ದೇಶದ ವಿವಿಧ ಹೈಕೋರ್ಟ್‌ಗಳು ಕೊರೊನಾ ಸೋಂಕು ಸೃಷ್ಟಿಸಿರುವ ತಲ್ಲಣದಿಂದ ಜನ ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳಿಗೆ ಕಿವಿಯಾಗುವ ಪ್ರಯತ್ನ ಮಾಡುತ್ತಿವೆ. ವಿಚಾರಣೆಗಳನ್ನು ನಡೆಸುವ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಕಿವಿ ಹಿಂಡುವ ಕೆಲಸವನ್ನು ನಿರಂತರವಾಗಿ ನಡೆಸಿವೆ. ಕೊರೊನಾ ಪರಿಸ್ಥಿತಿಯ ಕುರಿತು ಇಂದು ನಡೆದ ಪ್ರಮುಖ ಪ್ರಕರಣಗಳ ವಿಚಾರಣೆಯ ಕುರಿತ ಸಂಕ್ಷಿಪ್ತ ನೋಟ ಇಲ್ಲಿದೆ.
ಕೋವಿಡ್‌ಗೆ ಸಂಬಂಧಿಸಿದಂತೆ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿದ್ದ ಪ್ರಕರಣದ ವಿಚಾರಣೆ ನಡೆಸುತ್ತಿರುವ ಸುಪ್ರೀಂಕೋರ್ಟ್ ಪ್ರಕರಣಗಳಿಗೆ ಸಂಬಂಧಿಸಿರದ ಆ ಕ್ಷಣದ ಅಭಿಪ್ರಾಯಗಳನ್ನು ವ್ಯಕ್ತಪಡಿಸುವುದನ್ನು ನ್ಯಾಯಾಂಗ ಅಧಿಕಾರಿಗಳು ತಪ್ಪಿಸಬೇಕು ಎಂದು ಸಲಹೆ ನೀಡಿದೆ. “ಹೈಕೋರ್ಟ್‌ಗಳು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ದೃತಿಗೆಡಿಸುವಂತಹ ಹೇಳಿಕೆಗಳನ್ನು ನೀಡುತ್ತಿವೆ” ಎಂದು ಕೇಂದ್ರ ಸರ್ಕಾರದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಆಕ್ಷೇಪ ವ್ಯಕ್ತಪಡಿಸಿದರು.
ಆಗ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ತ್ರಿಸದಸ್ಯ ಪೀಠ “ವಾದ ಮಂಡನೆ ವೇಳೆ ನ್ಯಾಯಮೂರ್ತಿಗಳು ವಕೀಲರಿಂದ ವಿಷಯಗಳನ್ನು ಹೆಕ್ಕುವ ಸಲುವಾಗಿ ಹೇಳಿಕೆಗಳನ್ನು ನೀಡುತ್ತಿರುತ್ತಾರೆ. ಹಾಗೆ ಹೇಳುವುದು ಅಂತಿಮ ಆದೇಶವಲ್ಲ. ನ್ಯಾಯಾಲಯ ನೀಡುವ ಪ್ರತಿಯೊಂದು ಆದೇಶವೂ ಸಾಮಾಜಿಕ ಮಾಧ್ಯಮದ ಭಾಗವಾಗುತ್ತಿದೆ. ಆದರೆ ಇದು ಅಂತಿಮ ತೀರ್ಪಲ್ಲ ಎಂದು ಜನರು ಅರ್ಥಮಾಡಿಕೊಳ್ಳಬೇಕು ಎಂದು ಮಾತ್ರ ನಾವು ನಿರೀಕ್ಷಿಸಲು ಸಾಧ್ಯ” ಎಂದಿತು.
