ಸುದ್ದಿಗಳು

[ಕೋವಿಡ್‌ ಸುದ್ದಿ ಸಂಗ್ರಹ] ಕೊರೊನಾ ಸಮಸ್ಯೆಗಳ ಬಗ್ಗೆ ದೇಶದ ನ್ಯಾಯಾಲಯಗಳು ನಿರ್ವಹಿಸಿದ ಪ್ರಕರಣಗಳ ವಿವರ

ಕೊರೊನಾ ಸೋಂಕು ಸೃಷ್ಟಿಸಿರುವ ಸಮಸ್ಯೆಗಳ ಕುರಿತು ದೇಶದ ವಿವಿಧ ನ್ಯಾಯಾಲಯಗಳಲ್ಲಿ ವಿಭಿನ್ನ ಮನವಿಗಳು ಸಲ್ಲಿಕೆಯಾಗಿದ್ದು, ಕೆಲವು ಕಡೆ ನ್ಯಾಯಾಲಯಗಳೇ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿವೆ. ಈ ಕುರಿತ ಮಾಹಿತಿ

Bar & Bench

ದೇಶದ ವಿವಿಧ ಹೈಕೋರ್ಟ್‌ಗಳು ಕೊರೊನಾ ಸೋಂಕು ಸೃಷ್ಟಿಸಿರುವ ತಲ್ಲಣದಿಂದ ಜನ ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳಿಗೆ ಕಿವಿಯಾಗುವ ಪ್ರಯತ್ನ ಮಾಡುತ್ತಿವೆ. ವಿಚಾರಣೆಗಳನ್ನು ನಡೆಸುವ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಕಿವಿ ಹಿಂಡುವ ಕೆಲಸವನ್ನು ನಿರಂತರವಾಗಿ ನಡೆಸಿವೆ. ದೇಶದ ವಿವಿಧ ಹೈಕೋರ್ಟ್‌ಗಳು ಕೊರೊನಾ ಪರಿಸ್ಥಿತಿಯ ಕುರಿತು ಏನೇನು ಹೇಳಿವೆ ಎಂಬುದರ ಸಂಕ್ಷಿಪ್ತ ನೋಟ ಇಲ್ಲಿದೆ.

ಹಸಿವು ನಿವಾರಣಾ ಕೇಂದ್ರ, ಪಡಿತರ ಪುನರಾರಂಭ ಕೋರಿ ಅರ್ಜಿ: ಎಎಪಿ ಸರ್ಕಾರದ ಪ್ರತಿಕ್ರಿಯೆ ಕೇಳಿದ ದೆಹಲಿ ಹೈಕೋರ್ಟ್

ಕೋವಿಡ್‌ ಎರಡನೇ ಅಲೆ ಹಿನ್ನೆಲೆಯಲ್ಲಿ ಹಸಿವು ನಿವಾರಣಾ ಕೇಂದ್ರ, ಪಡಿತರ ವಿತರಣೆ ಪೂರೈಸಲು ನಿರ್ದೇಶಿಸುವಂತೆ ಕೋರಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್‌ ಶನಿವಾರ ಪ್ರತಿಕ್ರಿಯೆ ಕೇಳಿ ಎಎಪಿ ಸರ್ಕಾರಕ್ಕೆ ನೋಟಿಸ್‌ ನೀಡಿದೆ. ವಿಳಂಬವಾದರೆ ಹಸಿವಿಗೆ ಕಾರಣವಾಗಬೇಕಾಗುತ್ತದೆ ಮತ್ತು ಅನ್ಯಾಯ ಎಸಗಿದಂತಾಗುತ್ತದೆ ಎಂದು ʼದೆಹಲಿ ರೋಜಿ-ರೋಟಿ ಅಧಿಕಾರ್‌ ಅಭಿಯಾನ್‌ʼ ಸಂಘಟನೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಡಿ ಎನ್ ಪಟೇಲ್ ಮತ್ತು ನ್ಯಾಯಮೂರ್ತಿ ಜಸ್ಮೀತ್ ಸಿಂಗ್ ಅವರ ವಿಭಾಗೀಯ ಪೀಠದಲ್ಲಿ ನಡೆಯಿತು.

