ಯಾವುದೇ ವ್ಯಕ್ತಿಗೆ ಲಸಿಕೆ ಹಾಕಿಸಿಕೊಳ್ಳಲು ಒತ್ತಾಯ ಮಾಡಲಾಗದಿದ್ದರೂ, ವ್ಯಕ್ತಿಗಳ ಮೇಲೆ ಹೇರಿರುವ ನಿರ್ಬಂಧಗಳಿಗೆ ಸಂಬಂಧಿಸಿದಂತೆ ಸರ್ಕಾರ ಅನುಸರಿಸುತ್ತಿರುವ ಪ್ರಸ್ತುತ ಲಸಿಕೆ ನೀತಿ ಏಕಪಕ್ಷೀಯವಾಗಿಯೇನೂ ಇಲ್ಲ ಎಂದು ಸುಪ್ರೀಂ ಕೋರ್ಟ್ ಸೋಮವಾರ ತೀರ್ಪು ನೀಡಿದೆ.
ಲಭ್ಯವಿರುವ ಸಾಕ್ಷ್ಯಾಧಾರ, ಕೋವಿಡ್ ಕುರಿತಾದ ಆಸ್ಪತ್ರೆ ದಾಖಲಾತಿ ಹಾಗೂ ತಜ್ಞರ ಅಭಿಪ್ರಾಯ ಪರಿಗಣಿಸಿ ಪ್ರಸ್ತುತ ಲಸಿಕೆ ನೀತಿಯನ್ನು ಅಸಮಂಜಸ ಎಂದು ಹೇಳಲಾಗದು ಎಂಬುದಾಗಿ ನ್ಯಾಯಮೂರ್ತಿಗಳಾದ ಎಲ್ ನಾಗೇಶ್ವರ ರಾವ್ ಮತ್ತು ಬಿ ಆರ್ ಗವಾಯಿ ಅವರಿದ್ದ ಪೀಠ ತಿಳಿಸಿತು.
ಪ್ರಸ್ತುತ ಲಸಿಕೆ ನೀತಿ ಸ್ಪಷ್ಟವಾಗಿ ನಿರಂಕುಶ ರೀತಿಯಲ್ಲಿ ಇದೆ ಎಂದು ಹೇಳಲಾಗುವುದಿಲ್ಲ ಎಂಬ ಬಗ್ಗೆ ನ್ಯಾಯಾಲಯಕ್ಕೆ ತೃಪ್ತಿ ಇದೆ.
ಆದರೂ ಲಸಿಕೆಗಳನ್ನು ಕಡ್ಡಾಯವಾಗಿ ನೀಡಬಾರದು ಮತ್ತು ಸರ್ಕಾರ ಯಾವುದೇ ವ್ಯಕ್ತಿಯನ್ನು ಅವನ ಅಥವಾ ಅವಳ ಇಚ್ಛೆಗೆ ವಿರುದ್ಧವಾಗಿ ಲಸಿಕೆ ಪಡೆಯುವಂತೆ ಒತ್ತಾಯಿಸಬಾರದು. ಆದರೆ ದೈಹಿಕ ಸ್ವಾಯತ್ತತೆಯನ್ನು ನಿಯಂತ್ರಿಸಬಹುದು.
… ದೈಹಿಕ ಸಮಗ್ರತೆಗೆ ಸಂಬಂಧಿಸಿದಂತೆ (ಸಂವಿಧಾನದ) 21ನೇ ವಿಧಿಯಡಿ ರಕ್ಷಣೆ ನೀಡಲಾಗಿದೆ. ಲಸಿಕೆ ಹಾಕಿಸಿಕೊಳ್ಳಲು ಯಾರನ್ನೂ ಬಲವಂತಪಡಿಸಲಾಗುವುದಿಲ್ಲ. (ಆದರೆ) ದೈಹಿಕ ಸ್ವಾಯತ್ತತೆಯ ಭಾಗಗಳನ್ನು ಸರ್ಕಾರ ನಿಯಂತ್ರಿಸಬಹುದು.
