ಸುದ್ದಿಗಳು

ನೇರ ತರಗತಿ ಪುನರಾರಂಭಕ್ಕೆ ದಿನಾಂಕ ನಿಗದಿ ಕೋರಿ ಅರ್ಜಿ: ಸರ್ಕಾರಕ್ಕೆ ನಿರ್ದೇಶನ ನೀಡಲು ಕರ್ನಾಟಕ ಹೈಕೋರ್ಟ್ ನಕಾರ

Bar & Bench

ಕೋವಿಡ್‌ ಹಿನ್ನೆಲೆಯಲ್ಲಿ ನೇರ ತರಗತಿಗಳ ಪುನರಾರಂಭಕ್ಕೆ ದಿನಾಂಕ ನಿಗದಿಪಡಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಲು ಕರ್ನಾಟಕ ಹೈಕೋರ್ಟ್ ಸೋಮವಾರ ನಿರಾಕರಿಸಿದೆ.

ನ್ಯಾಯಮೂರ್ತಿಗಳಾದ ಬಿ ವಿ ನಾಗರತ್ನ ಮತ್ತು ಇ ಹೆಚ್‌ ಸಂಜೀವ್‌ ಕುಮಾರ್ ಅವರಿದ್ದ ವಿಭಾಗೀಯ ಪೀಠ ಪ್ರಕರಣದಲ್ಲಿ ವಾಸ್ತವ ಸಂಗತಿಗಳನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದೆ.

"ಕೋವಿಡ್‌-19 ಸಾಂಕ್ರಾಮಿಕ ರೋಗ ಕಡಿಮೆಯಾಗದ ಹೊರತು ಭೌತಿಕ ತರಗತಿಗಳನ್ನು ಪುನಃ ತೆರೆಯಲು ದಿನಾಂಕ ನಿಗದಿಪಡಿಸುವಂತೆ ನಾವು ರಾಜ್ಯ ಸರ್ಕಾರವನ್ನು ಕೇಳಲು ಸಾಧ್ಯವಿಲ್ಲ ... ನಾವು ವಾಸ್ತವ ಸಂಗತಿಗಳನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ ... ನಾವು ಏನನ್ನೂ ಭವಿಷ್ಯ ನುಡಿಯಲು ಆಗದು" ಎಂದು ನ್ಯಾಯಾಲಯ ಹೇಳಿದೆ.

6ರಿಂದ 8ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಬಿಸಿಯೂಟ ನೀಡುವಂತೆ ರಾಜ್ಯಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ಎಂ ರಾಧಾ ಎಂಬುವವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು. ಅರ್ಜಿದಾರರ ಪರ ಹಾಜರಾದ ಹಿರಿಯ ವಕೀಲೆ ಜಯ್ನಾ ಕೊಠಾರಿ ಅವರು ಮಕ್ಕಳ ಅನುಕೂಲಕ್ಕಾಗಿ ಶಾಲೆಗಳನ್ನು ಪುನಃ ತೆರೆಯಲು ಸರ್ಕಾರ ತಾತ್ಕಾಲಿಕ ದಿನಾಂಕಗಳನ್ನಾದರೂ ನಿಗದಿಪಡಿಸಬಹುದು ಎಂದು ವಾದ ಮಂಡಿಸಿದರು. ಆದರೆ ವಾದದಲ್ಲಿ ಯಾವುದೇ ಹುರುಳಿಲ್ಲ ಎಂಬುದನ್ನು ಗಮನಿಸಿದ ನ್ಯಾಯಾಲಯ “ನಾವು ಇಂದು ಯಾವುದೇ ನಿರ್ದೇಶನಗಳನ್ನು ನೀಡುತ್ತಿಲ್ಲ. ಸರ್ಕಾರ ತನ್ನ ನಿರ್ಧಾರವನ್ನು ಅಧಿಕೃತವಾಗಿ ಸಲ್ಲಿಸಲಿ” ಎಂದ ನ್ಯಾಯಾಲಯ ಜೂನ್ 8ಕ್ಕೆ ಮುಂದಿನ ವಿಚಾರಣೆಯನ್ನು ನಿಗದಿಪಡಿಸಿತು.

ಈ ಹಿಂದೆ (ಕೋವಿಡ್‌ ಎರಡನೆಯ ಅಲೆಗೂ ಮುನ್ನ) ಶಾಲೆಗಳ ಪುನರಾರಂಭ ವಿಚಾರದಲ್ಲಿ ರಾಜ್ಯ ಸರ್ಕಾರದ ತಾರ್ಕಿಕತೆಯನ್ನು ನ್ಯಾಯಾಲಯ ಪ್ರಶ್ನಿಸಿತ್ತು. ಶಾಲೆಗಳನ್ನು ನಡೆಸುವಂತೆ ಸೂಚಿಸುವ ಸರ್ಕಾರ ಬಿಸಿಯೂಟವನ್ನು ನೀಡಲು ಏಕೆ ಮುಂದಾಗುತ್ತಿಲ್ಲ ಎಂದು ಕಿವಿ ಹಿಂಡಿತ್ತು.