ಕೋವಿಡ್ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಅರೆ-ನ್ಯಾಯಾಂಗ ಸಂಸ್ಥೆಗಳಿಗೂ ವಿಡಿಯೊ ಕಾನ್ಫರೆನ್ಸ್ (ವಿಸಿ) ಸೌಲಭ್ಯ ಒದಗಿಸುವ ಬಗ್ಗೆ ತೀರ್ಮಾನ ತೆಗೆದುಕೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಸೂಚಿಸಿದೆ. ಈ ಉದ್ದೇಶಕ್ಕಾಗಿ ರಾಜ್ಯದಲ್ಲಿರುವ ಅರೆ ನ್ಯಾಯಾಂಗ ಸಂಸ್ಥೆಗಳನ್ನು ಗುರುತಿಸುವಂತೆ ನ್ಯಾಯಾಲಯ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತು.
"…ಎಲ್ಲಾ ಅರೆ-ನ್ಯಾಯಾಂಗ ಸಂಸ್ಥೆಗಳಿಗೆ ರಾಜ್ಯ ಸರ್ಕಾರ ವಿಸಿ ವಿಚಾರಣೆ ಮೂಲಕ ಸೂಕ್ತ ಸೌಲಭ್ಯ ಒದಗಿಸುವ ಕುರಿತು ನಿರ್ಧಾರ ತೆಗೆದುಕೊಳ್ಳುವ ಸಮಯ ಬಂದಿದೆ" ಎಂದು ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ಸೂರಜ್ ಗೋವಿಂದರಾಜ್ ಅವರಿದ್ದ ಪೀಠ ನಿರ್ದೇಶಿಸಿತು.
ಆರಂಭದಲ್ಲಿ ಬಹಳ ಮುಖ್ಯವಾಗಿ ಕಾರ್ಯ ನಿರ್ವಹಿಸುವ ಅರೆ ನ್ಯಾಯಾಂಗ ಸಂಸ್ಥೆಗಳನ್ನು ಗುರುತಿಸಿ ಅವುಗಳಿಗೆ ವಿಸಿ ಸೌಲಭ್ಯ ಒದಗಿಸಲು ಆದ್ಯತೆ ನೀಡಬಹುದು ಎಂದು ನ್ಯಾಯಾಲಯ ಹೇಳಿದೆ. ಆದರೂ ಎಲ್ಲಾ ಅರೆ ನ್ಯಾಯಾಂಗ ಸಂಸ್ಥೆಗಳು ಹಂತ ಹಂತವಾಗಿ ಅಂತಹ ಸೌಲಭ್ಯ ಪಡೆಯಬೇಕು ಎಂದು ಅದು ಸ್ಪಷ್ಟಪಡಿಸಿದೆ.
ಕೋವಿಡ್ ಮೊದಲ ಮತ್ತು ಎರಡನೇ ಅಲೆಯಿಂದಾಗಿ ರಾಜ್ಯದಲ್ಲಿ ಅರೆ ನ್ಯಾಯಾಂಗ ಸಂಸ್ಥೆಗಳು ಸಂಪೂರ್ಣ ಸ್ಥಗಿತವಾಗಿವೆ ಎಂಬುದನ್ನು ಗಮನಿಸಿದ ನ್ಯಾಯಾಲಯ ಈ ನಿರ್ದೇಶನ ನೀಡಿತು.
ಕರ್ನಾಟಕ ಭೂ ಕಂದಾಯ ಕಾಯಿದೆಯಡಿ ಸಹಾಯಕ ಆಯುಕ್ತರ ಮುಂದೆ ಕಾನೂನುಬಾಹಿರ ನಿರ್ಮಾಣ ಕುರಿತ ಪ್ರಕರಣ ಬಾಕಿ ಇರುವ ವಿಚಾರವನ್ನು ಎತ್ತಿ ತೋರಿಸುವ ಅರ್ಜಿಯನ್ನು ಎಂ ನಾಗರಾಜ್ ಅವರು ಸಲ್ಲಿಸಿದ್ದರು. ಈ ಅರ್ಜಿಯನ್ನು ಆಧರಿಸಿ ಪೀಠ ಆದೇಶ ಹೊರಡಿಸಿದೆ.
ವಿಪತ್ತು ನಿರ್ವಹಣಾ ಕಾಯಿದೆಯಲ್ಲಿ ತಿಳಿಸಲಾದ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು, ಕೋವಿಡ್ ಮೂರನೇ ಅಲೆಯಿಂದ ಉದ್ಭವಿಸಬಹುದಾದ ಯಾವುದೇ ಪರಿಸ್ಥಿತಿ ಎದುರಿಸಲು ಎಲ್ಲಾ ಸಂಸ್ಥೆಗಳು ಸನ್ನದ್ಧ ಸ್ಥಿತಿಯಲ್ಲಿರಬೇಕು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಈ ಹಿನ್ನೆಲೆಯಲ್ಲಿ ಜುಲೈ 13ರೊಳಗೆ ಎಲ್ಲಾ ಅರೆ ನ್ಯಾಯಾಂಗ ಸಂಸ್ಥೆಗಳಿಗೆ ವಿಸಿ ಸೌಲಭ್ಯ ಒದಗಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತು.
ಇದಲ್ಲದೆ, ರಾಜ್ಯದ ಯಾವುದೇ ಅರೆ-ನ್ಯಾಯಾಂಗ ಸಂಸ್ಥೆಗಳಿಗೆ ಸೂಕ್ತ ವಿಸಿ ವಿಚಾರಣಾ ಸೌಲಭ್ಯಗಳನ್ನು ಒದಗಿಸಲಾಗಿದೆಯೇ ಎಂದು ಬಹಿರಂಗಪಡಿಸುವಂತೆ ನ್ಯಾಯಾಲಯ ರಾಜ್ಯಕ್ಕೆ ನಿರ್ದೇಶನ ನೀಡಿತು. ಪ್ರಕರಣ 13 ರಂದು ಮತ್ತೆ ವಿಚಾರಣೆಗೆ ಬರಲಿದೆ.