COVID-19 vaccine
COVID-19 vaccine 
ಸುದ್ದಿಗಳು

ಕೋವಿಡ್ ಲಸಿಕೆಗಳ ಸುರಕ್ಷತೆ, ಪರಿಣಾಮ ಕುರಿತು ಮಾಹಿತಿ ಕೋರಿ ಬಾಂಬೆ ಹೈಕೋರ್ಟ್‌ಗೆ ಅರ್ಜಿ

Bar & Bench

ಕೋವಿಡ್‌-19 ಲಸಿಕೆಗಳನ್ನು ವಿತರಿಸುವ ಸೆರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ) ಮತ್ತು ಭಾರತ್ ಬಯೋಟೆಕ್ ಇಂಟರ್‌ನ್ಯಾಷನಲ್ (ಬಿಬಿಐ) ಸಲ್ಲಿಸಿರುವ ಮಾಹಿತಿ ಒದಗಿಸುವಂತೆ ಭಾರತೀಯ ಪ್ರಧಾನ ಔಷಧ ನಿಯಂತ್ರಕಕ್ಕೆ (ಡಿಸಿಜಿಐ) ನಿರ್ದೇಶನ ನೀಡಬೇಕು ಎಂದು ಕೋರಿ ಬಾಂಬೆ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ. ಆರ್‌ಟಿಐ ಕಾರ್ಯಕರ್ತ ಮತ್ತು ಪತ್ರಕರ್ತ ಸಾಕೇತ್ ಗೋಖಲೆ ಅವರು ಈ ಮನವಿ ಸಲ್ಲಿಸಿದ್ದಾರೆ. ಇದರಿಂದ ಸಂವಿಧಾನದ 21ನೇ ವಿಧಿಯಲ್ಲಿ ತಿಳಿಸಲಾದ ʼಅರಿವಿನ ಹಕ್ಕಿನʼ ಉಲ್ಲಂಘನೆಯಾಗಿದ್ದು ನ್ಯಾಯಾಲಯ ಮಧ್ಯಪ್ರವೇಶಿಸಬೇಕು ಎಂದು ಕೋರಿದ್ದಾರೆ.

ಕೋವಿಡ್‌-19 ಲಸಿಕೆಗಳಾದ ʼಕೋವಿಶೀಲ್ಡ್ʼಮತ್ತು ʼಕೋವಾಕ್ಸಿನ್ ಗಳ ಸುರಕ್ಷತೆ, ಪರಿಣಾಮ ಮತ್ತಿತರ ವಿಷಯಗಳ ಕುರಿತಾಗಿ ಎಸ್‌ಐಐ ಹಾಗೂ ಬಿಬಿಐ ಸಲ್ಲಿಸಿರುವ ಮಾಹಿತಿಯನ್ನು ಕೋರಿ ಗೋಖಲೆ ಜನವರಿ 4ರಂದು ಡಿಸಿಜಿಐಗೆ ಮಾಹಿತಿ ಹಕ್ಕು (ಆರ್‌ಟಿಐ) ಅರ್ಜಿ ಸಲ್ಲಿಸಿದ್ದರು. ಜೀವ ಮತ್ತು ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ವಿಚಾರಗಳಾದರೆ ವಿನಂತಿ ಮಾಡಿದ 48 ಗಂಟೆ ಒಳಗೆ ಮಾಹಿತಿ ಒದಗಿಸಬೇಕು ಎಂದು ತಿಳಿಸುವ ಮಾಹಿತಿ ಹಕ್ಕು ಕಾಯಿದೆಯ ಸೆಕ್ಷನ್‌ 7ರ ಅಡಿಯಲ್ಲಿ ಅರ್ಜಿ ಸಲ್ಲಿಸಿದರೂ ಪ್ರತಿಕ್ರಿಯೆ ದೊರೆತಿಲ್ಲ ಎಂದು ಅರ್ಜಿದಾರರು ದೂರಿದ್ದಾರೆ.

