Chief Justice Abhay Oka, Karnataka High Court 
ಸುದ್ದಿಗಳು

ಹೈಕೋರ್ಟ್‌ ಹಾಗೂ ಅಧೀನ ನ್ಯಾಯಾಲಯಗಳು ಹೊರಡಿಸಿರುವ ಮಧ್ಯಂತರ ಆದೇಶಗಳು ಮೇ 29ರವರೆಗೆ ವಿಸ್ತರಣೆ‌

ಯಾವುದೇ ವ್ಯಕ್ತಿ ಮಧ್ಯಂತರ ಆದೇಶವನ್ನು ತೆರೆವುಗೊಳಿಸುವ ಇಚ್ಛೆ ಹೊಂದಿದ್ದರೆ ಅವರು ಸಂಬಂಧಪಟ್ಟ ನ್ಯಾಯಾಲಯದ ಮುಂದೆ ಅರ್ಜಿ ಸಲ್ಲಿಸಬಹುದು ಎಂದು ಕರ್ನಾಟಕ ಹೈಕೋರ್ಟ್‌ ಸ್ಪಷ್ಟಪಡಿಸಿದೆ.

Bar & Bench

ಕರ್ನಾಟಕ ಹೈಕೋರ್ಟ್‌ ತಾನು, ಅಧೀನ ನ್ಯಾಯಾಲಯಗಳು ಹಾಗೂ ನ್ಯಾಯಾಧಿಕರಣಗಳು ಹೊರಡಿಸಿರುವ ಮಧ್ಯಂತರ ಆದೇಶಗಳನ್ನು ಮೇ 29ರವರೆಗೆ ವಿಸ್ತರಿಸಿ ಆದೇಶ ಹೊರಡಿಸಿದೆ.

ಮುಖ್ಯ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್‌ ಓಕಾ ನೇತೃತ್ವದ ವಿಭಾಗೀಯ ಪೀಠವು ಕಳೆದ ವರ್ಷದ ಏಪ್ರಿಲ್‌ 16ರಂದು ಮೊದಲ ಬಾರಿಗೆ ಮಧ್ಯಂತರ ಆದೇಶಗಳನ್ನು ಅವಧಿಯನ್ನು ವಿಸ್ತರಿಸಿತ್ತು. ಕಳೆದ ವರ್ಷದಿಂದ ಆಗಾಗ್ಗೆ ಈ ಆದೇಶವನ್ನು ಪರಿಷ್ಕರಿಸಲಾಗಿದೆ.

ಸಾಂಕ್ರಾಮಿಕತೆಯ ಹಿನ್ನೆಲೆಯಲ್ಲಿ ನ್ಯಾಯಾಲಯದ ಮೆಟ್ಟಿಲೇರಲಾಗದೇ ದಾವೆದಾರರಿಗೆ ಅನನುಕೂಲವಾಗಬಾರದು ಎಂಬ ಕಾರಣಕ್ಕಾಗಿ ಪೀಠವು ಮಧ್ಯಂತರ ಆದೇಶಗಳ ವಿಸ್ತರಣೆಗೆ ಸಂಬಂಧಿಸಿದಂತೆ ನಿರ್ದೇಶನಗಳನ್ನು ಹೊರಡಿಸಿದೆ.

“ಕರ್ನಾಟಕ ಹೈಕೋರ್ಟ್‌, ಎಲ್ಲಾ ಜಿಲ್ಲಾ ನ್ಯಾಯಾಲಯಗಳು, ಸಿವಿಲ್‌ ನ್ಯಾಯಾಲಯಗಳು, ಕೌಟುಂಬಿಕ ನ್ಯಾಯಾಲಯಗಳು, ಕಾರ್ಮಿಕ ನ್ಯಾಯಾಲಯಗಳು, ರಾಜ್ಯದಲ್ಲಿ ನ್ಯಾಯಾಲಯದ ಮೇಲುಸ್ತುವಾರಿ ಹೊಂದಿರುವ ಕೈಗಾರಿಕಾ ನ್ಯಾಯಾಧಿಕರಣಗಳು ಮತ್ತು ಇತರೆ ಎಲ್ಲಾ ನ್ಯಾಯಾಧಿಕರಣಗಳು ಹೊರಡಿಸಿರುವ, ಒಂದು ತಿಂಗಳಲ್ಲಿ ಮುಕ್ತಾಯವಾಗಲಿರುವ ಮಧ್ಯಂತರ ಆದೇಶಗಳನ್ನು ಮೇ 29ರವರೆಗೆ ವಿಸ್ತರಿಸಲಾಗಿದೆ” ಎಂದು ಹೈಕೋರ್ಟ್‌ ಹೇಳಿದೆ.

