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಬಿಹಾರದ ಆಗಮಕುವಾನ್ ಪ್ರದೇಶದಲ್ಲಿ ಮಹಿಳೆಯೊಬ್ಬರ ಮನೆಯನ್ನು ಕೆಡವಲು ಹೊರಟದ್ದಕ್ಕಾಗಿ ರಾಜ್ಯ ಪೊಲೀಸರನ್ನು ಈ ಹಿಂದೆ ಪಾಟ್ನಾ ಹೈಕೋರ್ಟ್‌ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತ್ತು.

ಮಹಿಳೆಗೆ ಯಾವುದೇ ನೋಟಿಸ್‌ ನೀಡದೆ ಸ್ಥಳೀಯ ಭೂಮಾಫಿಯಾದೊಡನೆ ಶಾಮೀಲಾಗಿ ಬುಲ್ಡೋಜರ್‌ ಬಳಸಿ ಪೊಲೀಸರು ಮನೆಯನ್ನು ಧ್ವಂಸ ಮಾಡುವ ಮೂಲ ಕಾನೂನನ್ನು ಗಾಳಿಗೆ ತೂರಿದ್ದಾರೆ ಎಂದು ಪೀಠ ಕೆಂಡಾಮಂಡಲವಾಗಿತ್ತು. “ ಏನು, ಇಲ್ಲಿಯೂ ಬುಲ್ಡೋಜರ್‌ ಚಲಿಸಲು ಆರಂಭವಾಯಿತಾ? ಯಾರ ದೂರಿನ ಮೇರೆಗೆ ನೀವು ಆ ಮನೆ ಮೇಲೆ ಬುಲ್ಡೋಜರ್‌ ಹರಿಸಿದಿರಿ? ಬುಲ್ಡೋಜರ್‌ನಿಂದ ಯಾರ ಮನೆಯನ್ನು ಬೇಕಾದರೂ ಧ್ವಂಸ ಮಾಡುಬಹುದು ಎಂದುಕೊಂಡಿದ್ದೀರಾ? ಹುಡುಗಾಟ ಮಾಡಿಕೊಂಡಿದ್ದೀರಾ?" ಎಂದು ನ್ಯಾಯಮೂರ್ತಿ ಸಂದೀಪ್ ಕುಮಾರ್ ಅವರಿದ್ದ ಪೀಠ ಅಧಿಕಾರಸ್ಥರನ್ನು ಕುಟುಕಿತ್ತು.

4.  ನಿರ್ಲಕ್ಷ್ಯಕ್ಕಾಗಿ ಧ್ವಂಸ ನಿರ್ಧಾರ

ಡೆಂಗಿ ರೋಗಿಯೊಬ್ಬರ ದೇಹಕ್ಕೆ ಪ್ಲೇಟ್‌ಲೆಟ್‌ಗಳ ಬದಲಿಗೆ ಮೋಸಂಬಿ ಜ್ಯೂಸ್ ನೀಡಿ ಆತನ ಸಾವಿಗೆ ಕಾರಣವಾದ ಆರೋಪ ಎದುರಿಸುತ್ತಿದ್ದ ಖಾಸಗಿ ಆಸ್ಪತ್ರೆಯೊಂದರ ವಿರುದ್ಧ ಅಲ್ಲಿನ ಸ್ಥಳೀಯಾಡಳಿತ ವಿಚಿತ್ರ ಎನ್ನುವಂತಹ ನಿರ್ಧಾರವನ್ನು ತೆಗೆದುಕೊಂಡಿತ್ತು. ಆಸ್ಪತ್ರೆಯ ಕಟ್ಟಡವನ್ನು ಜಪ್ತಿ ಮಾಡಿದ ನಂತರ, ಅದನ್ನು ಕೆಡವಲು ಹೊರಟಿತ್ತು.