ದೆಹಲಿಗೆ 490 ಮೆ.ಟನ್ ಆಮ್ಲಜನಕ ಒದಗಿಸುವುದನ್ನು ಖಾತರಿಪಡಿಸುವಂತೆ ಕೇಂದ್ರ ಸರ್ಕಾರಕ್ಕೆ ದೆಹಲಿ ಹೈಕೋರ್ಟ್ ಶನಿವಾರ ತಾಕೀತು ಮಾಡಿದೆ. ನ್ಯಾಯಮೂರ್ತಿಗಳಾದ ವಿಪಿನ್ ಸಾಂಘಿ ಮತ್ತು ರೇಖಾ ಪಲ್ಲಿ ಅವರಿದ್ದ ವಿಭಾಗೀಯ ಪೀಠ ಒಂದು ವೇಳೆ ಆದೇಶ ಪಾಲಿಸದಿದ್ದರೆ ನ್ಯಾಯಾಂಗ ನಿಂದನೆ ಕ್ರಮಗಳನ್ನು ಎದುರಿಸಬೇಕಾದೀತು ಎಂದು ಎಚ್ಚರಿಸಿದೆ. ಅಲ್ಲದೆ ಒಂದು ವೇಳೆ ಆದೇಶ ಪಾಲಿಸಲಾಗದಿದ್ದರೆ ಮುಂದಿನ ವಿಚಾರಣೆ ವೇಳೆಗೆ ಸಂಬಂಧಪಟ್ಟ ಅಧಿಕಾರಿಗಳು ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚಿಸಿದೆ.
ಕೋವಿಡ್ ನಿರ್ವಹಣೆಗೆ ಸಂಬಂಧಿಸಿದ ಅರ್ಜಿಗಳ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿತ್ತು. ದೆಹಲಿ ಕೈಗಾರಿಕಾ ರಾಜ್ಯವಲ್ಲವಾದ್ದರಿಂದ ಅಲ್ಲಿ ಆಮ್ಲಜನಕ ಸಂಗ್ರಹಿಸುವ ಕ್ರಯೋಜೆನಿಕ್ ಟ್ಯಾಂಕರ್‌ಗಳಿಲ್ಲ ಎಂಬುದನ್ನು ಪೀಠ ಗಮನಿಸಿತು. ಒಂದು ಹಂತದಲ್ಲಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಚೇತನ್ ಶರ್ಮಾ ಅವರು ಮಧ್ಯಪ್ರವೇಶಿಸಲು ಯತ್ನಿಸಿದಾಗ “ಮುಳುಗಿ ಹೋಗುತ್ತಿದ್ದೇವೆ. ಈಗೇನಿದ್ದರೂ ಗಂಭೀರವಾಗಬೇಕು. ಇನ್ನು ಸಾಕು ಮಾಡಿ. ಇದನ್ನು ಮಾಡಬೇಡಿ, ಅದನ್ನು ಮಾಡಬೇಡಿ ಎಂದು ನಮಗೆ ಹೇಳುವ ಹೊಸ ಬಗೆಯ ವಾದವನ್ನು ಹೂಡಬೇಡಿ” ಎಂದು ಪೀಠ ಅಸಮಾಧಾನ ವ್ಯಕ್ತಪಡಿಸಿತು. ಮೇ 6ರಂದು ಪ್ರಕರಣದ ಮುಂದಿನ ವಿಚಾರಣೆ ನಡೆಯಲಿದೆ.
ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ಪ್ರಜಾಪ್ರಭುತ್ವದ ನಾಲ್ಕನೇ ಆಧಾರ ಸ್ತಂಭ ಎನಿಸಿದ ಮಾಧ್ಯಮಗಳು, ಅಸಾಧಾರಣ ಮತ್ತು ಶ್ಲಾಘನೀಯ ಕೆಲಸ ಮಾಡಿವೆ ಎಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ತಿಳಿಸಿದೆ. ತುರ್ತು ಸಹಾಯ ಬೇಕಿದ್ದ ಜನರನ್ನು ತಲುಪುವಲ್ಲಿ ಸಾಮಾಜಿಕ ಮಾಧ್ಯಮಗಳು ಕೂಡ ಉತ್ತಮ ಕೆಲಸ ಮಾಡುತ್ತಿವೆ. ಗೊತ್ತಿರುವ ಗೊತ್ತಿಲ್ಲದ ಅನೇಕ ಮಂದಿಗೆ ನೆರವಾಗುತ್ತಿವೆ ಎಂದು ಮೆಚ್ಚುಗೆ ಸೂಚಿಸಿದೆ.
ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ಪ್ರಜಾಪ್ರಭುತ್ವದ ನಾಲ್ಕನೇ ಆಧಾರ ಸ್ತಂಭ ಎನಿಸಿದ ಮಾಧ್ಯಮಗಳು, ಅಸಾಧಾರಣ ಮತ್ತು ಶ್ಲಾಘನೀಯ ಕೆಲಸ ಮಾಡಿವೆ ಎಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ತಿಳಿಸಿದೆ. ತುರ್ತು ಸಹಾಯ ಬೇಕಿದ್ದ ಜನರನ್ನು ತಲುಪುವಲ್ಲಿ ಸಾಮಾಜಿಕ ಮಾಧ್ಯಮಗಳು ಕೂಡ ಉತ್ತಮ ಕೆಲಸ ಮಾಡುತ್ತಿವೆ. ಗೊತ್ತಿರುವ ಗೊತ್ತಿಲ್ಲದ ಅನೇಕ ಮಂದಿಗೆ ನೆರವಾಗುತ್ತಿವೆ ಎಂದು ಮೆಚ್ಚುಗೆ ಸೂಚಿಸಿದೆ.
ಸುಪ್ರೀಂಕೋರ್ಟ್‌ನ ಮೂವರು ಅಡ್ವೊಕೇಟ್ ಆನ್ ರೆಕಾರ್ಡ್ ವಕೀಲರು ಗುರುವಾರ ಮಹಾಮಾರಿ ಕೋವಿಡ್‌ಗೆ ಬಲಿಯಾಗಿದ್ದಾರೆ. ವಕೀಲರುಗಳಾದ ಇಮ್ತಿಯಾಜ್ ಅಹ್ಮದ್, ಬಿ ರಮಣಮೂರ್ತಿ, ರಿಷಿ ಜೈನ್ ರೋಗದಿಂದ ನಿಧನರಾದ ದುರ್ದೈವಿಗಳು.
ಕೊರೊನಾ ಸೋಂಕು ಇದುವರೆಗೆ ಸುಪ್ರೀಂಕೋರ್ಟ್‌ನ ಮಾಜಿ ಅಟಾರ್ನಿ ಜನರಲ್ ಮತ್ತು ಸಾಲಿಸಿಟರ್‌ಜನರಲ್ ಸೋಲಿ ಸೊರಾಬ್ಜಿ, ಹಿರಿಯ ನ್ಯಾಯವಾದಿಗಳಾದ ವಿ ಶೇಖರ್, ಅನಿಪ್ ಸಚ್ತೆ, ನ್ಯಾಯವಾದಿಗಳಾದ ಕೇಶವ್ ಮೋಹನ್ ಹಾಗೂ ಸಚಿನ್ ದಾಸ್ ಅವರ ಜೀವಗಳನ್ನು ಆಹುತಿ ಪಡೆದಿದೆ. ಕೋವಿಡ್ ಸೋಂಕು ತಗುಲಿತ್ತು ಎಂದು ದೃಢಪಡದ ಪ್ರಕರಣವೊಂದರಲ್ಲಿ ಮತ್ತೊಬ್ವ ಹಿರಿಯ ಅಡ್ವೊಕೇಟ್ ಆನ್ ರೆಕಾರ್ಡ್ ಎಟಿಎಂ ಸಂಪತ್ ಅವರು ಅಸುನೀಗಿದ್ದಾರೆ.