ಸುದ್ದಿಗಳು

ಕೋವಿಡ್ ನಿಯಂತ್ರಣ ಕ್ರಮ: ಐದು ಜಿಲ್ಲೆಗಳಲ್ಲಿ ನ್ಯಾಯಾಲಯ ಪ್ರವೇಶಕ್ಕೆ ವಿವಿಧ ನಿರ್ಬಂಧ ವಿಧಿಸಿದ ಕರ್ನಾಟಕ ಹೈಕೋರ್ಟ್

Bar & Bench

10,000 ಕ್ಕೂ ಹೆಚ್ಚು ಕೋವಿಡ್‌ ಪ್ರಕರಣಗಳು ಕಂಡುಬಂದಿರುವ ರಾಜ್ಯದ ಐದು ಜಿಲ್ಲೆಗಳಾದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ತುಮಕೂರು ಹಾಗೂ ಬಳ್ಳಾರಿಗಳಲ್ಲಿ ವಕೀಲರು, ದಾವೆದಾರರು, ಖುದ್ದು ಹಾಜರಾಗಬೇಕಾದ ವ್ಯಕ್ತಿಗಳು ಹಾಗೂ ಸಂದರ್ಶಕರಿಗೆ ನ್ಯಾಯಾಲಯದ ಪ್ರವೇಶ ನಿರ್ಬಂಧಿಸಿ ಕರ್ನಾಟಕ ಹೈಕೋರ್ಟ್‌ ಅಧಿಸೂಚನೆ ಹೊರಡಿಸಿದೆ.

ಅಲ್ಲದೆ ಅಧಿಸೂಚನೆ ಈ ಕೆಳಗಿನ ಅಂಶಗಳನ್ನು ತಿಳಿಸಿದೆ:

  • ರಜಾಕಾಲೀನ ನ್ಯಾಯಾಲಯಗಳಲ್ಲಿ ಇ ಫೈಲಿಂಗ್‌ ಮೂಲಕ ಮಾತ್ರ ಅರ್ಜಿ ಸಲ್ಲಿಸಬೇಕು ಮತ್ತು ವೀಡಿಯೊ ಕಾನ್ಫರೆನ್ಸ್‌ ಮೂಲಕ ಪ್ರಕರಣ ಆಲಿಸಲಾಗುವುದು.

  • ಕ್ರಿಮಿನಲ್‌ ಪ್ರಕರಣಗಳಲ್ಲಿ ಸಾಕ್ಷ್ಯ ದಾಖಲಿಸಲು ಆರೋಪಿಯ ಭೌತಿಕ ಹಾಜರಿಯನ್ನು ನಿಷೇಧಿಸಲಾಗಿದೆ.

  • ಆರೋಪಿಯ ಭೌತಿಕ ಉಪಸ್ಥಿತಿ ಬಯಸಿದ ಪ್ರಕರಣಗಳಲ್ಲಿ ಮಾತ್ರ ವಕೀಲರ ಭೌತಿಕ ಹಾಜರಾತಿಗೆ ಅನುಮತಿಸಲಾಗುತ್ತದೆ.

  • ಸಾಧ್ಯವಾದಷ್ಟು ಕಡಿಮೆ ಸಿಬ್ಬಂದಿಯನ್ನು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶರು / ಮುಖ್ಯ ನ್ಯಾಯಾಧೀಶರು ಬಳಸಿಕೊಳ್ಳಬೇಕು. ನ್ಯಾಯಾಲಯ ಇರುವ ಸ್ಥಳದಿಂದ ಹೊರಗಿನ ಪ್ರದೇಶಗಳಿಗೆ ಪ್ರಯಾಣಿಸಬೇಕಾದ ಸಿಬ್ಬಂದಿಯನ್ನು ಸೇವೆಗೆ ಬಳಸಿಕೊಳ್ಳುವಂತಿಲ್ಲ.

  • ಈ 5 ಜಿಲ್ಲೆಗಳ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶರು / ಮುಖ್ಯ ನ್ಯಾಯಾಧೀಶರು ಜಿಲ್ಲಾ ಕೇಂದ್ರ ಕಚೇರಿಯಲ್ಲಿ ವಾಸಿಸುವ ನ್ಯಾಯಾಂಗ ಅಧಿಕಾರಿಗಳಿಂದ ಮಾತ್ರ ಜಾಮೀನು ಅರ್ಜಿಗಳನ್ನು ಆಲಿಸಲು ವ್ಯವಸ್ಥೆ ಮಾಡಬೇಕು. ಮರುವಿಚಾರಣೆ ಅಗತ್ಯವಿರುವ ಎಲ್ಲಾ ಪ್ರಕರಣಗಳನ್ನು ಆಯಾ ಸ್ಥಳದ ನ್ಯಾಯಿಕವ್ಯಾಪ್ತಿ ಇರುವ ನ್ಯಾಯಾಧೀಶರು ಪರಿಗಣಿಸಬೇಕು.

  • ಎಲ್ಲಾ ಜಾಮೀನು ಅರ್ಜಿಗಳು / ಮನವಿಗಳನ್ನು ಇ-ಫೈಲಿಂಗ್ ಮೂಲಕ ಮಾತ್ರ ಸಲ್ಲಿಸಬೇಕು ಎಂದು ಅಧಿಸೂಚನೆಯಲ್ಲಿ ನಿರ್ದೇಶಿಸಲಾಗಿದೆ.

ಸಿಐಎಸ್ ತಂತ್ರಾಂಶ ಬಳಸಿ ಅಥವಾ ಸ್ಕ್ಯಾನ್ ಮಾಡಿದ ನಕಲನ್ನು ಈ ಕೆಳಗಿನ ಇಮೇಲ್‌ಗೆ ಕಳುಹಿಸುವ ಮೂಲಕ ಈ ಇ-ಫೈಲಿಂಗ್ ಮಾಡಬಹುದು ಎಂದು ಸೂಚಿಸಲಾಗಿದೆ.

ಬೆಂಗಳೂರು ನಗರ: ಸಿಟಿ ಸಿವಿಲ್ ಕೋರ್ಟ್ - ccc-blru@hck.gov.in ಸ್ಮಾಲ್‌ ಕಾಸಸ್ ನ್ಯಾಯಾಲಯಗಳು - scc-blr@hck.gov.in‌ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯಗಳು - cmmblr@hck.gov.in ಕೌಟುಂಬಿಕ ನ್ಯಾಯಾಲಯಗಳು - nyayadegula-blr@hck.gov.in

ಮೈಸೂರು - pdj-mysuru@hck.gov.in ತುಮಕೂರು - pdj-tumakuru@hck.gov.in ಬಳ್ಳಾರಿ - filingpdjballari@gmail.com ಬೆಂಗಳೂರು ಗ್ರಾಮೀಣ - pdj-blrr@hck.gov.in