ತೆರವು, ಸ್ವಾಧೀನ ತಪ್ಪಿಸುವುದು ಅಥವಾ ನಿರ್ನಾಮಕ್ಕೆ ಸಂಬಂಧಿಸಿದಂತೆ ಯಾವುದೇ ಆದೇಶಗಳನ್ನು ಈಗಾಗಲೇ ಹೈಕೋರ್ಟ್, ಜಿಲ್ಲಾ ಅಥವಾ ಸಿವಿಲ್ ನ್ಯಾಯಾಲಯಗಳು ಅಂಗೀಕರಿಸಿದ್ದರೆ, ಅದು ಇಂದಿನಿಂದ ಒಂದು ತಿಂಗಳ ಅವಧಿಗೆ ಅಮಾನತಿನಲ್ಲಿರಲಿದೆ.

ಯಾವುದೇ ವ್ಯಕ್ತಿ ಮಧ್ಯಂತರ ಆದೇಶವನ್ನು ತೆರೆವುಗೊಳಿಸುವ ಇಚ್ಛೆ ಹೊಂದಿದ್ದರೆ ಅವರು ಸಂಬಂಧಪಟ್ಟ ನ್ಯಾಯಾಲಯದ ಮುಂದೆ ಅರ್ಜಿ ಸಲ್ಲಿಸಬಹುದು ಎಂದು ಕರ್ನಾಟಕ ಹೈಕೋರ್ಟ್‌ ಸ್ಪಷ್ಟಪಡಿಸಿದೆ.

ರಾಜ್ಯದಲ್ಲಿ ಕೋವಿಡ್‌ ಸೋಂಕಿತರು ಎದುರಿಸುತ್ತಿರುವ ಸಮಸ್ಯೆಗಳನ್ನು ಉಲ್ಲೇಖಿಸಿ ಇಬ್ಬರು ಬರೆದಿದ್ದ ಪತ್ರವನ್ನು ಆಧರಿಸಿ ನ್ಯಾಯಾಲಯವು ದಾಖಲಿಸಿಕೊಂಡಿದ್ದ ಸ್ವಯಂಪ್ರೇರಿತ ಪ್ರಕರಣದ ವಿಚಾರಣೆ ವೇಳೆ ಪೀಠವು ಕೆಲವು ನಿರ್ದೇಶನಗಳನ್ನು ನೀಡಿದೆ. ಜಾಮೀನು ಮತ್ತು ನಿರೀಕ್ಷಣಾ ಜಾಮೀನು ಪ್ರಕರಣಗಳ ವಿಸ್ತರಣೆಗೆ ಸಂಬಂಧಿಸಿದಂತೆ ಸರ್ಕಾರಿ ವಕೀಲರು ನಾಳೆ ನ್ಯಾಯಾಲಯದಲ್ಲಿ ವಾದಿಸಲಿದ್ದಾರೆ.

ಕೋವಿಡ್‌ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಜನರು ಎತ್ತುವ ಅಹವಾಲುಗಳನ್ನು ಆಲಿಸಿಲು ಉನ್ನತಮಟ್ಟದ ಸಮಿತಿಯನ್ನು ರಚಿಸುವ ಸಾಧ್ಯತೆಯ ಬಗ್ಗೆ ರಾಜ್ಯ ಸರ್ಕಾರವನ್ನು ನ್ಯಾಯಾಲಯವು ವಿಚಾರಣೆಯ ಸಂದರ್ಭದಲ್ಲಿ ಪ್ರಶ್ನಿಸಿತು.

ವಿಚಾರಣೆಯನ್ನು ಏಪ್ರಿಲ್‌ 17ಕ್ಕೆ ಮುಂದೂಡಲಾಗಿದೆ.