ಅರ್ಜಿದಾರರ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಸಂಜಯ್ ಪಾರಿಖ್ ಅವರು ನ್ಯಾಯಾಲಯದಿಂದ "ತುರ್ತು ಪರಿಹಾರ" ಕೋರಿ ಏಪ್ರಿಲ್ 26 ರಂದು ವಿಚಾರಣೆ ಕೈಗೆತ್ತಿಕೊಳ್ಳುವಂತೆ ವಿನಂತಿಸಿದರು. ಆದಾಗ್ಯೂ ನ್ಯಾಯಾಲಯ ಮೇ 13ಕ್ಕೆ ಪ್ರಕರಣದ ವಿಚಾರಣೆ ನಿಗದಿಪಡಿಸಿತು. ಪಡಿತರ ಪಡೆಯಲು ಆಧಾರ್‌ ಕಡ್ಡಾಯಗೊಳಿಸಿದ್ದನ್ನು ಪ್ರಶ್ನಿಸಿ 2017ರಲ್ಲಿ ಸಲ್ಲಿಸಲಾಗಿದ್ದ ರಿಟ್‌ ಅರ್ಜಿಯ ಒಂದು ಭಾಗ ಈ ಅರ್ಜಿಯಾಗಿದೆ.

ಸೂಕ್ತ ರೀತಿಯಲ್ಲಿ ಮುಖಗವಸು ತೊಡದವರನ್ನು ಮಾಸ್ಕ್‌ ರಹಿತರೆಂದೇ ಪರಿಗಣಿಸಿ ಶಿಕ್ಷೆ: ಪಂಜಾಬ್‌- ಹರಿಯಾಣ ಹೈಕೋರ್ಟ್‌ ಎಚ್ಚರಿಕೆ

ಬಾಯಿ ಮತ್ತು ಮೂಗನ್ನು ಮುಚ್ಚುವಂತೆ ಸೂಕ್ತ ರೀತಿಯಲ್ಲಿ ಮುಖಗವಸು ಧರಿಸದ ವ್ಯಕ್ತಿಗಳನ್ನು ಮಾಸ್ಕ್‌ ರಹಿತ ವ್ಯಕ್ತಿಗಳಂತೆಯೇ ಪರಿಗಣಿಸಿ ಶಿಕ್ಷಿಸಲಾಗುವುದು ಎಂದು ಪಂಜಾಬ್‌ ಮತ್ತು ಹರಿಯಾಣ ಹೈಕೋರ್ಟ್‌ ಶುಕ್ರವಾರ ಎಚ್ಚರಿಸಿದೆ. ಅಲ್ಲದೆ ಮುಖಗವಸಿಗೆ ಸಂಬಂಧಿಸಿದ ನಿಯಮಗಳನ್ನು ಜನಸಾಮಾನ್ಯರು ಪಾಲಿಸುತ್ತಿದ್ದಾರೆಯೇ ಎಂಬುದರ ಬಗ್ಗೆ ನಿಗಾ ವಹಿಸಲು ಪುರಸಭೆ, ಆರೋಗ್ಯಾಧಿಕಾರಿಗಳನ್ನು ನಿಯೋಜಿಸುವಂತೆ ಅದು ಪಂಜಾಬ್‌ ಮತ್ತು ಹರಿಯಾಣ ರಾಜ್ಯ ಸರ್ಕಾರಗಳೆರಡಕ್ಕೂ ನಿರ್ದೇಶನ ನೀಡಿದೆ.

ಕೋವಿಡ್‌ ಪರಿಸ್ಥಿತಿ ಕುರಿತು ಸಲ್ಲಿಸಲಾದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ರಾಜನ್ ಗುಪ್ತಾ ಮತ್ತು ಕರಮ್‌ಜಿತ್ ಸಿಂಗ್ ಅವರಿದ್ದ ಪೀಠ ತಮ್ಮ ನೌಕರರು ಮುಖಗವಸುಗಳನ್ನು ಸರಿಯಾಗಿ ಧರಿಸುವ ಕುರಿತಂತೆ ಸಾರ್ವಜನಿಕ ಮತ್ತು ಖಾಸಗಿ ಸಂಸ್ಥೆಗಳ ಮುಖ್ಯಸ್ಥರು ಅರಿವು ಮೂಡಿಸಬೇಕೆಂದು ಸೂಚಿಸಿದೆ. ಪ್ರತಿ ಜಿಲ್ಲೆಯಲ್ಲಿ ನಿತ್ಯವೂ ನಡೆಯುತ್ತಿರುವ ಕೋವಿಡ್‌ ಸಂಬಂಧಿ ಬೆಳವಣಿಗೆಗಳ ಕುರಿತು ಅಫಿಡವಿಟ್‌ ಸಲ್ಲಿಸುವಂತೆಯೂ ಅದು ಎರಡೂ ರಾಜ್ಯಗಳಿಗೆ ತಿಳಿಸಿದೆ.

