ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಗಳು ಹಾಗೂ ನ್ಯಾಯಾಲಯದ ಸಿಬ್ಬಂದಿಗಾಗಿ ಹೈಕೋರ್ಟ್ ನ್ಯಾಯಮೂರ್ತಿಗಳ ಅಧ್ಯಯನ ಕೊಠಡಿಯಲ್ಲಿ ಸೋಮವಾರ ಕೋವಿಡ್ ಲಸಿಕಾ ಶಿಬಿರವನ್ನು ಉದ್ಘಾಟಿಸಲಾಗಿದೆ. ಬೆಳಿಗ್ಗೆ 10 ಗಂಟೆ ವೇಳೆಗೆ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ ಓಕಾ ಮತ್ತು ಇತರೆ ನ್ಯಾಯಮೂರ್ತಿಗಳು ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಟಿ ಜಿ ಶಿವಶಂಕರೇಗೌಡ ಅವರು ನ್ಯಾಯಾಲಯದ ಅಧಿಕಾರಿಗಳ ಪೈಕಿ ಮೊದಲಿಗರಾಗಿ ಕೋವಿಡ್ ಲಸಿಕೆ ಹಾಕಿಸಿಕೊಂಡರು. ನ್ಯಾಯಮೂರ್ತಿಗಳ ಪೈಕಿ ಕೃಷ್ಣ ಎಸ್ ದೀಕ್ಷಿತ್ ಅವರು ಮೊದಲ ಕೋವಿಡ್ ಲಸಿಕೆ ಪಡೆದರು.
ಸಂಜೆ 5ರ ವರೆಗೂ ಲಸಿಕಾ ಶಿಬಿರ ನಡೆಸಲಾಗಿದ್ದು, ಒಟ್ಟಾರೆ 168 ಮಂದಿಗೆ ಲಸಿಕೆ ನೀಡಲಾಗಿದೆ ಎಂದು ಮೂಲಗಳು ಬಾರ್ ಅಂಡ್ ಬೆಂಚ್‌ಗೆ ತಿಳಿಸಿವೆ. ಹಿಂದೆ 45 ವರ್ಷ ಮತ್ತು ಅದಕ್ಕೂ ಮೇಲ್ಪಟ್ಟ ನ್ಯಾಯಿಕ ಅಧಿಕಾರಿಗಳು ಲಸಿಕೆ ಪಡೆಯುವುದನ್ನು ಜಿಲ್ಲಾ ಮಟ್ಟದಲ್ಲಿ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ಖಾತರಿಪಡಿಸಬೇಕು ಎಂದು ಸಿ ಜೆ ಓಕಾ ನಿರ್ದೇಶನ ನೀಡಿದ್ದರು. ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ನ್ಯಾಯಾಲಯವು ನಿರ್ದೇಶನಗಳನ್ನು ನೀಡಿತ್ತು.