Bombay High Court, COVID-19 vaccination
Bombay High Court, COVID-19 vaccination 
ಸುದ್ದಿಗಳು

ಮನೆ ಮನೆಗೆ ತೆರಳಿ ಕೋವಿಡ್ ಲಸಿಕೆ ನೀಡುವುದು ಕಾರ್ಯಸಾಧ್ಯವಲ್ಲ ಎಂದು ಕೇಂದ್ರ ಸರ್ಕಾರ ಹೇಳಲು ಕಾರಣಗಳೇನು?

Bar & Bench

ಮನೆ ಮನೆ ಬಾಗಿಲಿಗೆ ತೆರಳಿ ಕೋವಿಡ್‌ ಲಸಿಕೆ ನೀಡುವುದು ಕಾರ್ಯಸಾಧ್ಯವಲ್ಲ ಎಂಬುದಕ್ಕೆ ಸಂಬಂಧಿಸಿದಂತೆ ಬಾಂಬೆ ಹೈಕೋರ್ಟ್‌ಗೆ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಕೇಂದ್ರ ಸರ್ಕಾರ ಐದು ಕಾರಣಗಳನ್ನು ನೀಡಿದೆ.

ಭಾರತದಲ್ಲಿ ಲಸಿಕೆ ಕಾರ್ಯಕ್ರಮಕ್ಕೆ ಸಂಬಂಧಿಸಿದ ಎಲ್ಲ ಚಟುವಟಿಕೆಯನ್ನು ರಾಷ್ಟ್ರೀಯ ತಜ್ಞರ ಸಮೂಹವು ನಿರ್ವಹಿಸುತ್ತಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯುವು ಅಫಿಡವಿಟ್‌ನಲ್ಲಿ ತಿಳಿಸಿದೆ.

ಮನೆ ಮನೆ ಬಾಗಿಲಿಗೆ ತೆರಳಿ ಲಸಿಕೆ ನೀಡುವುದು ಕಷ್ಟಸಾಧ್ಯ ಎಂಬುದಕ್ಕೆ ಸಚಿವಾಲಯವು ನೀಡಿರುವ ಐದು ಕಾರಣಗಳು ಇಂತಿವೆ:

  1. ಲಸಿಕೆ ನೀಡಿದ ನಂತರ ಪ್ರತಿಕೂಲ ಸಂದರ್ಭ (ಎಇಎಫ್‌ಐ) ನಿರ್ಮಾಣವಾಗಿ ಆರೋಗ್ಯ ಕೇಂದ್ರವನ್ನು ತಲುಪುವುದು ತಡವಾಗಬಹುದು ಮತ್ತು ಅವಶ್ಯಕತೆಗೆ ಅನುಗುಣವಾಗಿ ಸದರಿ ಪ್ರಕರಣವನ್ನು ನಿಭಾಯಿಸಲು ಕಷ್ಟವಾಗಬಹುದು.

  2. ಲಸಿಕೆ ಪಡೆದ ಕನಿಷ್ಠ 30 ನಿಮಿಷಗಳ ಕಾಲ ಲಸಿಕೆ ಪಡೆದವರು ನಿಗಾದಲ್ಲಿದ್ದಾರೆ ಎಂಬುದನ್ನು ಖಾತರಿಪಡಿಸಲು ಸವಾಲುಗಳು ಎದುರಾಗಬಹುದು.

  3. ಪ್ರತಿ ಲಸಿಕೆಯನ್ನು ನೀಡುವಾಗಲೂ ಲಸಿಕೆ ವಾಹಕವನ್ನು ಪದೇಪದೇ ತೆಗೆಯುವುದು, ಇರಿಸುವುದು ಮಾಡುವುದರಿಂದ ಕಲುಷಿತಗೊಳ್ಳುವ ಸಾಧ್ಯತೆ ಇದ್ದು, ಇದು ಶಿಫಾರಸ್ಸು ಮಾಡಿದ ತಾಪಮಾನಕ್ಕಿಂತ ಹೆಚ್ಚಿನ ವ್ಯತ್ಯಯಕ್ಕೆ ಕಾರಣವಾಗಬಹುದು. ಇದರಿಂದಾಗಿ ಲಸಿಕೆ ಪರಿಣಾಮಕಾರಿ ಸಾಮರ್ಥ್ಯದ ಮೇಲೆ ಪ್ರಭಾವ ಉಂಟಾಗಬಹುದು, ಎಇಎಫ್‌ಐ ಸಮಸ್ಯೆಗಳಿಗೆ ಕಾರಣವಾಗಬಹುದು, ಇದು ಲಸಿಕೆಗಳ ಮೇಲಿನ ವಿಶ್ವಾಸವನ್ನು ಕಡಿಮೆ ಮಾಡುವ ಸಾಧ್ಯತೆ ಇರುತ್ತದೆ.

  4. ಫಲಾನುಭವಿಗಳನ್ನು ತಲುಪಲು ಸಮಯ ಹೆಚ್ಚಾಗಬಹುದಾದ ಕಾರಣದಿಂದಾಗಿ ಲಸಿಕೆಯ ನಷ್ಟ ಹೆಚ್ಚಳವಾಗಬಹುದು.

  5. ಮನೆ ಮನೆಗೆ ತೆರಳುವ ಸಮಯದಲ್ಲಿ ದೈಹಿಕ ಅಂತರ ಮತ್ತು ಸೋಂಕು ತಡೆಗಟ್ಟುವಿಕೆ ಮತ್ತು ನಿಯಂತ್ರಣಕ್ಕಾಗಿ ಶಿಷ್ಟಾಚಾರದ ಅನುಸರಣೆ ಸಾಧ್ಯವಾಗದಿರಬಹುದು.

ಲಸಿಕೆ ನೀಡುವಾಗ ಕಡ್ಡಾಯವಾಗಿ ತುರ್ತು ನಿಗಾ ಘಟಕ ಬೇಕು ಎಂಬುದಕ್ಕೆ ಸಂಬಂಧಿಸಿದಂತೆ ಮುಖ್ಯ ನ್ಯಾಯಮೂರ್ತಿ ದೀಪಂಕರ್‌ ದತ್ತ ಮತ್ತು ನ್ಯಾಯಮೂರ್ತಿ ಜಿ ಎಸ್‌ ಕುಲಕರ್ಣಿ ಅವರಿದ್ದ ವಿಭಾಗೀಯ ಪೀಠವು ಪ್ರಶ್ನಿಸಿದಾಗ ಸಚಿವಾಲಯವು ಎಇಎಫ್‌ಐ ಘಟಿಸುವುದು ಅತಿ ವಿರಳವಾಗಿದ್ದು, ಐಸಿಯುವಿನಲ್ಲಿರುವ ಅಗತ್ಯತೆ ಬೀಳುವುದಿಲ್ಲ ಎಂದು ಹೇಳಿದೆ.