Justice Krishna S Dixit and Karnataka HC 
ಸುದ್ದಿಗಳು

ಸರ್ಕಾರಿ ಸಂಸ್ಥೆಗಳ ನಿರ್ಲಕ್ಷ್ಯ ಸಹಿಸಲ್ಲ; ಕೆಎಸ್‌ಟಿಡಿಸಿಗೆ ₹2 ಲಕ್ಷ ದಂಡ ವಿಧಿಸಿದ ಹೈಕೋರ್ಟ್‌

Bar & Bench

“ಜನರ ಹಿತಾಸಕ್ತಿಯನ್ನು ಅಪಾಯಕ್ಕೆ ಸಿಲುಕಿಸುವ ಸಾರ್ವಜನಿಕ ಸಂಸ್ಥೆಗಳ ನಿರ್ಲಕ್ಷ್ಯವನ್ನು ನ್ಯಾಯಾಲಯಗಳು ಸಹಿಸುವುದಿಲ್ಲ ಎಂಬ ಸ್ಪಷ್ಟ ಸಂದೇಶ ಎಲ್ಲರಿಗೂ ರವಾನೆಯಾಗಬೇಕು” ಎಂದು ಈಚೆಗೆ ಹೇಳಿರುವ ಕರ್ನಾಟಕ ಹೈಕೋರ್ಟ್‌, ಪ್ರವಾಸೋದ್ಯಮ ಇಲಾಖೆಯ ಕಟ್ಟಡವೊಂದರ ನವೀಕರಣ ಕಾಮಗಾರಿ ಪೂರ್ಣಗೊಳಿಸಿ ಐದು ವರ್ಷಗಳು ಕಳೆದರೂ ಗುತ್ತಿದಾರರಿಗೆ ಹಣ ಬಿಡುಗಡೆ ಮಾಡದ ಹಿನ್ನೆಲೆಯಲ್ಲಿ ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ನಿಯಮಿತಕ್ಕೆ (ಕೆಎಸ್‌ಟಿಡಿಸಿ) ₹2 ಲಕ್ಷ ದಂಡ ವಿಧಿಸಿದೆ.

ಬೆಂಗಳೂರಿನ ಪ್ರಥಮ ದರ್ಜೆ ಗುತ್ತಿಗೆದಾರ ಎಂ ಚಿರಂಜೀವಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ನೇತೃತ್ವದ ಏಕಸದಸ್ಯ ಪೀಠವು ಆದೇಶ ಮಾಡಿದೆ.

“ಸರ್ಕಾರದ ಸಂಸ್ಥೆಗೆ ಕೆಲಸ ಮಾಡಿಕೊಟ್ಟರೂ ಸೂಕ್ತ ಸಮಯಕ್ಕೆ ಹಣ ಬಿಡುಗಡೆ ಮಾಡದೆ ಗುತ್ತಿಗೆದಾರನಿಗೆ ಕಿರಿಕಿರಿ ನೀಡಲಾಗಿದೆ. ಹೀಗಾಗಿ, ದೊಡ್ಡ ಪ್ರಮಾಣದಲ್ಲಿ ದಂಡ ವಿಧಿಸಲು ಸೂಕ್ತ ಪ್ರಕರಣ ಇದಾಗಿದೆ. ಸಾರ್ವಜನಿಕ ಹಿತಾಸಕ್ತಿಯನ್ನು ಅಪಾಯದ ಸ್ಥಿತಿಗೆ ದೂಡುವಂತಹ ಸರ್ಕಾರ, ಸಂಸ್ಥೆಗಳ ಉದಾಸೀನತೆಯನ್ನು ನ್ಯಾಯಾಲಯವು ಸಹಿಸುವುದಿಲ್ಲ ಎಂಬ ಸಂದೇಶ ರವಾನೆಯಾಗಬೇಕಿದೆ” ಎಂದು ಆದೇಶದಲ್ಲಿ ಹೇಳಲಾಗಿದೆ.

