Hospital COVID-19 (Representative Image) 
ಸುದ್ದಿಗಳು

ʼಬಿಹಾರ ವೈರಸ್‌ ನುಂಗಿದೆʼ ಎಂಬ ಮಿಥ್ಯೆ ತೊಡೆದುಹಾಕುವುದು ರಾಜ್ಯ ಸರ್ಕಾರಕ್ಕಿರುವ ದೊಡ್ಡ ಸವಾಲು: ಪಾಟ್ನಾ ಹೈಕೋರ್ಟ್‌

ಕೋವಿಡ್‌ ಸಮರದಲ್ಲಿ ಹೋರಾಟ ನಡೆಸುತ್ತಿರುವ ವ್ಯಕ್ತಿಗಳ ರಕ್ಷಣೆಗೆ ಮತ್ತು ಸಾಂಕ್ರಾಮಿಕ ಎದುರಿಸಲು ಬೇಕಾದ ಮೂಲಸೌಕರ್ಯ ಒದಗಿಸಲು ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಲಾದ ವಿವಿಧ ಅರ್ಜಿಗಳ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.

Bar & Bench

ಬಿಹಾರದ ಕೋವಿಡ್‌ ಪರಿಸ್ಥಿತಿಗೆ ಸಂಬಂಧಿಸಿದಂತೆ ಅಲ್ಲಿನ ಸರ್ಕಾರದ ಪ್ರತಿಕ್ರಿಯೆ ಬಯಸಿ ಸಲ್ಲಿಸಲಾದ ವಿವಿಧ ಅರ್ಜಿಗಳ ವಿಚಾರಣೆ ನಡೆಸಿದ ಪಾಟ್ನಾ ಹೈಕೋರ್ಟ್‌ ಬಿಹಾರದ ಜನತೆ ಕೋವಿಡ್‌ ಆಕ್ರಮಣ ಮುಗಿದಿದೆ ಎಂಬುದಾಗಿ ಭಾವಿಸದಂತಿದೆ ಎಂದು ಅಭಿಪ್ರಾಯಪಟ್ಟಿದೆ.

ಬಿಹಾರ ಜನರ ಮನಸ್ಥಿತಿ ಬದಲಿಸುವುದು ಮತ್ತು "ಬಿಹಾರ ಕರೋನಾ ಕೋ ಖಾ ಗಯಾ ಹೈ” (ಬಿಹಾರ ಕೊರೊನಾ ವೈರಸ್‌ ತಿಂದು ಹಾಕಿದೆ) ಎಂಬ ಸ್ಥಳೀಯ ಜನರ ಮಿಥ್ಯೆಯನ್ನು ಹೋಗಲಾಡಿಸುವುದು ಸರ್ಕಾರದ ಮುಂದಿರುವ ದೊಡ್ಡ ಸವಾಲು ಎಂದು ನ್ಯಾಯಾಲಯ ತಿಳಿಸಿದೆ.

ಕೋವಿಡ್‌ ಸಮರದಲ್ಲಿ ಹೋರಾಟ ನಡೆಸುತ್ತಿರುವ ವ್ಯಕ್ತಿಗಳ ರಕ್ಷಣೆಗೆ ಮತ್ತು ಸಾಂಕ್ರಾಮಿಕ ಎದುರಿಸಲು ಬೇಕಾದ ಮೂಲಸೌಕರ್ಯ ಒದಗಿಸಲು ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಲಾದ ವಿವಿಧ ಅರ್ಜಿಗಳ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಸಂಜಯ್ ಕರೋಲ್ ಮತ್ತು ನ್ಯಾಯಮೂರ್ತಿ ಸಂಜಯ್‌ ಕುಮಾರ್‌ ಅವರಿದ್ದ ನ್ಯಾಯಾಪೀಠ ನಡೆಸಿತು. ಇದೇ ವೇಳೆ ಅರ್ಜಿದಾರರ ಪರವಾಗಿ ವಾದ ಮಂಡಿಸಿದ ವಕೀಲರು ಸುಪ್ರೀಂಕೋರ್ಟ್‌ ಇಂಥದ್ದೇ ಪ್ರಕರಣವನ್ನು ರಾಷ್ಟ್ರಮಟ್ಟದಲ್ಲಿ ಕೈಗೆತ್ತಿಕೊಂಡಿದೆ ಎಂದರು.

2005ರ ವಿಪತ್ತು ನಿರ್ವಹಣಾ ಕಾಯಿದೆ ಮತ್ತು 1897ರ ಸಾಂಕ್ರಾಮಿಕ ರೋಗಗಳ ಕಾಯಿದೆ ಅಡಿಯಲ್ಲಿ ನಗರ ಮತ್ತು ಗ್ರಾಮೀಣ ಪ್ರದೇಶಗಳ ಜನರಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ನೀತಿಗಳು, ನಿರ್ದೇಶನಗಳು ಮತ್ತು ಕಾರ್ಯಕ್ರಮಗಳ ಬಗ್ಗೆ ಅರಿವು ಮೂಡಿಸುವ ಅಗತ್ಯವಿದೆ ಎಂದು ನ್ಯಾಯಾಲಯ ಒತ್ತಿ ಹೇಳಿತು. ಅಲ್ಲದೆ ಕನಿಷ್ಠ ಮುಖಗವಸು ಧರಿಸಬೇಕು, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಹಾಗೂ ಸಾಂಕ್ರಾಮಿಕ ರೋಗದಿಂದ ಉಂಟಾಗುವ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ಸಂದೇಶಗಳನ್ನು ತಲುಪಿಸಲು ಎಲ್ಲಾ ಸಂವಹನ ಮಾಧ್ಯಮಗಳನ್ನು ಬಳಸಿಕೊಳ್ಳಬೇಕು ಎಂದಿರುವ ಪೀಠ ಪ್ರಕರಣವನ್ನು ಡಿ. 8ಕ್ಕೆ ಮುಂದೂಡಿದೆ.