ಚುನಾವಣಾ ಆಯೋಗದ ಕೋವಿಡ್‌ ಮಾರ್ಗಸೂಚಿ ಕಟ್ಟುನಿಟ್ಟಾಗಿ ಪಾಲಿಸುವಂತೆ ಜನತೆ ಹಾಗೂ ರಾಜಕೀಯ ಪಕ್ಷಗಳಿಗೆ ಸೂಚಿಸಿದ ಕಲ್ಕತ್ತ ಹೈಕೋರ್ಟ್‌

ಪಶ್ಚಿಮ ಬಂಗಾಳದಲ್ಲಿ ಇನ್ನು ಎರಡು ಹಂತಗಳ ವಿಧಾನಸಭಾ ಚುನಾವಣೆ ಮತದಾನ ಬಾಕಿ ಇರುವಂತೆ ಕಲ್ಕತ್ತಾ ಹೈಕೋರ್ಟ್‌ ಶುಕ್ರವಾರ ʼಚುನಾವಣಾ ಆಯೋಗ ಹೊರಡಿಸಿರುವ ಕೋವಿಡ್‌ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಜನತೆ ಹಾಗೂ ರಾಜಕೀಯ ಪಕ್ಷಗಳಿಗೆ ಸೂಚಿಸಿದೆ. ಚುನಾವಣಾ ಸಮಾವೇಶದಂತಹ ಸಂದರ್ಭಗಳಲ್ಲಿ ಕೋವಿಡ್‌ ನಿಯಮಗಳನ್ನು ಪಾಲಿಸದೇ ಇರುವುದಕ್ಕೆ ಮುಖ್ಯ ನ್ಯಾಯಮೂರ್ತಿ ತೊಟ್ಟತಿಲ್ ಬಿ ರಾಧಾಕೃಷ್ಣನ್ ಮತ್ತು ನ್ಯಾಯಮೂರ್ತಿ ಅರಿಜಿತ್ ಬ್ಯಾನರ್ಜಿ ಅವರಿದ್ದ ಪೀಠ ಕಳವಳ ವ್ಯಕ್ತಪಡಿಸಿತು.

ಸಾರ್ವಜನಿಕರ ವರ್ತನೆಗೆ ಸಂಬಂಧಿಸಿದಂತೆ ಕೇಂದ್ರ ಚುನಾವಣಾ ಆಯೋಗ ವಿಧಿಸಿರುವ ನಿಯಮಾವಳಿಗಳನ್ನು ಜನ ಕಟ್ಟುನಿಟ್ಟಾಗಿ ಪಾಲಿಸಬೇಕು ಮತ್ತು ಅದಕ್ಕೆ ಬದ್ಧವಾಗಿರಬೇಕು. ಅಲ್ಲದೆ ಮಾಸ್ಕ್‌ ಧರಿಸುವಿಕೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ಇತ್ಯಾದಿ ನಿರ್ಬಂಧಗಳನ್ನು ಪಾಲಿಸುವುದು ಮತ್ತು ಜಾರಿಗೆ ತರುವುದು ಸಕ್ಷಮ ಅಧಿಕಾರಿಗಳ ವ್ಯಾಪ್ತಿಗೆ ಬರುತ್ತದೆ ಎಂದು ನ್ಯಾಯಾಲಯ ಹೇಳಿದೆ. ಚುನಾವಣಾ ಆಯೋಗದ ನಿರ್ದೇಶನಗಳನ್ನು ಪಾಲಿಸದೆ ಇಲಾಖೆಗಳು ಅಥವಾ ಆಡಳಿತ ಸಂಸ್ಥೆಗಳಿಗೆ ಬೇರೆ ಮಾರ್ಗವಿಲ್ಲ. ಇದನ್ನು ಕಡ್ಡಾಯ ಆಜ್ಞೆಯ ಭಾಗವಾಗಿ ಪರಿಗಣಿಸಬೇಕು…” ಎಂದು ಕೂಡ ಅದು ತಿಳಿಸಿದೆ. ಪ್ರಕರಣದ ವಿಚಾರಣೆ ಸೋಮವಾರಕ್ಕೆ ನಿಗದಿಯಾಗಿದೆ.