ಆದರೆ ಆಸ್ಪತ್ರೆಗಾಗಿ ಕಟ್ಟಡವನ್ನು ಭೋಗ್ಯಕ್ಕೆ ನೀಡಿದ್ದ ಅದರ ಮಾಲಕಿ ಅಲಾಹಾಬಾದ್‌ ಹೈಕೋರ್ಟ್‌ ಮೆಟ್ಟಿಲೇರಿದರು. ವಿಚಾರಣೆ ನಡೆಸಿದ ನ್ಯಾಯಾಲಯ ಸ್ಥಳೀಯಾಡಳಿತದ ಆದೇಶಕ್ಕೆ ತಡೆ ನೀಡಿತು. ಆದೇಶ ನೀಡುವ ಮುನ್ನ ಕಟ್ಟಡ ಮಾಲೀಕರ ಆಕ್ಷೇಪಗಳನ್ನು ಪರಿಶೀಲಿಸಬೇಕು ಎಂದು ಅಧಿಕಾರಿಗಳಿಗೆ ಅದು ಬುದ್ಧಿವಾದ ಹೇಳಿತು.  ಜೊತೆಗೆ ಅರ್ಜಿದಾರರು ಎರಡು ವಾರಗಳಲ್ಲಿ ಕಟ್ಟಡದ ನಕ್ಷೆಯೊಂದಿಗೆ ಆಕ್ಷೇಪಣೆ ಸಲ್ಲಿಸಬೇಕು. ಸ್ಥಳೀಯಾಡಳಿತ ಅದನ್ನು ಆಲಿಸಿ ನಾಲ್ಕು ವಾರದೊಳಗೆ ಕಾನೂನಿನ ಪ್ರಕಾರ ಸೂಕ್ತ ಆದೇಶ ರವಾನಿಸಬೇಕು. ಕಟ್ಟಡದ ಯಾವುದೇ ಭಾಗ ನಿಯಮಗಳಿಗೆ ಅನುಗುಣವಾಗಿಲ್ಲ ಎಂದು ಕಂಡುಬಂದರೆ ಕಾನೂನಿನ ಪ್ರಕಾರ ಮುಂದುವರೆಯಲು ಸ್ಥಳೀಯಾಡಳಿತ ಸ್ವತಂತ್ರ ಎಂದು ನ್ಯಾಯಾಲಯ ಆದೇಶಿಸಿತು.

5. ನ್ಯಾಯಾಲಯದ ಆದೇಶ ಮೀರಿ…

ಉತ್ತರ ದೆಹಲಿಗೆ ಸೇರಿದ ಜಹಾಂಗೀರ್‌ಪುರಿಯಲ್ಲಿ ರಾಮನವಮಿ ವೇಳೆ ಗಲಭೆ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಗಲಭೆಯಲ್ಲಿ ತೊಡಗಿದ್ದ ಆರೋಪದ ಮೇಲೆ ಅಲ್ಲಿನ ಕೆಲವರ ಕಟ್ಟಡಗಳ ತೆರವು ಸ್ಥಳೀಯಾಡಳಿತ ಮುಂದಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ ಯಥಾಸ್ಥಿತಿ ಕಾಯ್ದುಕೊಳ್ಳಬೇಕೆಂದು ಆದೇಶಿಸಿತು.

ಇಷ್ಟಾದರೂ ಆದೇಶಕ್ಕೆ ಮಣಿಯದೆ ಕಾರ್ಯಾಚರಣೆ ಮುಂದುವರೆಯಿತು. ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಮೂರ್ತಿಗಳಾದ ಎಲ್ ನಾಗೇಶ್ವರ ರಾವ್ ಮತ್ತು ಬಿಆರ್ ಗವಾಯಿ ಅವರಿದ್ದ ಪೀಠ ಆದೇಶ ಪಾಲಿಸದೇ ಇರುವುದನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದಿತು. ಗೂಡಂಗಡಿ, ಕುರ್ಚಿ ಮತ್ತು ಮೇಜು ತೆಗೆದುಹಾಕಲು ಬುಲ್‌ಡೋಜರ್‌ ಬಳಸುವ ಅಗತ್ಯವಿದೆಯೇ ಎಂದು ಅದು ಆಶ್ವರ್ಯ ವ್ಯಕ್ತಪಡಿಸಿತು.