Karnataka HC, Vaccination 
ಸುದ್ದಿಗಳು

ಆರೋಗ್ಯಕರವಾಗಿ ಜೀವಿಸುವ ಹಕ್ಕನ್ನು ಕೋವಿಡ್‌ ನಿಯಮ ಉಲ್ಲಂಘಿಸುವವರು ಅಡ್ಡಿಪಡಿಸುವಂತಿಲ್ಲ: ಕರ್ನಾಟಕ ಹೈಕೋರ್ಟ್

ನಟರು, ಧಾರ್ಮಿಕ ಮುಖಂಡರು ಸೇರಿದಂತೆ ಖ್ಯಾತನಾಮರು ಕೂಡ ಕೋವಿಡ್ ಮಾರ್ಗಸೂಚಿಯನ್ನು ಉಲ್ಲಂಘಿಸಿದ್ದಾರೆ ಎಂದು ಪೀಠ ತಿಳಿಸಿದೆ.

Bar & Bench

ಆರೋಗ್ಯಕರ ಜೀವನ ನಡೆಸುವ ಹಕ್ಕು ಸಂವಿಧಾನದ 21ನೇ ವಿಧಿಯ ಭಾಗವಾಗಿದ್ದು ಕೋವಿಡ್‌ ಸಂದರ್ಭದಲ್ಲಿ ಮುಖಗವಸು ತೊಡದ, ಸಾಮಾಜಿಕ ಅಂತರ ಕಾಪಾಡಿಕೊಳ್ಳದ ಕೆಲ ಮಂದಿಯಿಂದ ಈ ಹಕ್ಕನ್ನು ಅಡ್ಡಿಪಡಿಸಲಾಗದು ಎಂದು ಕರ್ನಾಟಕ ಹೈಕೋರ್ಟ್‌ ಗುರುವಾರ ಅಭಿಪ್ರಾಯಪಟ್ಟಿದೆ.

ಹೀಗಾಗಿ ಕೋವಿಡ್‌ ಮಾರ್ಗಸೂಚಿ ಉಲ್ಲಂಘನೆ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರದ ಅಂಗಸಂಸ್ಥೆಗಳಿಗೆ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ನೇತೃತ್ವದ ವಿಭಾಗೀಯ ಪೀಠ ಸೂಚಿಸಿದೆ.

ಕೋವಿಡ್‌ ನಿಯಮದ ಉಲ್ಲಂಘನೆಯ ಬಗ್ಗೆ ಸರ್ಕಾರದ ಸಂಸ್ಥೆಗಳು ಶಿಸ್ತಿನ ನಿರ್ಧಾರ ಕೈಗೊಂಡರೆ ಅದನ್ನು ಸಂವಿಧಾನದ 21ನೇ ವಿಧಿಯಡಿಯಲ್ಲಿ ಬರುವ ನಾಗರಿಕರ ಮೂಲಭೂತ ಹಕ್ಕುಗಳನ್ನು ಕಾಪಾಡುವ ಸಲುವಾಗಿ ಕೈಗೊಂಡಿರುವ ಕ್ರಮ ಎಂದು ಮನನ ಮಾಡಿಕೊಳ್ಳಬೇಕಿದೆ ಎಂದು ಈ ವೇಳೆ ಪೀಠ ಅಭಿಪ್ರಾಯಪಟ್ಟಿತು.

2020ರ ಕರ್ನಾಟಕ ಸಾಂಕ್ರಾಮಿಕ ರೋಗಗಳ (ತಿದ್ದುಪಡಿ) ಕಾಯಿದೆಯಡಿ ಹೊರಡಿಸಲಾದ ನಿಯಮ ಮತ್ತು ಆದೇಶಗಳನ್ನು ನಟರು ಧಾರ್ಮಿಕ ಮುಖಂಡರು ಸೇರಿದಂತೆ ಖ್ಯಾತನಾಮರು ಕೂಡ ಉಲ್ಲಂಘಿಸಿದ್ದಾರೆ ಎಂದು ಪೀಠ ಅಸಮಾಧಾನ ವ್ಯಕ್ತಪಡಿಸಿದ್ದು ನಿಬಂಧನೆ ಉಲ್ಲಂಘಿಸಿದ ಯಾರನ್ನೂ ಬಿಡಬಾರದು ಎಂದಿದೆ.

ಕೋವಿಡ್‌ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವಂತೆ ಕೋರಿ ಲೆಟ್ಜ್‌ಕಿಟ್‌ ಪ್ರತಿಷ್ಠಾನ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು. ಮುಷ್ಕರ ನಿರತ ಕೆಎಸ್‌ಆರ್‌ಟಿಸಿ ನೌಕರರು ಮತ್ತು ಕೆಲ ರಾಜಕಾರಣಿಗಳು ಕೋವಿಡ್‌ ನಿಯಮ ಉಲ್ಲಂಘಿಸಿರುವ ಕೆಲ ಛಾಯಾಚಿತ್ರಗಳನ್ನು ಗುರುವಾರ ನ್ಯಾಯಾಲಯಕ್ಕೆ ಸಲ್ಲಿಸಲಾಯಿತು. ಛಾಯಾಚಿತ್ರಗಳನ್ನು ರಾಜ್ಯಸರ್ಕಾರ ಗಮನಿಸಿ ಕಾನೂನಿನ ಪ್ರಕಾರ ಕಠಿಣ ಕ್ರಮ ಕೈಗೊಳ್ಳಬೇಕೆಂದು ತಿಳಿಸಿತು.

ಕಾಯಿದೆಯ ಸೆಕ್ಷನ್‌ 10 (1)ರ ಅಡಿ ಪರಿಣಾಮಕಾರಿಯಾಗಿ ದಂಡ ವಿಧಿಸಲು ಸಂಬಂಧಪಟ್ಟ ಎಲ್ಲಾ ಪೊಲೀಸ್‌ ಅಧಿಕಾರಿಗಳಿಗೆ ಮಾರ್ಗಸೂಚಿಗಳನ್ನು ನೀಡುವಂತೆ ನ್ಯಾಯಾಲಯ ಪೊಲೀಸ್‌ ಮಹಾನಿರ್ದೇಶಕರಿಗೆ ನಿರ್ದೇಶನ ನೀಡಿತು. ಕಾಯಿದೆಯ ನಿಬಂಧನೆಗಳ ಬಗ್ಗೆ ಪೊಲೀಸ್‌ ಅಧಿಕಾರಿಗಳಿಗೆ ಅರಿವು ಮೂಡಿಸಿ ಕೋವಿಡ್‌ ಉಲ್ಲಂಘನೆಗೆ ಸಂಬಂಧಿಸಿದ ಅಪರಾಧಗಳ ಬಗ್ಗೆ ಕೂಡಲೇ ಎಫ್‌ಐಆರ್‌ ದಾಖಲಿಸಬೇಕು ಎಂದು ಪೀಠ ತಿಳಿಸಿದೆ.