CLAT 2020 
ಸುದ್ದಿಗಳು

ಪೂರಕ ಪರೀಕ್ಷೆ ನಡೆಸಲು ಕೋರಿ 'ಸುಪ್ರೀಂ' ಕದತಟ್ಟಿದ ಕೋವಿಡ್ ಸೋಂಕಿತರು ಹಾಗೂ ರೋಗ ಲಕ್ಷಣವಿದ್ದ ಸಿಎಲ್ಎಟಿ ಆಕಾಂಕ್ಷಿಗಳು

ಪೂರಕ ಪರೀಕ್ಷೆ ಸಾಧ್ಯವಾಗದ ಪಕ್ಷದಲ್ಲಿ ಪರೀಕ್ಷಾ ಶುಲ್ಕ ಹಾಗೂ ಇತರೆ ಶುಲ್ಕ ಮರುಪಾವತಿ, ಒಂದು ಶೈಕ್ಷಣಿಕ ವರ್ಷ ನಷ್ಟ ಮಾಡಿದ್ದಕ್ಕೆ ಪರಿಹಾರ ಪಾವತಿಸಲು ಸಿಎಲ್‌ಎಟಿ ಮಂಡಳಿಗೆ ಸೂಚಿಸಿಸುವಂತೆ ಅರ್ಜಿದಾರರು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.

Bar & Bench

ಕೋವಿಡ್ ಸೋಂಕು ಹಾಗೂ ರೋಗ ಲಕ್ಷಣವಿದ್ದುದರಿಂದ ಸಾಮಾನ್ಯ ಕಾನೂನು ಪ್ರವೇಶಾತಿ ಪರೀಕ್ಷೆ (ಸಿಎಲ್‌ಎಟಿ-2020) ಬರೆಯದಂತೆ ತಡೆಯಲ್ಪಟ್ಟ ಮೂವರು ಅಭ್ಯರ್ಥಿಗಳು ತಮಗೆ ಪೂರಕ ಪರೀಕ್ಷೆ ನಡೆಸಲು ನಿರ್ದೇಶಿಸುವಂತೆ ಕೋರಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದಾರೆ.

ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳ ಒಕ್ಕೂಟವು ಸೆಪ್ಟೆಂಬರ್ 23ರಂದು ಹೊರಡಿಸಿರುವ ಅಧಿಸೂಚನೆಯಲ್ಲಿ ಕೋವಿಡ್ ರೋಗ ಲಕ್ಷಣವಿರುವ ಅಭ್ಯರ್ಥಿಗಳಿಗೆ ಪರೀಕ್ಷಾ ಕೇಂದ್ರದ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಲಾಗುವುದು ಎಂದು ಉಲ್ಲೇಖಿಸಿದ್ದನ್ನು ಆಧರಿಸಿ ಸಿಎಲ್‌ಎಟಿ ಆಕಾಂಕ್ಷಿಗಳು ನ್ಯಾಯಾಲಯದ ಕದ ತಟ್ಟಿದ್ದಾರೆ.

ಅಧಿಸೂಚನೆಯಲ್ಲಿ ಪ್ರಕಟಿಸಿದ್ದನ್ನು ಅನುಸರಿಸದ ಒಕ್ಕೂಟವು ಸೆಪ್ಟೆಂಬರ್ 28ರಂದು ನಡೆಸಿದ ಪರೀಕ್ಷೆಗೆ ಕೋವಿಡ್ ಸೋಂಕಿತರನ್ನು ಸೇರಿಸಲಿಲ್ಲ. ಈ ಕಾರಣಕ್ಕಾಗಿ ತಮಗೆ ಹಾಗೂ ತಮ್ಮದೇ ಸ್ಥಿತಿಯಲ್ಲಿರುವ ಇತರೆ ಅಭ್ಯರ್ಥಿಗಳಿಗೆ ಪೂರಕ ಪರೀಕ್ಷೆ ನಡೆಸಲು ಒಕ್ಕೂಟಕ್ಕೆ ಸೂಚಿಸುವಂತೆ ಆಕಾಂಕ್ಷಿಗಳು ನ್ಯಾಯಪೀಠವನ್ನು ಕೋರಿದ್ದಾರೆ.

ಇದು ಸಾಧ್ಯವಾಗದ ಪಕ್ಷದಲ್ಲಿ ಪರ್ಯಾಯವಾಗಿ, ಪರೀಕ್ಷಾ ಶುಲ್ಕ ಹಾಗೂ ಪಾವತಿಸಲ್ಪಟ ಇತರೆ ಶುಲ್ಕಗಳನ್ನು ಮರುಪಾವತಿಸುವುದರೊಂದಿಗೆ ಒಂದು ಶೈಕ್ಷಣಿಕ ವರ್ಷ ನಷ್ಟ ಉಂಟು ಮಾಡಿದ್ದಕ್ಕೆ ಪರಿಹಾರ ಪಾವತಿಸುವಂತೆಯೂ ಸಿಎಲ್‌ಎಟಿ ಆಡಳಿತ ಮಂಡಳಿಗೆ ಸೂಚಿಸುವಂತೆ ಅರ್ಜಿದಾರರು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.

ಬೆಂಗಳೂರಿನ ಭಾರತೀಯ ವಿಶ್ವವಿದ್ಯಾಲಯದ ರಾಷ್ಟ್ರೀಯ ಕಾನೂನು ಶಾಲೆಯು ವಿವಿಧ ಕೋರ್ಸ್ ಗಳ ಪ್ರವೇಶಾತಿಗೆ ಪ್ರತ್ಯೇಕ ಪ್ರವೇಶ ಪರೀಕ್ಷೆ ನಡೆಸುವ ನಿರ್ಧಾರವನ್ನು ವಜಾಗೊಳಿಸಿದ ಸುಪ್ರೀಂ ಕೋರ್ಟ್‌ ತೀರ್ಪನ್ನು ಅರ್ಜಿದಾರರು ಉಲ್ಲೇಖಿಸಿದ್ದಾರೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಾರಿಗೊಳಿಸಿರುವ ಮಾರ್ಗದರ್ಶಿ ಸೂತ್ರಗಳು (ಎಸ್‌ಒಪಿ) ಇತರೆ ನಿಯಮಗಳನ್ನು ಆಧರಿಸಿ ಸೆಪ್ಟೆಂಬರ್‌ 28ರಂದು ಪರೀಕ್ಷೆ ನಡೆಸುವಂತೆ ಸುಪ್ರೀಂ ಕೋರ್ಟ್ ಎನ್‌ಎಲ್‌ಎಸ್‌ಯುಗೆ ಆದೇಶಿಸಿತ್ತು.

ವಕೀಲರಾದ ಶಗುಫಾ ಸಲೀಂ, ವಿನಯ್ ಕುಮಾರ್ ಮತ್ತು ಸುಮಿತ್ ಚಂದೆರ್ ಅವರು ಅರ್ಜಿದಾರರನ್ನು ಪ್ರತಿನಿಧಿಸಿದ್ದಾರೆ.