ಅರ್ಜಿದಾರಿಗೆ ಬಡ್ಡಿ ಸಹಿತ ₹2 ಲಕ್ಷ ದಂಡದ ಮೊತ್ತ ಪಾವತಿಸಬೇಕು. ಇನ್ನು ಬಾಕಿ ಉಳಿಸಿಕೊಂಡಿರುವ ಗುತ್ತಿಗೆ ಕಾಮಗಾರಿ ಹಣವಾದ ₹34,85,179 ಅನ್ನು ವಾರ್ಷಿಕ ಶೇ 12ರಷ್ಟು ಬಡ್ಡಿದರಲ್ಲಿ ಪಾವತಿಸಬೇಕು. ಈ ಆದೇಶ ಪಾಲಿಸಿದ ಬಗ್ಗೆ ಆರು ವಾರದಲ್ಲಿ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್‌ಗೆ ವರದಿ ಸಲ್ಲಿಸಬೇಕು ಎಂದು ನಿಗಮಕ್ಕೆ ನಿರ್ದೇಶಿಸಿರುವ ನ್ಯಾಯಾಲಯವು ಒಂದೊಮ್ಮೆ ಹಣ ಪಾವತಿಸಲು ವಿಳಂಬ ಮಾಡಿದರೆ, ಹೆಚ್ಚುವರಿಯಾಗಿ ಶೇ 1ರಷ್ಟು ಬಡ್ಡಿ ತೆರಬೇಕಾಗುತ್ತದೆ ಎಂದು ಎಚ್ಚರಿಸಿದೆ. ದಂಡದ ಮೊತ್ತ ಮತ್ತು ಬಡ್ಡಿ ಹಣವನ್ನು ವ್ಯವಸ್ಥಾಪಕ ನಿರ್ದೇಶಕರು ಸೇರಿದಂತೆ ಲೋಪ ಎಸಗಿರುವ ಅಧಿಕಾರಿಗಳಿಂದ ವಸೂಲಿ ಮಾಡಿಕೊಳ್ಳಬಹುದು ಎಂದು ನಿಗಮಕ್ಕೆ ಪೀಠವು ಸೂಚಿಸಿದೆ.

ಪ್ರಕರಣದ ಹಿನ್ನೆಲೆ: ಪ್ರವಾಸ್ಯೋದ್ಯಮ ಇಲಾಖೆಗೆ ಸಂಬಂಧಿಸಿದ ಕಟ್ಟಡವೊಂದರ ನವೀಕರಣ ಕಾಮಗಾರಿಯನ್ನು ಕೆಎಸ್‌ಟಿಡಿಸಿಯಿಂದ ಅರ್ಜಿದಾರರು ಗುತ್ತಿಗೆ ಪಡೆದಿದ್ದರು. ಕಾಮಗಾರಿ ಪೂರ್ಣಗೊಳಿಸಿ 2017ರ ಏಪ್ರಿಲ್‌ 4ರಂದು ಕಟ್ಟಡವನ್ನು ಹಸ್ತಾಂತರಿಸಲಾಗಿತ್ತು. ಏಪ್ರಿಲ್‌ 10ರಂದು ಕಟ್ಟಡ ಉದ್ಘಾಟನೆ ಮಾಡಲಾಗಿತ್ತು. ಕಾಮಗಾರಿಯ ಬಗ್ಗೆ ಆಕ್ಷೇಪ ಇರಲಿಲ್ಲ. ಕಾಮಗಾರಿ ತೃಪ್ತಿದಾಯಕವಾಗಿರುವುದಾಗಿ ದೃಢೀಕರಣ ಪತ್ರ ಸಹ ವಿತರಿಸಲಾಗಿತ್ತು. ಆದರೆ, ಕಟ್ಟಡ ಉದ್ಘಾಟನೆಯಾಗಿ ಹಲವು ತಿಂಗಳು ಕಳೆದರೂ ಗುತ್ತಿಗೆದಾರನಿಗೆ ಹಣ ಬಿಡುಗಡೆ ಮಾಡಿರಲಿಲ್ಲ. ಇದರಿಂದ ಹಣ ಬಿಡುಗಡೆ ಮಾಡಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಅರ್ಜಿದಾರರು 2018ರ ಅಕ್ಟೋಬರ್‌ 11ರಂದು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.