Supreme Court 
ಸುದ್ದಿಗಳು

ಸುಶಿಕ್ಷಿತ ಅಥವಾ ದೈವಭೀರು ಎಂಬ ಕಾರಣಕ್ಕೆ ಸಾಕ್ಷಿ ಒಳ್ಳೆಯವ ಎಂದು ನ್ಯಾಯಾಲಯಗಳು ಊಹಿಸಲಾಗದು: ಸುಪ್ರೀಂ ಕೋರ್ಟ್‌

ಭಾರತೀಯ ಸಾಕ್ಷ್ಯ ಕಾಯಿದೆಯ ಸೆಕ್ಷನ್ 8ರ ಅಡಿಯಲ್ಲಿ 'ಸಾಕ್ಷಿಯ ನಡವಳಿಕೆ'ಯು ಆತನ ಉತ್ತಮ ವ್ಯಕ್ತಿತ್ವದ ನಿರ್ಧರಣಕ್ಕೆ ಆಧಾರವಾಗುತ್ತದೆ ಎಂದು ಸುಪ್ರೀಂ ಕೋರ್ಟ್‌ ವಿವರಿಸಿತು.

Bar & Bench

ಒಬ್ಬ ಸಾಕ್ಷಿಯು ಸುಶಿಕ್ಷಿತ ಮತ್ತು ದೈವಭೀರುವಾಗಿದ್ದಾನೆ ಎಂದ ಮಾತ್ರಕ್ಕೆ ಆತನನ್ನು ಉತ್ತಮ ವ್ಯಕ್ತಿ ಎಂದು ನ್ಯಾಯಾಲಯಗಳು ಭಾವಿಸಲಾಗದು ಎಂದು ಈಚೆಗೆ ಕೊಲೆ ಪ್ರಕರಣವೊಂದರಲ್ಲಿ ವ್ಯಕ್ತಿಯ ಶಿಕ್ಷೆಯನ್ನು ರದ್ದುಗೊಳಿಸುವ ವೇಳೆ ಸುಪ್ರೀಂ ಕೋರ್ಟ್‌ ಹೇಳಿದೆ [ಹರ್ವಿಂದರ್ ಸಿಂಗ್ ಮತ್ತು ಹಿಮಾಚಲ ಪ್ರದೇಶ ಸರ್ಕಾರ ನಡುವಣ ಪ್ರಕರಣ].

ಇಂತಹ ಕಲ್ಪನೆಗಳ ಆಧಾರದಲ್ಲಿ ನ್ಯಾಯಾಲಯಗಳು ತಮ್ಮ ಅಭಿಪ್ರಾಯವನ್ನು ರೂಪಿಸಿಕೊಳ್ಳಲಾಗದು ಎಂದು ನ್ಯಾಯಮೂರ್ತಿಗಳಾದ ಎಂ ಎಂ ಸುಂದರೇಶ್‌ ಮತ್ತು ಜೆ ಬಿ ಪರ್ದಿವಾಲಾ ಅವರಿದ್ದ ಪೀಠ ತಿಳಿಸಿದೆ.

"ಒಬ್ಬ ವ್ಯಕ್ತಿ ವಿದ್ಯಾವಂತ ಮತ್ತು ದೈವಭೀರು ಎಂದ ಮಾತ್ರಕ್ಕೆ ನ್ಯಾಯಾಲಯವು ಆತ ಉತ್ತಮ ವ್ಯಕ್ತಿತ್ವದವನು ಎಂದು ತನ್ನ ಅಭಿಪ್ರಾಯ ಘೋಷಿಸಲಾಗದು, ಕೇವಲ ಈ ಅಂಶಗಳಷ್ಟೇ ವ್ಯಕ್ತಿಯ ಸಚ್ಚಾರಿತ್ರ್ಯವನ್ನು ರೂಪಿಸಲಾಗದು... ನ್ಯಾಯಾಲಯಗಳು ಅದರಲ್ಲಿಯೂ ಮೇಲ್ಮನವಿ ನ್ಯಾಯಾಲಯಗಳಾಗಿ ಕಾರ್ಯ ನಿರ್ವಹಿಸುವಂತಹ ನ್ಯಾಯಾಲಯಗಳು ವ್ಯಕ್ತಿಯೊಬ್ಬರ ಹಿನ್ನೆಲೆಯನ್ನು ಆಧರಿಸಿ ಮುಂದುವರೆಯಲಾಗದು; ಅದರಲ್ಲಿಯೂ ವಿಶೇಷವಾಗಿ ಅಂತಹ ವ್ಯಕ್ತಿಯ ನಡತೆಯು ಅನುಮಾನಗಳಿಗೆ ಕಾರಣವಾಗಿದ್ದಾಗ ಅಂತಹ ಹೆಜ್ಜೆ ಇರಿಸಲಾಗದು," ಎಂದು ಅಕ್ಟೋಬರ್ 13 ರ ತೀರ್ಪಿನಲ್ಲಿ ಪೀಠವು ಮೇಲ್ಮನವಿ ನ್ಯಾಯಾಲಯಗಳಿಗೆ ಕಿವಿ ಮಾತು ಹೇಳಿದೆ.