ಜೀವ ಮತ್ತು ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ಮಾಹಿತಿಯನ್ನು ಏಕೆ ಕೋರುತ್ತಿರುವುದಾಗಿ ಸ್ಪಷ್ಟಪಡಿಸಿರುವ ಗೋಖಲೆ, “ಸರ್ಕಾರ ಶೀಘ್ರದಲ್ಲಿಯೇ ಮೊದಲ ಹಂತದ ಕೋವಿಡ್‌ ಲಸಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಿದೆ. ಆದ್ದರಿಂದ ಸಾರ್ವಜನಿಕ ಕ್ಷೇತ್ರದಲ್ಲಿ ಈ ಮಾಹಿತಿ ಲಭ್ಯವಾಗುವಂತೆ ಮಾಡುವುದು ಹೆಚ್ಚು ಸೂಕ್ತ ಎಂದು ಅಭಿಪ್ರಾಯಪಟ್ಟಿದ್ದರು. ಅವರ ಅರ್ಜಿಗೆ ಡಿಜಿಸಿಐನಿಂದ ಯಾವುದೇ ಪ್ರತಿಕ್ರಿಯೆ ದೊರೆಯದ ಹಿನ್ನಲೆಯಲ್ಲಿ ಗೋಖಲೆ ಹೈಕೋರ್ಟ್‌ ಮೊರೆ ಹೋಗಿದ್ದಾರೆ.

"ಭಾರತದಲ್ಲಿ ಕೋವಿಡ್ -19 ಲಸಿಕೆ ಪ್ರಕ್ರಿಯೆಯನ್ನು ಹಂತ ಹಂತವಾಗಿ ರೂಪಿಸಲಾಗುತ್ತಿದೆ... ಆದ್ದರಿಂದ, ಭಾರತ್ ಬಯೋಟೆಕ್‌ನ ʼಕೋವಾಕ್ಸಿನ್ʼನ (ಇದನ್ನು ಇನ್ನೂ ಕ್ಲಿನಿಕಲ್ ಹಂತದಲ್ಲಿ ನಿರ್ವಹಿಸಲಾಗುತ್ತಿದೆ) ಸುರಕ್ಷತೆ ಮತ್ತು ಪರಿಣಾಮಕಾರಿತ್ವದ ಮಾಹಿತಿಯ ಕೊರತೆ ಉಂಟಾಗಿದ್ದು ಇದರಿಂದ ಸಾರ್ವಜನಿಕ ವಲಯದಲ್ಲಿ ವಾದಯೋಗ್ಯವಾಗಿ ಮೊದಲನೇ ಲಸಿಕೆ ಪಡೆದವರಿಗೆ ಜೀವಭೀತಿ ಉಂಟುಮಾಡುತ್ತಿದೆ. ಅಲ್ಲದೆ ಅರ್ಜಿದಾರರನ್ನೂ ಒಳಗೊಂಡಂತೆ ಒಟ್ಟಾರೆ ಸಾರ್ವಜನಿಕರ ಜೀವದ ಮೇಲೆ ಪರಿಣಾಮ ಬೀರುತ್ತದೆ…” ಇತ್ಯಾದಿ ವಿವರ ಅರ್ಜಿಯಲ್ಲಿದೆ.

ಕೊವಾಕ್ಸಿನ್‌ನ ಕ್ಲಿನಿಕಲ್ ಪ್ರಯೋಗಗಳ ಸುರಕ್ಷತೆ ಮತ್ತು ಪರಿಣಾಮದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಮಾಹಿತಿ ಅಲಭ್ಯತೆಯಿಂದಾಗಿ ಎರಡು ಅಪಾಯಗಳು ಉಂಟಾಗುತ್ತವೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ. ಅವುಗಳೆಂದರೆ
(1) ಲಸಿಕೆ ತೆಗೆದುಕೊಂಡು ಅದರ ಪರಿಣಾಮ ಸಹಿಸಿಕೊಳ್ಳಿ ಅಥವಾ
(2 ) ಲಸಿಕೆ ತೆಗೆದುಕೊಳ್ಳದೇ ಕೋವಿಡ್‌ ಸೋಂಕಿಗೆ ತುತ್ತಾಗಿ

ಇನ್ನೂ ಪ್ರಾಯೋಗಿಕ ಹಂತದಲ್ಲಿರುವ ಲಸಿಕೆಗಳ ಬಗ್ಗೆ ಮಾಹಿತಿ ಒದಗಿಸದೇ ಅದನ್ನು ಅನುಮೋದಿಸಿರುವುದರಿಂದ ಉತ್ತಮ ಪ್ರತಿಕ್ರಿಯೆ ನೀಡುವ ಮತ್ತು ಅಂತಿಮ ಲಸಿಕೆಯನ್ನು ಸುರಕ್ಷಿತವಾಗಿಡಲು ಸಹಾಯ ಮಾಡುವ ಸ್ವತಂತ್ರ ತಜ್ಞರಿಂದ ಪರಿಶೀಲನೆ ಮಾಡುವುದು ಸಾಧ್ಯವಾಗುವುದಿಲ್ಲ ಎಂದು ಅರ್ಜಿಯಲ್ಲಿ ಆತಂಕ ವ್ಯಕ್ತಪಡಿಸಲಾಗಿದೆ.