ಕೋವಿಡ್ ಸಂಖ್ಯೆ ಕಡಿಮೆ ಇದ್ದಾಗ ಸಾರ್ವಜನಿಕ ಪ್ರದೇಶಗಳಿಗೆ ಪ್ರವೇಶಿಸಲು ವ್ಯಕ್ತಿಗಳ ಮೇಲೆ ಯಾವುದೇ ನಿರ್ಬಂಧ ಹೇರಬಾರದು. ಅಂತಹ ನಿರ್ಬಂಧಗಳು ಜಾರಿಯಲ್ಲಿದ್ದರೆ ಅವುಗಳನ್ನು ಹಿಂಪಡೆಯಬೇಕು.
ಕೋವಿಡ್ ಲಸಿಕೆಯ ಈವರೆಗಿನ ಪ್ರಾಯೋಗಿಕ ಮಾಹಿತಿಯನ್ನು ಮತ್ತು ಭವಿಷ್ಯದ ಪ್ರಾಯೋಗಿಕ ಮಾಹಿತಿಯನ್ನು ವ್ಯಕ್ತಿಗಳ ಗೌಪ್ಯತೆಯ ರಕ್ಷಣೆಗೆ ಒಳಪಟ್ಟು ವಿಳಂಬಕ್ಕೆ ಅವಕಾಶವಿಲ್ಲದೆ ಸಾರ್ವಜನಿಕ ಡೊಮೇನ್‌ನಲ್ಲಿ ಲಭ್ಯವಾಗಿಸಬೇಕು.
1. ಲಸಿಕೆಗೆ ಯಾರನ್ನೂ ಒತ್ತಾಯಿಸುವಂತಿಲ್ಲ.
2. ಲಸಿಕೆಯ ಸಾರ್ವಜನಿಕ ದುಷ್ಪರಿಣಾಮ ಅಂದಾಜಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಲಾಗಿದೆ.
3. ಪ್ರಸ್ತುತ ಕೋವಿಡ್ ಲಸಿಕೆ ನೀತಿ ಅಸಮಂಜಸ ಅಥವಾ ಏಕಪಕ್ಷೀಯವಲ್ಲ.
4. ಲಸಿಕೆಯ ಪ್ರಾಯೋಗಿಕ ಮಾಹಿತಿಯನ್ನು ಸಾರ್ವಜನಿಕ ಡೊಮೇನ್‌ನಲ್ಲಿ ಲಭ್ಯವಾಗಿಸಬೇಕು.
5. ವೈಜ್ಞಾನಿಕ ಅಥವಾ ತಜ್ಞರ ಅಭಿಪ್ರಾಯವನ್ನು ನ್ಯಾಯಾಲಯ ಊಹಿಸಲಾಗದು.
ಕೋವಿಡ್ ಲಸಿಕೆಗಳ ಕ್ಲಿನಿಕಲ್ ಪ್ರಯೋಗದ ಮಾಹಿತಿ ಬಹಿರಂಗಪಡಿಸಲು ನಿರ್ದೇಶಿಸಬೇಕು ಮತ್ತು ಲಸಿಕೆಯನ್ನು ಕಡ್ಡಾಯಗೊಳಿಸುವುದು ಅಸಾಂವಿಧಾನಿಕ ಎಂಬುದಾಗಿ ಘೋಷಿಸಬೇಕು ಎಂದು ಕೋರಿ ರಾಷ್ಟ್ರೀಯ ತಾಂತ್ರಿಕ ಸಲಹಾ ಗುಂಪಿನ ಮಾಜಿ ಸದಸ್ಯ ಡಾ. ಜೇಕಬ್ ಪುಲಿಯೆಲ್ ಅವರು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಈ ತೀರ್ಪು ನೀಡಲಾಗಿದೆ.