ಭಾರತೀಯ ಸಾಕ್ಷ್ಯ ಕಾಯಿದೆಯ ಸೆಕ್ಷನ್ 8ರ ಅಡಿಯಲ್ಲಿ 'ಸಾಕ್ಷಿಯ ನಡವಳಿಕೆ'ಯು ಆತನ ಉತ್ತಮ ವ್ಯಕ್ತಿತ್ವದ ನಿರ್ಧರಣಕ್ಕೆ ಆಧಾರವಾಗುತ್ತದೆ ಎಂದು ಸುಪ್ರೀಂ ಕೋರ್ಟ್‌ ವಿವರಿಸಿತು.

"ವ್ಯಕ್ತಿಯ ವರ್ತನೆಯು ಸಾಮಾನ್ಯ ಮಾನವನ ವರ್ತನೆಯ ನೆಲೆಗಟ್ಟಿನಿಂದ ನೋಡಿದಾಗ ಅಸಹಜವಾಗಿದೆ ಎನಿಸಿದಾಗ ಘನತೆಯ ಅಂಶವು ಹಿಂದೆ ಸರಿಯುತ್ತದೆ” ಎಂದು ಅದು ಹೇಳಿದೆ.

ಕೊಲೆ ಆರೋಪಿಯನ್ನು ಖುಲಾಸೆಗೊಳಿಸಿದ ವಿಚಾರಣಾ ನ್ಯಾಯಾಲಯದ ತೀರ್ಪನ್ನು ರದ್ದುಗೊಳಿಸಿದ ಹಿಮಾಚಲ ಪ್ರದೇಶ ಹೈಕೋರ್ಟ್ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗಿತ್ತು. ಹೈಕೋರ್ಟ್ ಆರೋಪಿಯನ್ನು ಅಪರಾಧಿ ಎಂದು ಪರಿಗಣಿಸಿ ಜೀವಾವಧಿ ಶಿಕ್ಷೆ ವಿಧಿಸಿತ್ತು. ಪ್ರಾಸಿಕ್ಯೂಷನ್‌ ಸಾಕ್ಷಿಯು ವಿದ್ಯಾವಂತ ಮತ್ತು ದೈವಬೀರು ಎಂಬುದನ್ನು ಆಧರಿಸಿ ಹೈಕೋರ್ಟ್‌ ಈ ತೀರ್ಮಾನಕ್ಕೆ ಬಂದಿತ್ತು. ಈ ವಿಧಾನವನ್ನು ಟೀಕಿಸಿರುವ ಸುಪ್ರೀಂ ಕೋರ್ಟ್‌ ಚಾರಿತ್ರ್ಯಕ್ಕೂ ಒಳ್ಳೆಯತನಕ್ಕೂ ಇರುವ ವ್ಯತ್ಯಾಸವನ್ನು ಎತ್ತಿ ತೋರಿಸಿತು.  

ಕೇವಲ ಸಾಂದರ್ಭಿಕ ಪುರಾವೆಗಳನ್ನು ಒಳಗೊಂಡಿರುವ ಪ್ರಕರಣದ ವಿಚಾರಣೆ ನಡೆಸುವಾಗ ಹೈಕೋರ್ಟ್‌ಈ ರೀತಿಯ ಧೋರಣೆ ತಾಳುವುದು ಸರಿಯಲ್ಲ. ಕೊಲೆ ಸಂಭವಿಸಿದ ನಂತರ ಹೈಕೋರ್ಟ್, ಸಾಕ್ಷಿಯ ಪುರಾವೆಗಳ ಮೇಲೆ ಕುರುಡಾಗಿ ಅವಲಂಬಿತವಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಸಂತ್ರಸ್ತ ಸಾವನ್ನಪ್ಪಿದ ಬಳಿಕ ಆರೋಪಿ ತಲೆಮರೆಸಿಕೊಂಡಿದ್ದಾನೆ ಎಂಬುದು ಆತನನ್ನು ಅಪರಾಧಿ ಎಂದು ನಿರ್ಧರಿಸುವ ಅಂಶವಾಗದು ಎಂದು ಕೂಡ ನ್ಯಾಯಾಲಯ ಹೇಳಿದೆ. ಈ ಹಿನ್ನೆಲೆಯಲ್ಲಿ ಹೈಕೋರ್ಟ್‌ ತೀರ್ಪನ್ನು ಬದಿಗೆ ಸರಿಸಿದ ನ್ಯಾಯಾಲಯ ಆರೋಪಿಯನ್ನು ದೋಷಮುಕ್ತಗೊಳಿಸಿತು. ಪ್ರಾಸಿಕ್ಯೂಷನ್‌ ತನ್ನ ಲೋಪವನ್ನು ಸಮಂಜಸ ಅನುಮಾನ ಮೀರಿ ಸಾಬೀತುಪಡಿಸಲು ವಿಫಲವಾಗಿದೆ ಎಂದು ಅದು ಹೇಳಿದೆ.