covid vaccine, slum areas 
ಸುದ್ದಿಗಳು

ಕೊಳಚೆ ಪ್ರದೇಶ, ಕಿಕ್ಕಿರದ ಜನವಸತಿ ಪ್ರದೇಶದ ಜನರಿಗೆ ಕೋವಿಡ್‌ ಲಸಿಕೆ ಸಿಗಲಿ: ವಿಶೇಷ ಕ್ರಮವಹಿಸಲು ಹೈಕೋರ್ಟ್‌ ಸೂಚನೆ

“ಲಸಿಕೆ ಸಂಖ್ಯೆ ಕೊರತೆಯಿದ್ದರೆ, ಅದನ್ನು ಯಾರು ಪಡೆಯುತ್ತಾರೆ ಎಂಬುದರ ಬಗ್ಗೆ ಆದ್ಯತೆಗಳನ್ನು ಸರಿಯಾಗಿ ಗುರುತಿಸಬೇಕು. ನೋಂದಾಯಿತ ಜನರು ಮಾತ್ರವಷ್ಟೇ ಅದನ್ನು ಪಡೆಯುವಂತಿಲ್ಲ" ಎಂದು ನ್ಯಾಯಾಲಯ ಒತ್ತಿ ಹೇಳಿದೆ.

Bar & Bench

ಕೊಳಚೆ ಪ್ರದೇಶ ಮತ್ತು ಜನರು ಕಿಕ್ಕಿರಿದು ತುಂಬಿರುವ ಜನವಸತಿ ಪ್ರದೇಶಗಳ ಜನರು ಕೊರೊನಾ ವೈರಸ್‌ಗೆ ತುತ್ತಾಗುವ ಸಾಧ್ಯತೆ ಹೆಚ್ಚಿರುವುದರಿಂದ ಕೋವಿಡ್‌ ಲಸಿಕೆ ಅವರಿಗೆ ಸಿಗುವಂತಾಗಬೇಕು ಎಂದು ಕರ್ನಾಟಕ ಹೈಕೋರ್ಟ್‌ ಗುರುವಾರ ಹೇಳಿದೆ.

ಕಿಕ್ಕಿರಿದು ತುಂಬಿರುವ ಪ್ರದೇಶಗಳಲ್ಲಿನ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಬೇಕು. ಏಕೆಂದರೆ ಸಂವಿಧಾನದ 21ನೇ ವಿಧಿಯಡಿ ಅದು ಜೀವನದ ಹಕ್ಕಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್‌ ಓಕಾ ಮತ್ತು ನ್ಯಾಯಮೂರ್ತಿ ಅರವಿಂದ್‌ ಕುಮಾರ್‌ ಅವರಿದ್ದ ವಿಭಾಗೀಯ ಪೀಠ ಹೇಳಿದೆ.

“ಜನರಿಗೆ ಕೋವಿಡ್‌ ಲಸಿಕೆ ನೀಡುವುದು ಪ್ರಮುಖ ವಿಚಾರವಾಗಿದೆ. ದೊಡ್ಡ ಮಟ್ಟದಲ್ಲಿ ಕೊಳಚೆ ಪ್ರದೇಶಗಳು ಇದ್ದು, ಅವುಗಳಲ್ಲಿ ಕಟ್ಟಡ ನಿರ್ಮಾಣ ಕಾರ್ಮಿಕರೇ ತುಂಬಿದ್ದಾರೆ…. ಕೋವಿಡ್‌ಗೆ ಲಸಿಕೆ ಪಡೆಯುವುದು ಅಗತ್ಯವಾಗಿರುವ ಕೊಳಚೆ ಪ್ರದೇಶಗಳಲ್ಲಿ ನೆಲೆಸಿರುವ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ರಾಜ್ಯ ಸರ್ಕಾರ ವಿಶೇಷ ಪ್ರಯತ್ನ ಮಾಡಬೇಕೆ ಎನ್ನುವ ಪ್ರಶ್ನೆ ಎದ್ದಿದೆ. ಬಹುಶಃ ಹೀಗೆ ಮಾಡುವ ಮೂಲಕ ಕೋವಿಡ್‌ ವ್ಯಾಪಿಸುವುದನ್ನು ನಿಯಂತ್ರಿಸಬಹುದು” ಎಂದು ಪೀಠವು ಆದೇಶದಲ್ಲಿ ಹೇಳಿದೆ.

ರಾಜ್ಯದಲ್ಲಿ ಕೋವಿಡ್‌ ರೋಗಿಗಳು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಎರಡು ಪತ್ರಗಳನ್ನು ಸ್ವೀಕರಿಸಿದ ಬಳಿಕ ನ್ಯಾಯಾಲಯವು ಸ್ವಯಂಪ್ರೇರಿತವಾಗಿ ಅರ್ಜಿ ದಾಖಲಿಸಿಕೊಂಡು ವಿಚಾರಣೆಯನ್ನು ಆರಂಭಿಸಿತ್ತು. ಕೋವಿಡ್‌ ಲಸಿಕೆಯು ಕೊಳಚೆ ಪ್ರದೇಶ ಮತ್ತು ಜನರು ಕಿಕ್ಕಿರಿದು ತುಂಬಿರುವ ಪ್ರದೇಶಗಳಿಗೆ ತಲುಪುವುದನ್ನು ಖಾತರಿಪಡಿಸಬೇಕು ಎಂದು ಇಂದಿನ ವಿಚಾರಣೆಯ ಸಂದರ್ಭದಲ್ಲಿ ಪೀಠವು ಹೇಳಿತು.

ಜನರಿಗೆ ಲಸಿಕೆ ನೀಡುವುದು ಎರಡು ಅಂಶಗಳಿಗೆ ಒಳಪಟ್ಟಿರುತ್ತದೆ, ಒಂದು, ಲಸಿಕೆಯ ಲಭ್ಯತೆ ಮತ್ತು ಎರಡನೆಯದು ಜನಸಂಖ್ಯೆಯ ಪ್ರಮಾಣ ಎಂದು ವಿಚಾರಣೆಯ ವೇಳೆ ಹೆಚ್ಚುವರಿ ಅಡ್ವೊಕೇಟ್ ಜನರಲ್ (ಎಎಜಿ) ಧ್ಯಾನ್ ಚಿನಪ್ಪ ನ್ಯಾಯಾಲಯಕ್ಕೆ ತಿಳಿಸಿದರು.